ಸಂಸ್ಕೃತ ಭಾಷೆ ಕಲಿತು ಬೆಳೆಸುತ್ತಿರುವ ಬೆಂಗಳೂರಿನ ಕ್ಯಾಬ್ ಚಾಲಕ ಮಲ್ಲಪ್ಪ!

ಸಂಸ್ಕೃತದಲ್ಲಿ 'ಪ್ರಣಮಾಹ ಮಹೋದಯ' ಅಂದರೆ ನಮಸ್ತೆ ಸರ್ ಎಂದು. ಇದು ಕ್ಯಾಬ್ ಚಾಲಕರೊಬ್ಬರು ...
ಕ್ಯಾಬ್ ಚಾಲಕ ಮಲ್ಲಪ್ಪ
ಕ್ಯಾಬ್ ಚಾಲಕ ಮಲ್ಲಪ್ಪ
Updated on
ಬೆಂಗಳೂರು: ಸಂಸ್ಕೃತ ಭಾಷೆ ಕಷ್ಟ ಎಂಬ ಮನೋಧರ್ಮ ನಮ್ಮಲ್ಲಿದೆ. ಆದರೆ ಇಲ್ಲೊಬ್ಬರು ಸಂಸ್ಕೃತವನ್ನು ಸಲೀಸಾಗಿ ಮಾತನಾಡುತ್ತಾರೆ. ಅದು ಯಾವುದೋ ಸಂಸ್ಕೃತ ವಿದ್ವಾಂಸರಲ್ಲ, ಬದಲಿಗೆ ಕ್ಯಾಬ್ ಚಾಲಕರೊಬ್ಬರು. 
ಸಂಸ್ಕೃತದಲ್ಲಿ 'ಪ್ರಣಮಾಹ ಮಹೋದಯ' ಅಂದರೆ ನಮಸ್ತೆ ಸರ್ ಎಂದು. ಇದು ಕ್ಯಾಬ್ ಚಾಲಕರೊಬ್ಬರು ತಮ್ಮ ಪ್ರಯಾಣಿಕರಿಗೆ ಮೊದಲು ಸಂಬೋಧಿಸುವ ಶಬ್ದ. ಕ್ಯಾಬ್ ಹತ್ತಿದ ಪ್ರಯಾಣಿಕರಿಗೆ ಎಲ್ಲಿಲ್ಲದ ಅಚ್ಚರಿ, ಅರೆ ಕ್ಯಾಬ್ ಚಾಲಕರೊಬ್ಬರು ಸಂಸ್ಕೃತದಲ್ಲಿ ಮಾತನಾಡುತ್ತಾರಲ್ಲ ಎಂದು.
ಕೆಲ ವಾರಗಳ ಹಿಂದೆ ತಾತ್ಕಾಲಿಕ ಆಪ್ ಆಧಾರಿತ ಕ್ಯಾಬ್ ಚಾಲಕ ಮಲ್ಲಪ್ಪ ವಿ ಪಟ್ಟರ್, ಗಿರಿನಗರದ ಸಂಸ್ಕೃತ ಭಾರತಿ ಸಂಘಟನೆಯಿಂದ ಪ್ರಯಾಣಿಕರೊಬ್ಬರನ್ನು ಹತ್ತಿಸಿಕೊಂಡರು. ಪ್ರಯಾಣಿಕರನ್ನು ಕಂಡಿದ್ದೇ ತಡ ಅವರು ಸಂಸ್ಕೃತ ವಿದ್ವಾಂಸ ಎಂಬುದು ಗೊತ್ತಾಯಿತು. ಮಲ್ಲಪ್ಪ ಸಂಸ್ಕೃತದಲ್ಲಿಯೇ ಅವರ ಜೊತೆ ಮಾತನಾಡಲು ಆರಂಭಿಸಿದರು. ಅವರಿಗೋ ಅಚ್ಚರಿಯಾಯಿತು. 
