ರಾಜ್ಯಾದ್ಯಂತ ತೀವ್ರಗೊಂಡ ಸಿಎಎ ಪ್ರತಿಭಟನೆ: ಬೆಂಗಳೂರಿನಲ್ಲಿ ಇತಿಹಾಸತಜ್ಞ ರಾಮಚಂದ್ರ ಗುಹಾ ಬಂಧನ 

ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ತೀವ್ರವಾಗಿದ್ದು ಗುರುವಾರ ಬೆಂಗಳೂರಿನಲ್ಲಿ ಖ್ಯಾತ ಇತಿಹಾಸತಜ್ಞ ರಾಮಚಂದ್ರ ಗುಹಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. 
ರಾಮಚಂದ್ರ ಗುಹಾ ಪ್ರತಿಭಟನೆ
ರಾಮಚಂದ್ರ ಗುಹಾ ಪ್ರತಿಭಟನೆ

ಬೆಂಗಳೂರು: ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ತೀವ್ರವಾಗಿದ್ದು ಗುರುವಾರ ಬೆಂಗಳೂರಿನಲ್ಲಿ ಖ್ಯಾತ ಇತಿಹಾಸತಜ್ಞ ರಾಮಚಂದ್ರ ಗುಹಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. 


ಶಾಂತಿ, ಸುವ್ಯವಸ್ಥೆ ಕಾಪಾಡಲು ಕರ್ನಾಟಕದಲ್ಲಿ ಡಿಸೆಂಬರ್ 21ರವರೆಗೆ ಸೆಕ್ಷನ್ 144 ಜಾರಿ ಮಾಡಲಾಗಿದ್ದು, ಇವುಗಳನ್ನು ಧಿಕ್ಕರಿಸಿ ಇಂದು ಬೆಂಗಳೂರಿನ ಟೌನ್ ಹಾಲ್ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಇತಿಹಾಸತಜ್ಞ ರಾಮಚಂದ್ರ ಗುಹಾ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.


ಸೆಕ್ಷನ್ 144 ಜಾರಿ ಮಾಡಿ ಯಾವುದೇ ಅಹಿತಕರ ಘಟನೆ ನಡೆಯದಂತೆ ರಾಜ್ಯಾದ್ಯಂತ ಗೃಹ ಇಲಾಖೆ ತೀವ್ರ ಕಟ್ಟೆಚ್ಚರ ಘೋಷಿಸಿ ಡಿಸೆಂಬರ್ 21ರವರೆಗೆ ಬಂದ್ ಮತ್ತು ಪ್ರತಿಭಟನಾ ಮೆರವಣಿಗೆಗೆ ನಿಷೇಧ ಹೇರಿದೆ. ಇದರ ನಡುವೆ ಪ್ರತಿಭಟನೆ ನಡೆಸುತ್ತಿದ್ದವರನ್ನು ಪೊಲೀಸರು ಬಂಧಿಸುತ್ತಿದ್ದಾರೆ. ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದ ಬಳಿ ಸೇರಿದ್ದ ಸುಮಾರು 20ರಿಂದ 25 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಟೌನ್ ಹಾಲ್ ಹತ್ತಿರವಿದ್ದ ಸುಮಾರು 15 ಜನರನ್ನು ಬಂಧಿಸಲಾಗಿದೆ. 


ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಪ್ರತಿಭಟನಾಕಾರರು ನಾವು ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದರೂ ಪೊಲೀಸರು ನಮ್ಮನ್ನು ಬಂಧಿಸಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಬಂಧನ ಸಂದರ್ಭದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ಮಧ್ಯೆ ತೀವ್ರ ಮಾತಿನ ಚಕಮಕಿ ನಡೆಯಿತು, 


ಈ ಸಂದರ್ಭದಲ್ಲಿ ಪ್ರತಿಭಟನಾಕಾರರಿಗೆ ಅರ್ಥಮಾಡಿಸಲು ಪ್ರಯತ್ನಿಸಿದ ಪೊಲೀಸರು, ಸೆಕ್ಷನ್ 144 ಜಾರಿಯಲ್ಲಿರುವಾಗ ಶಾಂತಿಯುತ ಪ್ರತಿಭಟನೆ ಕೂಡ ಮಾಡುವ ಹಾಗಿಲ್ಲ, 5ಕ್ಕಿಂತ ಹೆಚ್ಚು ಮಂದಿ ಒಂದೆಡೆ ಸೇರುವುದಕ್ಕೆ ಅವಕಾಶವಿಲ್ಲ, ಮೆರವಣಿಗೆ ನಿಷೇಧಿಸಲಾಗಿದೆ ಎಂದರು.


