'ಮಂಗಳೂರು ಗಲಭೆಗೆ ಪೊಲೀಸ್ ಆಯುಕ್ತ ಡಾ. ಪಿ.ಎಸ್. ಹರ್ಷ ಅವರೇ ನೇರ ಕಾರಣ'

ಪೊಲೀಸ್ ಆಯುಕ್ತ ಡಾ.ಪಿ.ಎಸ್. ಹರ್ಷ ಅವರ ಬೇಜವಾಬ್ದಾರಿ ನಡೆಯೇ ಪರಿಸ್ಥಿತಿ ವಿಕೋಪಕ್ಕೆ ಹೋಗಿ ಇಬ್ಬರ ಬಲಿಗೆ ಕಾರಣವಾಯಿತು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ತಾಹೀರ್ ಹುಸೇನ್ ಆರೋಪಿಸಿದ್ದಾರೆ.
ಡಾ.ಹರ್ಷ
ಡಾ.ಹರ್ಷ
Updated on

ಮಂಗಳೂರು: ಪೊಲೀಸ್ ಆಯುಕ್ತ ಡಾ.ಪಿ.ಎಸ್. ಹರ್ಷ ಅವರ ಬೇಜವಾಬ್ದಾರಿ ನಡೆಯೇ ಪರಿಸ್ಥಿತಿ ವಿಕೋಪಕ್ಕೆ ಹೋಗಿ ಇಬ್ಬರ ಬಲಿಗೆ ಕಾರಣವಾಯಿತು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ತಾಹೀರ್ ಹುಸೇನ್ ಆರೋಪಿಸಿದ್ದಾರೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮಂಗಳೂರಿನಲ್ಲಿ ಹಲವು ಸಂಘಟನೆಗಳು ಶಾಂತ ಪ್ರತಿಭಟನೆಗೆ ಅವಕಾಶ ಕೋರಿದ್ದವು. ಶಾಂತಿ ಬಯಸದ ಮಂಗಳೂರು ಕಮಿಷನರ್ ಡಾ.ಪಿ.ಎಸ್. ಹರ್ಷ ಅವರು ಏಕಾಏಕಿ ಸೆಕ್ಷನ್ 144 ಹಾಕಿ ಸಾರ್ವಜನಿಕ ಕಾನೂನು ಬದ್ಧ ಪ್ರತಿಭಟನೆಗೆ ತಡೆ ನೀಡಿದರು ಮತ್ತು ಇಂತಹ ವರ್ತನೆ ಕಾನೂನು ಸುವ್ಯವಸ್ಥೆ ಕೆಡಿಸುವ ಕಡೆ ಮಂಗಳೂರನ್ನು ಕೊಂಡೊಯ್ಯಿತು ಎಂದು ಆರೋಪಿಸಿದ್ದಾರೆ.

ಡಿ. 19 ರ ಮಧ್ಯಾಹ್ನ ನಡೆದ ಪ್ರತಿಭಟನೆ ವೇಳೆ ಸೇರಿದ್ದ ಕೆಲವೇ ಕೆಲವು ಯುವಕರ ಮನಸೆಳೆಯುವಲ್ಲಿ ಕಮಿಷನರ್ ಅವರು ವಿಫಲವಾದರು ಮತ್ತು ಮನಬಂದಂತೆ ಲಾಠಿ ಚಾರ್ಜ್ ಮಾಡಿ ಯುವಕರ ಗುಂಪು ಆಕ್ರೋಶಗೊಳ್ಳುವಂತೆ ಮಾಡಿದರು. ಕಾನೂನಿನ ಯಾವುದೇ ಪರಿಧಿಯನ್ನು ಪಾಲಿಸದೆ ನೇರವಾಗಿ ಗುಂಡನ್ನು ಹಾರಿಸಿ ಇಬ್ಬರು ಅಮಾಯಕರ ಜೀವಹಾನಿಗೆ ಕಾರಣವಾದರು. ಈ ಎಲ್ಲಾ ಗಲಭೆಗೆ ಕಮಿಷನರ್ ಹರ್ಷ ಅವರು ನೇರ ಕುಮ್ಮಕ್ಕು ನೀಡಿದರು. ಸೆಕ್ಷನ್ ಹಾಕುವ ಮುಂಚಿನಿಂದ ಅವರು ಹೇಳಿದ ಕಟ್ಟುಕಥೆಗಳೆ ಎಲ್ಲಾ ಗಲಭೆಗೆ ಮೂಲ ಕಾರಣ ಎಂದು ದೂರಿದ್ದಾರೆ.

ಇದಲ್ಲದೆ ವರದಿ ಮಾಡುತ್ತಿದ್ದ ಕೇರಳ ಮೂಲದ ಪತ್ರಕರ್ತರ ಜೊತೆ ಗೂಂಡಾ ವರ್ತನೆ ತೋರಿಸಿ ಅವರನ್ನು ಬಂಧಿಸಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಂದ ಕರ್ನಾಟಕ ಸರಕಾರಕ್ಕೆ ಚೀಮಾರಿ ಹಾಕಿಸುವಂತೆ ಕೂಡಾ ಮಾಡಿರುತ್ತಾರೆ. ಈ ಎಲ್ಲಾ ಘಟನೆಗಳ ಬಗ್ಗೆ ಉನ್ನತ ತನಿಖೆಯಾಗಬೇಕೆಂದು ವೆಲ್ಪೇರ್ ಪಾರ್ಟಿ ಆಗ್ರಹಿಸುತ್ತದೆ. ಕಮಿಷನರ್ ಹರ್ಷ ಅವರನ್ನು ತಕ್ಷಣ ಕೆಲಸದಿಂದ ವಜಾಗೊಳಿಸಿ ತನಿಖೆ ನಡೆಸಬೇಕು.

ಇಲ್ಲವಾದಲ್ಲಿ ಈ ಬಗ್ಗೆ ಪಾರ್ಟಿ ರಾಜ್ಯಾದ್ಯಂತ ತೀವ್ರ ತರದ ಪ್ರತಿಭಟನೆಗಳನ್ನು ಮಾಡಲಾಗುವುದು. ವೆಲ್ಪೇರ್ ಪಾರ್ಟಿ ಪೌರತ್ವ ವಿರೋಧಿ ಕಾಯ್ದೆ ವಿರೋಧದ ಪ್ರತಿಭಟನೆ ಮುಂದುವರೆಸುತ್ತದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com