ಪೌರತ್ವ ಕಾಯ್ದೆ ಪ್ರತಿಭಟನೆ: ಸ್ವಾತಂತ್ರ್ಯ ದಾಳಿಯ ಅಡಿಯಲ್ಲಿದೆ-  ವಿರೋಧ ಪಕ್ಷಗಳು

ಪೌರತ್ವ ಕಾಯ್ದೆ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಪ್ರತಿಭಟನಾಕಾರರ ಮೇಲಿನ ಪೊಲೀಸರ ವರ್ತನೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ವಿರೋಧ ಪಕ್ಷದ ಹಲವು ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಪೌರತ್ವ ಕಾಯ್ದೆ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಪ್ರತಿಭಟನಾಕಾರರ ಮೇಲಿನ ಪೊಲೀಸರ ವರ್ತನೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ವಿರೋಧ ಪಕ್ಷದ ಹಲವು ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. 

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, ಪೊಲೀಸರು ಸೂಕ್ಷ್ಮ ಹಾಗೂ ಜವಾಬ್ದಾರಿಯುತವಾಗಿ ವರ್ತಿಸಬೇಕು. ಕಾರ್ಯಾಂಗದ ಮುಖ್ಯ ಭಾಗವಾಗಿರುವ ಪೊಲೀಸರೇ, ನೀವು ಸರ್ಕಾರಿ ನೌಕರರಾಗಿದ್ದರೂ ಮೊದಲು ಮನುಷ್ಯರು, ಕರ್ನಾಟಕದ ಪೊಲೀಸರಿಗೆ ಅವರದ್ದೇ ಆಗಿರುವ ಹಿರಿಮೆ-ಗರಿಮೆಗಳಿವೆ. ನಿಮಗೆ ದೆಹಲಿ ಪೊಲೀಸರು ಆದರ್ಶವಾಗುವುದು ಬೇಡ. ಅವರ ಸ್ಫೂರ್ತಿಯಿಂದ ಕೆಲಸ ಮಾಡಿದರೆ, ಕರ್ನಾಟಕದ ಜನತೆ ನಿಮ್ಮನ್ನು ಕ್ಷಮಿಸಲಾರರು ಎಂದು ಹೇಳಿದ್ದಾರೆ. 

ಮಹಾತ್ಮ ಗಾಂಧಿ ಅಥವಾ ಭಗತ್ ಸಿಂಗ್ ಆಗಲೀ, ನೆಹರು ಅಥವಾ ಸರ್ದಾರ್ ಪಟೇಲರೇ ಆಗಿರಲಿ ಎಲ್ಲರೂ ಸ್ವಾತಂತ್ಯ ಹೋರಾಟಗಾರರೇ. ಪ್ರತೀಯೊಬ್ಬರೂ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿರುವವರೇ. ಹೋರಾಟದ ಪರಂಪರೆಗೆ ತಡೆಯೊಡ್ಡಬೇಡಿ. ನಮ್ಮಜನ ಶಾಂತಿಪ್ರಿಯರು, ನ್ಯಾಯಾಲಯದ ಬಗ್ಗೆ ಗೌರವ, ಕಾನೂನಿನ ಬಗ್ಗೆ ನಿಷ್ಠೆ ಉಳ್ಳವರು, ಒಡೆಯುವವರು, ಬೆಂಕಿ ಹಚ್ಚುವಚವರು ನಿಮ್ಮ ಪಕ್ಷದಲ್ಲಿ ಹೆಚ್ಚಿದ್ದಾರೆ. ಯಡಿಯೂರಪ್ಪ ಅವರೇ ಶಾಂತಿಯುತ ಪ್ರತಿಭಟನೆಗೆ ಅವಕಾಶ ನೀಡದೆ ನಿಷೇಧಾಜ್ಞೆ ಹೇರಿ ನೀವು ಕನ್ನಡಿಗರನ್ನು ಅವಮಾನಿಸಿದ್ದೀರಿ ಎಂದು ತಿಳಿಸಿದ್ದಾರೆ. 

ಇದರಂತೆ ಕರ್ನಾಟಕ ಕಾಂಗ್ರೆಸ್ ಕೂಡ ಹೇಳಿಕೆ ನೀಡಿದ್ದು, ಬೆಂಗಳೂರು ಪೊಲೀಸ್ ಆಯುಕ್ತರು ನಗರದಲ್ಲಿ ಶನಿವಾರವದೆಗೂ ಸೆಕ್ಷನ್ 144 ಜಾರಿ ಮಾಡಿದ್ದಾರೆ. ಇದೆಂತಹ ಸರ್ಕಾರದ ಅನಿಷ್ಟ ನಿರ್ಧಾರ. ಸರ್ಕಾರ ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಪೊಲೀಸರು ಸಾಮಾನ್ಯ ಜ್ಞಾನದಿಂದ ವರ್ತಿಸಬೇಕೆಂದು ಹೇಳಿದೆ. 

