ಪೊಲೀಸರ ದೌರ್ಜನ್ಯದ ವಿರುದ್ಧ ಸದನದಲ್ಲಿ ಹಕ್ಕುಚ್ಯುತಿ ಮಂಡನೆ: ಸಿದ್ದರಾಮಯ್ಯ

ವಿಧಾನಸಭೆ ಪ್ರತಿಪಕ್ಷ ನಾಯಕನಾಗಿರುವ ತಮ್ಮ ಹಕ್ಕಿಗೆ ಚ್ಯುತಿಯಾಗಿದ್ದು, ಇನ್ನು ಜನ ಸಾಮಾನ್ಯರ ಪಾಡೇನು ಎಂದು ಪ್ರಶ್ನಿಸಿರುವ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಸರ್ಕಾರದ ಈ ಧೋರಣೆ ವಿರುದ್ಧ ಸದನದಲ್ಲಿ ಹಕ್ಕು ಚ್ಯುತಿ...
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ವಿಧಾನಸಭೆ ಪ್ರತಿಪಕ್ಷ ನಾಯಕನಾಗಿರುವ ತಮ್ಮ ಹಕ್ಕಿಗೆ ಚ್ಯುತಿಯಾಗಿದ್ದು, ಇನ್ನು ಜನ ಸಾಮಾನ್ಯರ ಪಾಡೇನು ಎಂದು ಪ್ರಶ್ನಿಸಿರುವ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಸರ್ಕಾರದ ಈ ಧೋರಣೆ ವಿರುದ್ಧ ಸದನದಲ್ಲಿ ಹಕ್ಕು ಚ್ಯುತಿ ಮಂಡಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಪ್ರತಿಪಕ್ಷ ನಾಯಕರಾದ ತಾವು ಎಲ್ಲಿಗೆ ಬೇಕಾದರೂ ಹೋಗಬಹುದು. ಜನರ ಪರವಾಗಿ ತಾವು ಮುಕ್ತವಾಗಿ ಸಂಚರಿಸುವ ಎಲ್ಲಾ ಸ್ವಾತಂತ್ರ್ಯ ಹೊಂದಿದ್ದು, ತಮಗೆ ಮಂಗಳೂರಿನಲ್ಲಿ ಪೌರತ್ವ [ತಿದ್ದುಪಡಿ] ಕಾಯ್ದೆ ಪ್ರತಿಭಟನೆ ಸಂದರ್ಭದಲ್ಲಿ ಅಮಾಕರನ್ನು ಗೋಲಿಬಾರ್ ನಲ್ಲಿ ಹತ್ಯೆಯಾದ ಕುಟುಂಬದ ಸದಸ್ಯರನ್ನು ಭೇಟಿಯಾಗಿ ಸಾಂತ್ವಾನ ಹೇಳಲು ಅವಕಾಶ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಮ್ಮ ಕಾವೇರಿ ನಿವಾಸದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊಲೀಸರು ತಮ್ಮ ಮಂಗಳೂರು ಭೇಟಿಗೆ ಅವಕಾಶ ನೀಡದೇ ತಮ್ಮ ಸ್ವಾತಂತ್ರ್ಯವನ್ನು ಕಿತ್ತುಕೊಂಡಿದ್ದಾರೆ. ನೊಂದವರಿಗೆ ಸಾಂತ್ವನ ಹೇಳಲು ಸಹ ಅವಕಾಶ ನೀಡುತ್ತಿಲ್ಲ. ನಿನ್ನೆಯಿಂದ ಎರಡು ಬಾರಿ ಭೇಟಿಗೆ ಯತ್ನಿಸಿದ್ದರೂ ಅವಕಾಶ ಕೊಡಲಿಲ್ಲ‌. ಡಿ.22ರವರೆಗೂ ಮಂಗಳೂರಿಗೆ ಬರದಂತೆ ಪೊಲೀಸರು ನೋಟಿಸ್ ನೀಡಿದ್ದಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಡಿ 23 ರ‌ ಸೋಮವಾರ ಮತ್ತೆ ಮಂಗಳೂರಿಗೆ ಭೇಟಿ ನೀಡುವುದಾಗಿ ಸ್ಪಷ್ಟಪಡಿಸಿದರು.