ಸಂಸ್ಕೃತ ಭಾಷೆ ಕಲಿಸುವ ಪ್ರಮುಖ ಶಿಕ್ಷಣ ಸಂಸ್ಥೆಯಾದ ಅಕ್ಷರಮ್ ನಿಂದ ಬಂದಿದ್ದರಿಂದ ಅವರಿಗೆ ಸಂಸ್ಕೃತ ಗೊತ್ತಿದೆ ಎಂದು ನನಗೆ ಅರ್ಥವಾಯಿತು. ಹೀಗಾಗಿ ಸಂಸ್ಕೃತದಲ್ಲಿ ನಮಸ್ತೆ ಎಂದೆ. ಅದಕ್ಕೆ ಅವರು ಖುಷಿಗೊಂಡು ಸಂಸ್ಕೃತದಲ್ಲಿಯೇ ಮಾತನಾಡಲಾರಂಭಿಸಿದರು, ಅವರು ಕ್ಯಾಬ್ ನಿಂದ ಇಳಿಯುವವರೆಗೆ ಸಂಸ್ಕೃತದಲ್ಲಿಯೇ ನಾವು ಮಾತನಾಡಿದೆವು ಎಂದರು ಮಲ್ಲಪ್ಪ.
ತಮ್ಮ ತಾತ ಭಗವದ್ಗೀತೆ ಓದುವಾಗ ಮಲ್ಲಪ್ಪಕ್ಕೆ 10 ವರ್ಷ ವಯಸ್ಸು. ಅದು ಸಂಸ್ಕೃತದಲ್ಲಿದ್ದರೂ ಅದರ ಅಕ್ಷರ ಕನ್ನಡದಲ್ಲಿತ್ತು. ನನಗೆ ಭಾಷೆ ಅರ್ಥವಾಗುತ್ತಿರಲಿಲ್ಲ. ಆದರೆ ಆ ಭಾಷೆ ಕಲಿಯಬೇಕೆಂಬ ಆಸೆ ನನ್ನಲ್ಲಿ ಅದಮ್ಯವಾಗಿತ್ತು ಎನ್ನುತ್ತಾರೆ.
ಬೆಳಗಾವಿಯ ಗೋಕಾಕ್ ತಾಲ್ಲೂಕಿನ ಸಣ್ಣ ಹಳ್ಳಿಯವರಾದ ಮಲ್ಲಪ್ಪ 12 ವರ್ಷದ ಬಾಲಕನಿದ್ದಾಗಲೇ ಬೆಂಗಳೂರಿಗೆ ಬಂದಿದ್ದರು. ಅಲ್ಲಿ ಬ್ರಹ್ಮೋವಿದ್ಯ ಆಶ್ರಮಕ್ಕೆ ಸೇರಿದರು. ಕೃಷಿಕ ಕುಟುಂಬದವರಾದ ಮಲ್ಲಪ್ಪನವರ ಮನೆಯಲ್ಲಿ ಯಾರಿಗೂ ಸಂಸ್ಕೃತ ಗೊತ್ತಿಲ್ಲ. ಆದರೆ ತಾತನವರಿಂದ ಕಲಿಯಲು ಆರಂಭಿಸಿದೆ. 16ನೇ ವಯಸ್ಸಿಗೆ ಸಂಸ್ಕೃತ ಕಲಿತುಕೊಂಡುಬಿಟ್ಟರು. ನಂತರ ಸಂಸ್ಕೃತದಲ್ಲಿ ವಿದ್ವತ್ ಕಲಿತು ಎಂ ಎ ಸ್ನಾತಕೋತ್ತರವನ್ನು ಮಾಡಿಕೊಂಡಿದ್ದಾರೆ.
