ಗ್ರಾಮ ವಾಸ್ತವ್ಯ: ಯಾದಗಿರಿ ಜಿಲ್ಲೆಗೆ ಜಲಧಾರೆ ಯೋಜನೆಯಡಿ 1 ಸಾವಿರ ಕೋಟಿ ರೂ. ಘೋಷಿಸಿದ ಸಿಎಂ

ಜಲಧಾರೆ ಯೋಜನೆಯಡಿ ನದಿಯ ಮೂಲದ ನೀರನ್ನು ಯಾದಗಿರಿ ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರಗಳ ಪ್ರತಿ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು...
ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಹೆಚ್ ಡಿ ಕುಮಾರಸ್ವಾಮಿ
ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಹೆಚ್ ಡಿ ಕುಮಾರಸ್ವಾಮಿ
Updated on: 
ಯಾದಗಿರಿ: ಜಲಧಾರೆ ಯೋಜನೆಯಡಿ ನದಿಯ ಮೂಲದ ನೀರನ್ನು ಯಾದಗಿರಿ ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರಗಳ ಪ್ರತಿ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲು 1 ಸಾವಿರ ಕೋಟಿ ರೂ.ನೀಡಲಾಗುವುದು ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಶುಕ್ರವಾರ ಭರವಸೆ ನೀಡಿದ್ದಾರೆ.
ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಸಹಯೋಗದಲ್ಲಿ ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಚಂಡರಕಿಯಲ್ಲಿ ಏರ್ಪಡಿಸಿದ್ದ ಮುಖ್ಯಮಂತ್ರಿಗಳ ಜನತಾ ದರ್ಶನ ಹಾಗೂ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಈ ಹಿಂದೆ 2006ರಲ್ಲಿ ಗ್ರಾಮವಾಸ್ತವ್ಯ ಮಾಡಿದ್ದು ಫಲಪ್ರದವಾಗಿದೆ. ಈ ಬಾರಿ ಪ್ರತಿ ತಿಂಗಳು ಒಂದು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ವಾಸ್ತವ್ಯ ಮಾಡಲಾಗುವುದು ಎಂದರು.
ಚಂಡರಕಿ ಗ್ರಾಮದಿಂದ ಈ ಕಾರ್ಯಕ್ರಮ ಆರಂಭವಾಗಿದೆ. ಗ್ರಾಮಸ್ಥರ ಬೇಡಿಕೆಯಂತೆ ಗ್ರಾಮದಲ್ಲಿ ಪಶುಚಿಕಿತ್ಸಾಲಯ ಮಂಜೂರು ಮಾಡಲಾಗಿದೆ. ಪಶುವೈದ್ಯಾಧಿಕಾರಿಗಳನ್ನೂ ನೇಮಕ ಮಾಡಲಾಗಿದೆ. ಉತ್ತಮ ಆರೋಗ್ಯ ವ್ಯವಸ್ಥೆ ಕಲ್ಪಿಸಲು ಜಿಲ್ಲೆಯಲ್ಲಿ 300 ಹಾಸಿಗೆಗಳ ಜಿಲ್ಲಾ ಆಸ್ಪತ್ರೆ ಮಂಜೂರಾತಿಗೆ ಇಂದು ಆದೇಶ ಮಾಡಲಾಗಿದೆ.
ಜಿಲ್ಲಾ ಆಸ್ಪತ್ರೆಯಲ್ಲಿ ಸುಸಜ್ಜಿತ ತೀವ್ರ ನಿಗಾ ಘಟಕದ ಗುಣಮಟ್ಟ ಸುಧಾರಣೆ, ಆಸ್ಪತ್ರೆ ತಲುಪಲು ಅಗತ್ಯವಿರುವ ಸಂಪರ್ಕ ರಸ್ತೆ ನಿರ್ಮಿಸಲಾಗುವುದು. ಗ್ರಾಮ ವಾಸ್ತವ್ಯದ ಕಾರ್ಯಕ್ರಮ ಮೂಲಕ ಇಂದು ಎಲ್ಲಾ ಸಾರ್ವಜನಿಕರ ಅರ್ಜಿಗಳನ್ನು ಸಮಾಧಾನಕರವಾಗಿ ಪರಿಶೀಲಿಸಲಾಗುವುದು. ಸ್ಥಳದಲ್ಲಿಯೇ ಪರಿಹಾರ ಒದಗಿಸಲು ಸಾಧ್ಯವಿರುವ ಕಾರ್ಯಗಳಿಗೆ ಇಲ್ಲಿಯೇ ಆದೇಶ ನೀಡಲಾಗುವುದು. ಶಾಸಕ ಶರಣಬಸಪ್ಪ ದರ್ಶನಾಪುರ ಅವರ ಕೋರಿಕೆಯಂತೆ ಶಹಾಪುರ ಪಟ್ಟಣಕ್ಕೆ ಒಳಚರಂಡಿ ವ್ಯವಸ್ಥೆ ಅನುಷ್ಠಾನಗೊಳಿಸಲು ಸಂಬಂಧಿಸಿದ ಇಲಾಖೆಗೆ ಸೂಚಿಸಲಾಗಿದೆ. ಶಹಾಪುರಕ್ಕೆ ಶಾಶ್ವತ ಕುಡಿಯುವ ನೀರಿನ ಪೂರೈಕೆ ಯೋಜನೆಗೂ ಕ್ರಮವಹಿಸಲಾಗುವುದು ಎಂದರು.
ಸಾಲಮನ್ನಾ ಯೋಜನೆಯಡಿ 302 ಕೋಟಿ ರೂ.ಗಳನ್ನು ಸಹಕಾರ ಬ್ಯಾಂಕುಗಳಿಗೆ ಬಿಡುಗಡೆ ಮಾಡಿದೆ. ಸುಮಾರು 75 ಸಾವಿರ ರೈತರಿಗೆ ಈಗಾಗಲೇ ಸೌಲಭ್ಯ ದೊರೆತಿದೆ. ಉಳಿದ ರೈತರ ಸಾಲದ ಖಾತೆಗೆ ಜಮೆಯಾಗಬೇಕಿದ್ದ ಹಣವನ್ನು ಸಹಕಾರ ಬ್ಯಾಂಕುಗಳಿಂದ ಅಪೆಕ್ಸ್ ಬ್ಯಾಂಕಗಳಿಗೆ ಬಾಕಿ ಇರುವ ಹಣದ ಬಾಬತ್ತಿಗೆ ಜಮೆ ಮಾಡಿಕೊಂಡಿದ್ದಾರೆ. ಇದರಿಂದಾಗಿ ಸಾಲಮನ್ನಾ ಲೆಕ್ಕ ಚುಕ್ತಾ ಕಾರ್ಯ ವಿಳಂಬವಾಗಿದೆ. ಇದಕ್ಕೆ ಸರ್ಕಾರ ಕಾರಣವಲ್ಲ. ಹೊಸ ಸಾಲಗಳ ಬಿಡುಗಡೆಗೆ ಸಹಕಾರ ಬ್ಯಾಂಕುಗಳಿಗೆ 100 ಕೋಟಿ ರೂ.ಬಿಡುಗಡೆ ಮಾಡಲಾಗಿದೆ. ಹೈದರಾಬಾದ್ ಕರ್ನಾಟಕದ  ಜಿಲ್ಲೆಗಳಲ್ಲಿ ಕೈಗಾರಿಕಾ ಕ್ಲಸ್ಟರುಗಳನ್ನು ಸ್ಥಾಪಿಸಲಾಗುತ್ತಿದೆ ನಿರುದ್ಯೋಗ ನಿವಾರಣೆ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com