ಕಾಂಗ್ರೆಸ್ ಹಿರಿಯ ನಾಯಕ ದಿನೇಶ್ ಗುಂಡೂರಾವ್ ಮಾತನಾಡಿ, ಸೆಕ್ಷನ್ 144 ಜಾರಿ ಅನಗತ್ಯವಾಗಿತ್ತು. ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರ ಉಗ್ರ ಬಲಬಂಥೀಯ ಆಡಳಿತವು ಜನರ ಹಕ್ಕುಗಳನ್ನು ಅಧೀನಗೊಳಿಸುವುದಕ್ಕೆ ನಾವು ಸಾಕ್ಷಿಯಾಗಿದ್ದೇವೆ. ಪೌರತ್ವ ಕಾಯ್ದೆಯನ್ನು ಭಾರತದ ಜನರು ಒಪ್ಪುತ್ತಿಲ್ಲ. ಶತಮಾನಗಳಿಂದ ಕಟ್ಟಲಾಗಿದ್ದ ಕಟ್ಟವನ್ನು ಅಮಿತಾ ಶಾ ಅವರು ಕೇವಲ ಒಂದೇ ಒಂದು ನಿರ್ಧಾರದಿಂದ ಪತನಗೊಳಿಸುತ್ತಿದ್ದಾರೆ. ಕೋಟ್ಯಾಂತರ ಜನರನ್ನು ರಾಷ್ಟ್ರ ವಿರೋಧಿ ಎಂದು ಪರಿಗಣಿಸುವುದರೊಂದಿಗೆ ನಮ್ಮ ದೇಶ ಒಡೆಯುತ್ತಿದೆ. ದಯವಿಟ್ಟು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯಿರಿ ಎಂದು ತಿಳಿಸಿದ್ದಾರೆ. 

ಮಾಜಿ ಉಪಮುಖ್ಯಮಂತ್ರಿ ಪರಮೇಶ್ವರ್ ಮಾತನಾಡಿ, ತಮ್ಮ ಭಿನ್ನಾಪ್ರಾಯಗಳನ್ನು ಶಾಂತಿಯುತವಾಗಿ ವ್ಯಕ್ತಪಡಿಸಲು ಪ್ರತಿಭಟನೆ ನಡೆಸುತ್ತಿರುವ ಪ್ರತಿಭಟನಾಕಾರರನ್ನು ಗೌರವಿಸಿ. ಪ್ರತಿಭಟನಾಕಾರರಿಗೂ ನೀವು ರಕ್ಷಣೆ ನೀಡಬೇಕೆಂಬ ಜವಾಬ್ದಾರಿಯನ್ನು ನೆನೆಯಿರಿ. ಶಾಂತಿ ಹಾಗೂ ಸಮಗ್ರತೆಯನ್ನು ಕಾಪಾಡೋಣ. ಬೆಂಗಳೂರಿಗರ ದನಿಯನ್ನು ಹತ್ತಿಕ್ಕಲು ಯತ್ನಿಸಬೇಡಿ ಎಂದು ಹೇಳಿದ್ದಾರೆ. 

ಶಿವಾಜಿನಗರದ ನೂತನ ಶಾಸಕ ರಿಜ್ವಾನ್ ಹರ್ಣದ್ ಮಾತನಾಡಿ, ಅಧಿಕಾರದ ಬಲಕ್ಕಿಂತಲೂ ಜನರಲ್ಲಿರುವ ಬಲವೇ ಹೆಚ್ಚು ಬಲಶಾಲಿಯಾಗಿದೆ ಎಂದಿದ್ದಾರೆ. 

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾತನಾಡಿ, ಬಿಜೆಪಿ ಸಂವಿಧಾನವನ್ನು ಗೌರವಿಸುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಜನರು ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಸರ್ಕಾರ ಅವಕಾಶ ಮಾಡಿಕೊಡಬೇಕು. ಜನರ ಮತದ ಮೇಲೆ ಪ್ರಜಾಪ್ರಭುತ್ವ ನಿಂತಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿವೆ. ಪ್ರಸ್ತುತ ದೇಶದಲ್ಲಿ ನಿರ್ಮಾಣವಾಗಿರುವ ಪರಿಸ್ಥಿತಿಯನ್ನು ನೋಡಿದರೆ ತುರ್ತುಪರಿಸ್ಥಿತಿ ನೆನಪಾಗುತ್ತಿದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com