ಎಂ ಎ ಮುಗಿದದ್ದೇ ತಡ ಶಾಲೆಯಲ್ಲಿ ಸಂಸ್ಕೃತ ಬೋಧಕರಾಗಿ ಸೇರಿಕೊಂಡರು. ಬೇಸಿಗೆ ರಜೆಯಲ್ಲಿ ಮಲ್ಲಪ್ಪನವರು ಆಸಕ್ತ ಮಕ್ಕಳಿಗೆ 10 ದಿನಗಳ ಸಂಸ್ಕೃತ ತರಗತಿ ಮಾಡುತ್ತಿದ್ದರು. ಮಕ್ಕಳು ಯಾವುದೇ ಹೊಸ ಭಾಷೆಗಳನ್ನು ಬೇಗನೆ ಕಲಿಯುತ್ತಾರೆ. ಸಂಸ್ಕೃತ ಎಲ್ಲಾ ಭಾಷೆಗಳಿಗೆ ಮಾತೃಭಾಷೆ. ಅದನ್ನು ಕಲಿಯಲು ಸುಲಭ ಎನ್ನುವ ಮಲ್ಲಪ್ಪನವರಿಗೆ ತಬಲಾ, ಹಾರ್ಮೊನಿಯಂ, ಕೀಬೋರ್ಡ್ ಮತ್ತು ಶಾಸ್ತ್ರೀಯ ಸಂಗೀತಗಳು ಗೊತ್ತಿದೆ. ಸಂಸ್ಕೃತ ಶ್ಲೋಕಗಳನ್ನು ಹೇಳಿಕೊಡುತ್ತಾರೆ. ಯೂಟ್ಯೂಬ್ ನಲ್ಲಿ ಮಕ್ಕಳಿಗೆ ಸಂಸ್ಕೃತ ಸಿನಿಮಾಗಳನ್ನು ತೋರಿಸುತ್ತಾರೆ ಎಂದರು.
ಇದೀಗ ಮಲ್ಲಪ್ಪನವರು ವೆಂಕಟ್ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ಸಂಸ್ಕೃತ ಹೇಳಿಕೊಡುತ್ತಾರೆ. ಅಲ್ಲಿ ಅವರಿಗೆ ಶಾಲೆಯ ಪ್ರಾಂಶುಪಾಲೆ ಸುಲೋಚನಾ ಬಾಲಕೃಷ್ಣ ಅವರ ಪ್ರೋತ್ಸಾಹ ಸಿಕ್ಕಿದೆ. 3ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ ಸಂಸ್ಕೃತ ಭಾಷೆ ಹೇಳಿಕೊಡುವ ಮಲ್ಲಪ್ಪ ಬೇಸಿಗೆ, ದಸರಾ ಮತ್ತು ಇತರ ಸರ್ಕಾರಿ ರಜೆಗಳ ದಿನಗಳಲ್ಲಿ ಕ್ಯಾಬ್ ಚಾಲಕರಾಗಿ ಸೇವೆ ಸಲ್ಲಿಸುತ್ತಾರೆ. 
ನನಗೆ ಎಲ್ಲೆಲ್ಲಾ ಸಂದರ್ಭ ಸಿಗುತ್ತದೆಯೋ, ಯಾರೆಲ್ಲ ಜೊತೆ ಸಾಧ್ಯವಾಗುತ್ತದೆಯೋ ಅವರ ಜೊತೆ ಸಂಸ್ಕೃತದಲ್ಲಿ ಮಾತನಾಡುತ್ತೇನೆ. ನನ್ನ ಮನೆಯಲ್ಲಿ  ಪತ್ನಿ ಮತ್ತು ಮಗ ಕೂಡ ಸಂಸ್ಕೃತ ಭಾಷೆ ಅರ್ಥ ಮಾಡಿಕೊಳ್ಳುತ್ತಾರೆ, ಅವರು ಕೂಡ ಮಾತನಾಡುತ್ತಾರೆ ಎನ್ನುತ್ತಾರೆ ಮಲ್ಲಪ್ಪ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com