ಪತ್ರಕರ್ತರು ಸಮಾಜಮುಖಿ ಕೆಲಸಗಳನ್ನು ಮಾಡಬೇಕು: ಡಾ ಜಿ. ಪರಮೇಶ್ವರ್

ಪ್ರತಿವರ್ಷದಂತೆ ಹೊಸ ವರ್ಷ ಆರಂಭದ ಮುನ್ನಾದಿನ ಪ್ರದಾನ ಮಾಡುವ ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ ....
ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಡಾ ಸುಧಾಮೂರ್ತಿಯವರಿಗೆ ವರ್ಷದ ವ್ಯಕ್ತಿ ಪ್ರದಾನ
ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಡಾ ಸುಧಾಮೂರ್ತಿಯವರಿಗೆ ವರ್ಷದ ವ್ಯಕ್ತಿ ಪ್ರದಾನ
Updated on

ಬೆಂಗಳೂರು: ಪ್ರತಿವರ್ಷದಂತೆ ಹೊಸ ವರ್ಷ ಆರಂಭದ ಮುನ್ನಾದಿನ ಪ್ರದಾನ ಮಾಡುವ ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಇನ್ಫೋಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಸುಧಾಮೂರ್ತಿ ಅವರಿಗೆ 2018ನೇ ಸಾಲಿನ ವರ್ಷದ ವ್ಯಕ್ತಿ ಪ್ರಶಸ್ತಿ ಮತ್ತು 13 ಮಂದಿ ಹಿರಿಯ ಪತ್ರಕರ್ತರಿಗೆ ಪ್ರಸ್‌ ಕ್ಲಬ್‌ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಪ್ರಶಸ್ತಿ ಪ್ರದಾನ ಮಾಡಿ, ಮಾಧ್ಯಮಗಳು ಯಾವಾಗಲೂ ಬದಲಾವಣೆ ತರುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ಪತ್ರಕರ್ತರ ಬರಹಗಳಿಗೆ ಮೌಲ್ಯ ಹೆಚ್ಚಿದ್ದು, ಅವರ ವಿಶ್ಲೇಷಣೆಗಳು ಸದಾ ಸಮಾಜ ಮುಖಿಯಾಗಿರಬೇಕು ಎಂದು ಅಭಿಪ್ರಾಯಪಟ್ಟರು.

ಪತ್ರಕರ್ತರು ಇತರರಿಗೆ ಮಾದರಿಯಾಗಿದ್ದು, ಅವರ ನಡೆಯನ್ನು ಸಮಾಜ ಗಮನಿಸುತ್ತಿರುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಮಾಧ್ಯಮ ಕ್ಷೇತ್ರ ಕಲಬೆರೆಕೆಯಾಗುತ್ತಿದ್ದು ನೈಜತೆ ಮಾಯವಾಗುತ್ತಿದೆ. ಒಳ್ಳೆಯದನ್ನು ತೋರುವ ಪ್ರವೃತ್ತಿಗಿಂತಲೂ ಕೆಟ್ಟದನ್ನೆ  ಹೆಚ್ಚಾಗಿ ಬಿಂಬಿಸಲಾಗುತ್ತಿದೆ. ಸಮಾಜದ ಅಭಿಪ್ರಾಯವನ್ನು ಪ್ರತಿಬಿಂಬಿಸುವ ಕೆಲಸವನ್ನು ಮಾಧ್ಯಮಗಳು ಇನ್ನಷ್ಟು ಪ್ರಬಲವಾಗಿ ಮಾಡಬೇಕಿದೆ. ಕೆಲ ವಿಚಾರಗಳನ್ನು ಸಮಾಜಕ್ಕೆ ಮುಟ್ಟಿಸುವುದರಲ್ಲಿ ಹಿಂದೇಟು ಹಾಕುತ್ತಿವೆ, ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಹೇಳಿದರು.