ಬೆಂಗಳೂರಿನ ಟೌನ್ ಹಾಲ್ ಹತ್ತಿರ ತೀವ್ರ ಅವ್ಯವಸ್ಥೆ ಉಂಟಾಗಿದೆ. ಸ್ನೇಹಿತೆಗಾಗಿ ಕಾಯುತ್ತಿದ್ದ ಹುಡಿಗಿಯೊಬ್ಬಳನ್ನು ಸಹ ಪೊಲೀಸರು ಬಸ್ಸಿನಲ್ಲಿ ಕರೆದೊಯ್ದಿದ್ದಾರೆ. 


ಕಲಬುರಗಿ ಬಂದ್ ಗೆ ಕರೆ ನೀಡಿದ್ದರೂ ಸಾಮಾನ್ಯ ಜನಜೀವನ ಎಂದಿನಂತೆ ಸಾಗಿದೆ. ಡಿಜಿಟಲ್ ಮಾಧ್ಯಮಗಳ ಮೂಲಕ ಕೋಮುದ್ವೇಷ ಹರಡಲು ಯತ್ನಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಪೊಲೀಸರಿಗೆ ನೊಟೀಸ್ ಜಾರಿ ಮಾಡಿದ್ದಾರೆ. 


ಸೋಷಿಯಲ್ ಮೀಡಿಯಾಗಳಲ್ಲಿ ಸುಳ್ಳು, ದ್ವೇಷದ ಸುದ್ದಿ ಹಬ್ಬಿಸಿದರೆ ಆಡ್ಮಿನ್ ಮೇಲೆ ಎಫ್ ಐಆರ್ ದಾಖಲಿಸಲಾಗುವುದು. ಗಡಿಭಾಗಗಳಿಂದ ಕೋಮುದಳ್ಳುರಿ ಹಬ್ಬುವ ವಿಷಯಗಳನ್ನು ಸ್ವೀಕರಿಸಿದವರನ್ನು ಕೂಡ ಬಂಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. 


ಶಿವಮೊಗ್ಗದಲ್ಲಿ ಇಲ್ಲಿಯವರೆಗೆ ಪರಿಸ್ಥಿತಿ ಶಾಂತಿಯುತವಾಗಿದ್ದು ಪ್ರತಿಭಟನಾಕಾರರು ಅಪರಾಹ್ನ ಪ್ರತಿಭಟನೆ ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ. 

ಹೊಸಪೇಟೆಯಲ್ಲಿ ಪ್ರತಿಭಟನಾಕಾರರ ಬಂಧನ: ಹೊಸಪೇಟೆ ನಗರದಲ್ಲಿ ಎನ್ಆರ್ ಸಿ ಮತ್ತು ಸಿಎಎ ಮಸೂದೆ ಜಾರಿಗೊಳಿಸದಂತೆ ಸಿಐಟಿಯು ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಹೆಚ್ಚುವರಿ ಎಸ್ಪಿ ಲಾವಣ್ಯ ನೇತೃತ್ವದಲ್ಲಿ ಪ್ರತಿಭಟನಾಕಾರರ ಬಂಧಿಸಲಾಗಿದೆ. ಜಿಲ್ಲೆಯಾದ್ಯಂತ ಸೆಕ್ಷನ್ 144 ಜಾರಿಗೊಳಿಸಿ ಬಳ್ಳಾರಿ ಎಸ್ಪಿ ಸಿ.ಕೆ.ಬಾಬು ಆದೇಶ ಹೊರಡಿಸಿದ್ದಾರೆ. 

ದೆಹಲಿ, ಕರ್ನಾಟಕ, ಬಿಹಾರ ಮತ್ತು ತಮಿಳು ನಾಡುಗಳಲ್ಲಿ ಪ್ರತಿಟನೆ ತೀವ್ರವಾಗಿದ್ದು ಹಲವು ನಾಯಕರು, ವಿವಿಧ ಸಂಘಟನೆಗಳ ಸದಸ್ಯರು ಮತ್ತು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ.


ಯೋಗೇಂದ್ರ ಯಾದವ್ ಬಂಧನ: ದೆಹಲಿಯಲ್ಲಿ ಸ್ವರಾಜ್ಯ ಅಭಿಯಾನ ಮುಖ್ಯಸ್ಥ ಯೋಗೇಂದ್ರ ಯಾದವ್ ಅವರನ್ನು ಪ್ರತಿಭಟನಾ ಮೆರವಣಿಗೆ ಸಾಗುತ್ತಿದ್ದ ವೇಳೆ ಕಂಪು ಕೋಟೆ ಬಳಿ ಪೊಲೀಸರು ಇಂದು ಬಂಧಿಸಿದ್ದಾರೆ.
 


ದೆಹಲಿ, ಕರ್ನಾಟಕ, ಬಿಹಾರ ಮತ್ತು ತಮಿಳು ನಾಡುಗಳಲ್ಲಿ ಪ್ರತಿಟನೆ ತೀವ್ರವಾಗಿದ್ದು ಹಲವು ನಾಯಕರು, ವಿವಿಧ ಸಂಘಟನೆಗಳ ಸದಸ್ಯರು ಮತ್ತು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com