ಇಬ್ಬರು ಗೋಲಿಬಾರ್ ಗೆ ಬಲಿಯಾಗಿದ್ದಾರೆ. ಹತ್ಯೆ ಮಾಡುವ ಉದ್ದೇಶದಿಂದ ಗುಂಡು ಹಾರಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ನಿಜಕ್ಕೂ ಗೋಲಿಬಾರ್ ಮಾಡುವ ಅವಶ್ಯಕತೆಯಿತ್ತೇ? ಕಾನೂನು ಪರಿಸ್ಥಿತಿಯನ್ನು ಸುಗಮಗೊಳಿಸಲು ಹಲವು ದಾರಿಗಳಿವೆ. ಸರ್ಕಾರ ಹಾಗೂ ಪೊಲೀಸರು ತಮ್ಮ ತಪ್ಪು ಮುಚ್ಚಿಕೊಳ್ಳುವುದಕ್ಕಾಗಿ ತಮಗೆ ಮಂಗಳೂರು ಭೇಟಿಗೆ ಅವಕಾಶ ಕೊಡುತ್ತಿಲ್ಲ. ಆದರೆ ಯಡಿಯೂರಪ್ಪ, ಗೃಹಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಮಂಗಳೂರು ಭೇಟಿಗೆ ಮಾತ್ರ ಅವಕಾಶ ಕೊಡುತ್ತಾರೆ. ಅಲ್ಲಿನ ಪರಿಸ್ಥಿತಿ ಸರಿಯಿಲ್ಲ ಎಂದು ಹೇಳುವ ಪೊಲೀಸರು ಇವರಿಗೇಕೆ ಅವಕಾಶ ಕೊಟ್ಟಿದ್ದಾರೆ ಎಂದು ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ತಾವು ಮುಖ್ಯಮಂತ್ರಿಯಾಗಿದ್ದಾಗ ಯಾವುದೇ ಲಾಟಿಚಾರ್ಚ್ ಮಾಡಿಸಿರಲಿಲ್ಲ. ಕೇಂದ್ರದ ಮಂತ್ರಿ ಗುಂಡು ಹಾರಿಸಿ ಎಂದು ಇಲ್ಲಿನ ಪೊಲೀಸರಿಗೆ ಮತ್ತು ಸರ್ಕಾರಕ್ಕೆ ಸೂಚಿಸುತ್ತಾರೆ. ಇದು ಪ್ರಜಾಪ್ರಭುತ್ವ ಸಂವಿಧಾನ ಬಾಹಿರ ನಡೆ. ಹೀಗಾಗಿ ಕೇಂದ್ರ ಕಂಡಲ್ಲಿ ಗುಂಡಿಕ್ಕಿ ಎಂದು ಸೂಚಿಸಿದ ಕೇಂದ್ರ ಸಚಿವ ಸುರೇಶ್ ಅಂಗಡಿ ವಿರುದ್ಧ ಕ್ರಮಜರುಗಿಸಬೇಕು ಎಂದು ಒತ್ತಾಯಿಸಿದರು. 
 
ಮಂಗಳೂರಿಗೆ ಬರದಂತೆ ತಮಗೆ ನೊಟೀಸ್ ನೀಡಿದ್ದಾರೆ. ರೈಲು, ಬಸ್ಸು, ಕಾರಿನಲ್ಲಿ ಬರದಂತೆಯೂ ಸೂಚಿಸಿದ್ದಾರೆ. ಇದೆಲ್ಲ ನೋಡಿದರೆ ದೇಶದಲ್ಲಿ ಪ್ರಜಾಪ್ರಭುತ್ವ ಇದೆಯೇ? ವಿರೋಧ ಪಕ್ಷ ಇರುವುದು ಏಕೆ ಎಂಬ ಪ್ರಶ್ನೆ ಮೂಡುತ್ತದೆ ಎಂದರು.
 
ಕೊಪ್ಪಳ, ಬೀದರ್ ತುಮಕೂರಿನಲ್ಲಿ ಯಾವುದೇ ಗಲಾಟೆಯಾಗುತ್ತಿಲ್ಲ. ಆದರೂ ಅಲ್ಲಿ ನಿಷೇಧಾಜ್ಞೆ ಜಾರಿ ಏಕೆ? ಎಂದು ಕಿಡಿಕಾರಿದ ಸಿದ್ದರಾಮಯ್ಯ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಆಡಳಿತದಲ್ಲಿ ದಕ್ಷತೆ ಇಲ್ಲದೇ ಇರುವುದೇ  ಇದಕ್ಕೆಲ್ಲ ಕಾರಣ. ಸರ್ಕಾರ ಕಾನುನು ಪರಿಸ್ಥಿತಿ ನಿಭಾಯಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.

