ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳದಿದ್ದರೆ ಟೋಲ್ ಗೇಟ್ ಧ್ವಂಸ; ಸಂಸದ ನಳಿನ್ ಕುಮಾರ್ ಕಟೀಲು

ಒಂದು ವಾರದೊಳಗೆ ಪಂಪ್ ವೆಲ್ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸದಿದ್ದರೆ ಸುರತ್ಕಲ್ ಹತ್ತಿರ ...
ಪಂಪ್ ವೆಲ್ ಮೇಲ್ಸೇತುವೆ ಕಾಮಗಾರಿ ವೀಕ್ಷಿಸಿದ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಸಾಂದರ್ಭಿಕ ಚಿತ್ರ
ಪಂಪ್ ವೆಲ್ ಮೇಲ್ಸೇತುವೆ ಕಾಮಗಾರಿ ವೀಕ್ಷಿಸಿದ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಸಾಂದರ್ಭಿಕ ಚಿತ್ರ
ಮಂಗಳೂರು; ಒಂದು ವಾರದೊಳಗೆ ಪಂಪ್ ವೆಲ್ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸದಿದ್ದರೆ ಸುರತ್ಕಲ್ ಹತ್ತಿರ ರಾಷ್ಟ್ರೀಯ ಹೆದ್ದಾರಿ 75ರಲ್ಲಿರುವ ಟೋಲ್ ಗೇಟನ್ನು ನೆಲಸಮ ಮಾಡುವುದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್ ಎಚ್ಚರಿಕೆ ನೀಡಿದ್ದಾರೆ.
ನಿನ್ನೆ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಪಂಪ್ ವೆಲ್ ಮೇಲ್ಸೇತುವೆ ಕಾಮಗಾರಿ ಆರಂಭವಾಗಿ ದಶಕಗಳು ಕಳೆದರೂ ಕೂಡ ಇನ್ನೂ ಮುಗಿದಿಲ್ಲ ಎಂದು ನಾಗರಿಕರ ಸಂಘಟನೆ ಮತ್ತು ವಿರೋಧ ಪಕ್ಷಗಳ ಟೀಕೆಗಳಿಗೆ ಗುರಿಯಾಗಿರುವ ಸಂಸದರು ಕಾಮಗಾರಿ ವಿಳಂಬಕ್ಕೆ ತಾವು ಕಾರಣರಲ್ಲ ಎಂದಿದ್ದಾರೆ.
ಲೋಕಸಭೆ ಚುನಾವಣೆಗೆ ನೀತಿ ಸಂಹಿತೆ ಮುಂದಿನ ತಿಂಗಳು ಯಾವ ದಿನವಾದರೂ ಜಾರಿಗೆ ಬರಬಹುದು. ಅದಕ್ಕಿಂತ ಮೊದಲು ಮೇಲ್ಸೇತುವೆ ಕಾಮಗಾರಿ ಮಾಡಿ ಮುಗಿಸಬೇಕೆಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮತ್ತೊಂದು ಕಾಲಾವಕಾಶವನ್ನು ಅವರು ನೀಡಿದರು. ಒಂದು ವೇಳೆ ಕಾಮಗಾರಿ ಮಾಡಿ ಮುಗಿಸದಿದ್ದರೆ ಟೋಲ್ ಗೇಟನ್ನು ಕೆಡವುದಾಗಿ ಎಚ್ಚರಿಕೆ ನೀಡಿದ್ದಾರೆ.
ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸಲು ನನ್ನ ಕಡೆಯಿಂದ ಸಾಧ್ಯವಾದ ಎಲ್ಲಾ ಪ್ರಯತ್ನ ಮಾಡಿದ್ದೇನೆ. ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡಿದ್ದೇನೆ. ಈಗ ಟೋಲ್ ಗೇಟನ್ನು ಕೆಡವದೆ ನನಗೆ ಬೇರೆ ಮಾರ್ಗವಿಲ್ಲ. ಈ ವಿಷಯದಲ್ಲಿ ನಾನು ಜೈಲಿಗೆ ಹೋಗಲು ಕೂಡ ಸಿದ್ಧನಿದ್ದೇನೆ ಎಂದರು.
ನಳಿನ್ ಕುಮಾರ್ ಕಟೀಲ್ ಈ ಹಿಂದೆ ಕೂಡ ಟೋಲ್ ಗೇಟನ್ನು ಮುಚ್ಚುವುದಾಗಿ ಹೇಳಿದ್ದರು. ನಿನ್ನೆಯ ಸಭೆಯ ವೇಳೆ ಲೋಕೋಪಯೋಗಿ ಇಲಾಖೆ ಕಾರ್ಯಕಾರಿ ಎಂಜಿನಿಯರ್ ಸುಬ್ರಾಯ ಹೊಳ್ಳ ಸೇರಿದಂತೆ ಹಲವು ಅಧಿಕಾರಿಗಳನ್ನು ಸಂಸದರು ತರಾಟೆಗೆ ತೆಗೆದುಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com