ಪ್ರಶಸ್ತಿಗಳು ಸಾಮಾಜಿಕ ಜವಾಬ್ದಾರಿಗಳನ್ನು ಹೆಚ್ಚಿಸುತ್ತವೆ: ಡಾ. ಸುಧಾಮೂರ್ತಿ
"ವರ್ಷದ ವ್ಯಕ್ತಿ' ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಇನ್ಫೋಸಿಸ್‌ ಪ್ರತಿಷ್ಟಾನದ ಅಧ್ಯಕ್ಷೆ ಡಾ. ಸುಧಾಮೂರ್ತಿ, ಪ್ರಶಸ್ತಿಗಳು ಸಾಮಾಜಿಕ ಜವಾಬ್ದಾರಿಗಳನ್ನು ಮತ್ತಷ್ಟು  ಹೆಚ್ಚಿಸುತ್ತವೆ. ಯಾರೋ ಗಳಿಸಿದ್ದನ್ನು ನಾನು ಸಾಮಾಜ ಸೇವೆಗೆ ಉಪಯೋಗಿಸುತ್ತಿದ್ದೇನೆ. ನಾನು ಯಾವುದೇ ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಂಡಿಲ್ಲ, ಈ ಪ್ರಶಸ್ತಿ ನನಗೆ ಸಂದ ಪ್ರಶಸ್ತಿ ಅಲ್ಲ ಸಮಾಜ ಸೇವೆಗೆ ಸಂದ ಪುರಸ್ಕಾರ. ಮಾಧ್ಯಮಗಳು ನನ್ನ ಮೇಲೆ ತಾಯಿಗೆ ಮಕ್ಕಳು ನೀಡುವ ಅಕ್ಕರೆ ತೋರುತ್ತಿವೆ. ಇದಕ್ಕೆ ನಾನು ಚಿರಋಣಿಯಾಗಿದ್ದು, ನನ್ನ ಸಮಾಜ ಸೇವೆ ಹೀಗೆ ಮುಂದುವರಿಯಲಿದೆ ಎಂದು ಹೇಳಿದರು.

ಪ್ರಸ್ತಾವಿಕವಾಗಿ ಮಾತನಾಡಿದ ಪ್ರಸ್‌ಕ್ಲಬ್‌ ಅಧ್ಯಕ್ಷ ಸದಾಶಿವ ಶಣೈ, ಪ್ರಸ್‌ಕ್ಲಬ್‌ ನೂತನ ಕಟ್ಟಡ ಅಡಿಪಾಯ ಕಾಮಗಾರಿಗೆ ಸರ್ಕಾರ ವಾರ್ತಾ ಇಲಾಖೆಯಿಂದ 5 ಕೋಟಿ ರೂಪಾಯಿ ನೀಡಿದೆ. ಹೀಗಾಗಿ, ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಲಾಗುವುದು. ಬೆಂಗಳೂರು ಪ್ರಸ್‌ಕ್ಲಬ್‌ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಿಇಎಸ್‌ ಕಾಲೇಜು ಸಮೀಪ ಒಂದು ಎಕರೆ ಜಮೀನು ನೀಡಿದ್ದಾರೆ. ಕೆಲವೇ ದಿನಗಳಲ್ಲಿ ಕಟ್ಟಡದ ಅಡಿಪಾಯ ಕಾರ್ಯ ನಡೆಯಲಿದೆ ಎಂದರು.

ಹಿರಿಯ  ಪತ್ರಕರ್ತರಾದ ತಿಮ್ಮಪ್ಪ ಭಟ್‌, ರವಿ ಹೆಗಡೆ, ವೆಂಕಟನಾರಾಯಣ್‌, ಕೆ.ವಿ.ಪ್ರಭಾಕರ್‌, ರಾಮಣ್ಣ ಎಚ್‌.ಕೋಡಿಹೊಸಹಳ್ಳಿ, ಎ.ಬಾಲಚಂದ್ರ, ಶಿವಾಜಿ ಗಣೇಶನ್‌, ತುಂಗರೇಣುಕ, ಡಾ.ರಾಜಶೇಖರ ಹತಗುಂದಿ, ಡಿ.ಸಿ.ಗಣೇಶ್‌, ವೇದಂ ಜಯಶಂಕರ್‌, ರಾಜಶೇಖರ ಅಬ್ಬೂರು, ಕೆ.ಬದ್ರುದ್ದೀನ್‌ ಮಾಣಿ ಅವರಿಗೆ ಪ್ರಸ್‌ಕ್ಲಬ್‌ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com