ಬಿಜೆಪಿ ವಿರೋಧ ಪಕ್ಷದಲ್ಲಿದ್ದಾಗ ನಾವು ನಿರ್ಬಂಧ ಹೇರಿರಲಿಲ್ಲ. ಎಲ್ಲರ ಭೇಟಿಗೂ ಅವಕಾಶ ಕೊಟ್ಟಿದ್ದೆವು. ಕಾವೇರಿ ಗಲಾಟೆಯಲ್ಲಿ ಮಾತ್ರ 144 ನಿಷೇಧಾಜ್ಞೆ ಹಾಕಲಾಗಿತ್ತು. ಅದೂ ಸಹ 24 ತಾಸು ಮಾತ್ರ. ಆದರೆ ಈಗಿನ ಪರಿಸ್ಥಿತಿ ನೋಡಿದರೆ ರಾಜ್ಯದಲ್ಲಿ ಗೃಹ ಸಚಿವರು ಇದ್ದಾರೋ ಇಲ್ಲವೋ ಎಂಬ ಅನುಮಾನ ಮೂಡುತ್ತಿದೆ. ಪೊಲೀಸರೇ ಗೋಲಿಬಾರ್ ಮಾಡುತ್ತಾರೆ ಎಂದ ಮೇಲೆ ಗೃಹ ಸಚಿವರ ಅವಶ್ಯಕತೆಯಾದರೂ ಏಕೆ? ಇದೆಲ್ಲದಕ್ಕೂ ಸದನದಲ್ಲಿ ಉತ್ತರ ಕೊಡುವುದು ಪೊಲೀಸರೋ ಅಥವಾ ಗೃಹ ಸಚಿವರೋ. ಒಟ್ಟಾರೆ ಸಚಿವ ಬಸವರಾಜ್ ಬೊಮ್ಮಾಯಿ ತಮ್ಮ ಜವಾಬ್ದಾರಿ ನಿಭಾಯಿಸುವಲ್ಲಿ  ಸಂಪೂರ್ಣ ವಿಫಲರಾಗಿದ್ದಾರೆ. ಗೋಲಿಬಾರ್ ಘಟನೆ ಬಗ್ಗೆ ತಕ್ಷಣ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು ಎಂದರು.
 
ದೇಶದಲ್ಲಿ ಹಲವು ಜ್ವಲಂತ ಸಮಸ್ಯೆಗಳಿವೆ. ಆದರೆ ಈ ಬಗ್ಗೆ ಬಿಜೆಪಿಯವರು ಮಾತನಾಡುವುದಿಲ್ಲ. ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡುತ್ತಿಲ್ಲ. ದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಮೋದಿ, ಅಮಿತ್ ಶಾ ಕಾರಣ. ಅವರಿಬ್ಬರೇ ಈ ಎಲ್ಲಾ ಅನಾಹುತಗಳಿಗೆ ನೇರ ಹೊಣೆ ಹೊರಬೇಕು. ಉತ್ತರ ಪ್ರದೇಶದಲ್ಲಿ ಹನ್ನೊಂದು ಮಂದಿ ಪ್ರಾಣತೆತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲೂ ಅಮಾಯಕರು ಬಲಿಯಾಗಿದ್ದಾರೆ. ದೇಶದ ಸ್ವಾತಂತ್ರ್ಯಕ್ಕಾಗಿ ಬಿಜೆಪಿಯ ಯಾವ ನಾಯಕರೂ ಹೋರಾಡಿದವರಲ್ಲ ಎಂದರು.
 
ಪ್ರತಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ಅಂಗೀಕಾರ ಮಾಡುವ ವಿಚಾರ ಹೈಕಮಾಂಡ್ ವಿವೇಚನೆಗೆ ಬಿಟ್ಟದ್ದು ಎಂದು ಹೇಳುವ ಮೂಲಕ ಪ್ರತಿಪಕ್ಷ ನಾಯಕ ಸ್ಥಾನದಲ್ಲಿ ಮುಂದುವರಿಯುವ ಸುಳಿವು ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com