ಜಗಳ, ಜಟಾಪಟಿಗೆ ವೇದಿಕೆಯಾಯ್ತು ಧಾರವಾಡ ಸಾಹಿತ್ಯ ಸಮ್ಮೇಳನ; ಅಷ್ಟಕ್ಕೂ ಅಲ್ಲಿ ನಡೆದಿದ್ದು ಏನು?

ಸಾಹಿತ್ಯ ಸಮ್ಮೇಳನದ ಮುಕ್ತಾಯದ ದಿನ ಕನ್ನಡ ನಾಡು, ಸಾಹಿತ್ಯ, ಸಂಸ್ಕೃತಿ ಕುರಿತು ಚರ್ಚೆ, ನಿರ್ಣಾಯಗಳಲ್ಲಿ ...
ಪರಿಸ್ಥಿತಿ ನಿಯಂತ್ರಿಸುತ್ತಿರುವ ಪೊಲೀಸರು
ಪರಿಸ್ಥಿತಿ ನಿಯಂತ್ರಿಸುತ್ತಿರುವ ಪೊಲೀಸರು

ಧಾರವಾಡ: ಸಾಹಿತ್ಯ ಸಮ್ಮೇಳನದ ಮುಕ್ತಾಯದ ದಿನ ಕನ್ನಡ ನಾಡು, ಸಾಹಿತ್ಯ, ಸಂಸ್ಕೃತಿ ಕುರಿತು ಚರ್ಚೆ, ನಿರ್ಣಾಯಗಳಲ್ಲಿ ಸಂಪನ್ನಗೊಳ್ಳುವ ಬದಲು ಜಗಳದಲ್ಲಿ ಮುಕ್ತಾಯವಾದ ಘಟನೆ ನಿನ್ನೆ ಧಾರವಾಡದಲ್ಲಿ ನಡೆಯಿತು.

ಧಾರವಾಡದಲ್ಲಿ ಕಳೆದ ಮೂರು ದಿನಗಳಿಂದ ವಾರ್ಷಿಕ ಸಾಹಿತ್ಯ ಸಮ್ಮೇಳನ ನಡೆದು ನಿನ್ನೆ ಸಮಾರೋಪವಾಗಿತ್ತು. ಮೊನ್ನೆ ಶನಿವಾರದ ಗೋಷ್ಠಿಯಲ್ಲಿ ಶಿಕ್ಷಣತಜ್ಞ ಶಿವ ವಿಶ್ವನಾಥನ್ ದೇಶದ ಭದ್ರತಾ ಪಡೆಗಳ ಬಗ್ಗೆ ವಿವಾದಾತ್ಮಕ ವ್ಯತಿರಿಕ್ತ ಹೇಳಿಕೆ ನೀಡಿದ್ದರು. ಭಾರತೀಯ ಗಡಿ ಭಾಗಗಳಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದ್ದು ಸೇನಾ ಪಡೆ ಯೋಧರು ಇದರಲ್ಲಿ ಭಾಗಿಯಾಗಿದ್ದಾರೆ, ಅತ್ಯಾಚಾರ ಪ್ರಕರಣಗಳು ಹೆಚ್ಚಾಗಲು ಸೇನಾಪಡೆ ಸಿಬ್ಬಂದಿಯೇ ಕಾರಣ ಎಂದು ಹೇಳಿಕೆ ನೀಡಿದರು. ಆಗಲೇ ಅವರ ಮಾತುಗಳನ್ನು ವಿರೋಧಿಸಿದ ಸಮ್ಮೇಳನಕ್ಕೆ ಆಗಮಿಸಿದ್ದ ಸಭಿಕರು ವಿಶ್ವನಾಥನ್ ಅವರಿಂದ ಕ್ಷಮೆ ಯಾಚಿಸಿದ್ದರು.

ನಿನ್ನೆ ಸೇನಾಪಡೆ ಮಾಜಿ ಯೋಧರು ಸಮ್ಮೇಳನ ಸಮಾರೋಪ ಸಮಾರಂಭ ನಡೆಯುತ್ತಿದ್ದ ಸಭಾಂಗಣಕ್ಕೆ ಅಪರಾಹ್ನದ ವೇಳೆಗೆ ಆಗಮಿಸಿ ತಮ್ಮ ಸಿಟ್ಟು, ಆಕ್ರೋಶ ವ್ಯಕ್ತಪಡಿಸಿದ್ದರು. ಯೋಧರ ಬಗ್ಗೆ ವಿಶ್ವನಾಥನ್ ಹಗುರವಾಗಿ ಮಾತನಾಡಿದ್ದಾರೆ. ದೇಶಕ್ಕಾಗಿ ಯೋಧರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡುತ್ತಾರೆ, ಅವರಿಂದಾಗಿಯೇ ಇಂದು ನಾವೆಲ್ಲ ಶಾಂತಿ, ನೆಮ್ಮದಿಯಿಂದ ನೆಲೆಸಿದ್ದೇವೆ. ಮಿಲಿಟರಿ ಪಡೆ ಯೋಧರು ಅತ್ಯಾಚಾರಿಗಳಲ್ಲ. ತಮ್ಮ ಜೀವವನ್ನು ಒತ್ತೆಯಿಟ್ಟು ಜನರನ್ನು ಕಾಪಾಡುತ್ತಾರೆ. ವಿಶ್ವನಾಥನ್ ಅವರಿಗೆ ಪ್ರಚಾರ ಸಿಗಬೇಕೆಂದರೆ ಬೇರೆ ಹಲವು ಮಾರ್ಗಗಳಿವೆ. ಅದು ಬಿಟ್ಟು ಸೇನಾ ಯೋಧರ ಬಗ್ಗೆ ಹಗುರವಾಗಿ ಮಾತನಾಡುವುದಲ್ಲ ಎಂದು ಕಿಡಿಕಾರಿದ್ದರು.

ನಿನ್ನೆ ಹಿಂದೂಪರ ಸಂಘಟನೆಗಳ ಗುಂಪು ಸಭಾಂಗಣಕ್ಕೆ ತೆರಳಿ ಕಾರ್ಯಕ್ರಮ ಆಯೋಜಕರ ವಿರುದ್ಧ ಘೋಷಣೆ ಕೂಗಿದರು. ಅಲ್ಲಿದ್ದ ಕುರ್ಚಿಗಳನ್ನು, ಧ್ವನಿವರ್ಧಕಗಳನ್ನು ಕಿತ್ತೆಸೆದರು. ದೇಶ ಮತ್ತು ಸೇನೆ ವಿರುದ್ಧ ಮಾತನಾಡುವವನ್ನು ಕಾರ್ಯಕ್ರಮಕ್ಕೆ ಏಕೆ ಆಹ್ವಾನಿಸುತ್ತೀರಿ ಎಂದು ಕೇಳಿದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು.

ಘಟನೆ ಸಂಬಂಧ ಇಬ್ಬರು ಯುವಕರನ್ನು ಕಸ್ಟಡಿಗೊಪ್ಪಿಸಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಬಂಧಿತರಾದವರ ಹೆಸರನ್ನು ಇನ್ನೂ ಪೊಲೀಸರು ಬಹಿರಂಗಪಡಿಸಿಲ್ಲ. ಸಂಘಟನೆಯ ಬೇರೆ ಸದಸ್ಯರು ತಪ್ಪಿಸಿಕೊಂಡಿದ್ದಾರೆ.

ಪರಿಸ್ಥಿತಿ ಕೈಮೀರಿದಾಗ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ರಾಘವೇಂದ್ರ ಪಾಟೀಲ್ ಮಧ್ಯಪ್ರವೇಶಿಸಿ ಪ್ರತಿಭಟನಾಕಾರರ ಮುಂದೆ ಕ್ಷಮೆಕೋರಿದರು. ನಂತರ ಪರಿಸ್ಥಿತಿ ತಿಳಿಯಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com