ಮಹಿಳಾ ದಿನ: ಆಟೋ ಚಾಲನೆ ಮೂಲಕ ಬದುಕು ಕಟ್ಟಿಕೊಂಡ ಗಟ್ಟಿ ಮಹಿಳೆ

ಈಕೆಗೀಗ 59 ವರ್ಷ, ಜೀವನ ನಿರ್ವಹಣೆಗಾಗಿ ಆಕೆ ಆಟೋ ಚಾಲಕಿಯಾಗಿ ದುಡಿಯುತ್ತಿದ್ದಾರೆ. ನೋವಿನ ನಡುವೆಯೇ ಆಕೆ 13 ವರ್ಷದ ಅನಾಥ ಮೊಮ್ಮಗನೊಂದಿಗೆಜೀವನೋಪಾಯಕ್ಕಾಗಿ ಹೋರಾಟ ಮಾಡುತ್ತಾ...
ಶಾಂತಾ ಎನ್.
ಶಾಂತಾ ಎನ್.
ಬೆಂಗಳೂರು: ಈಕೆಗೀಗ 59  ವರ್ಷ, ಜೀವನ ನಿರ್ವಹಣೆಗಾಗಿ ಆಕೆ ಆಟೋ ಚಾಲಕಿಯಾಗಿ ದುಡಿಯುತ್ತಿದ್ದಾರೆ. ನೋವಿನ ನಡುವೆಯೇ ಆಕೆ 13 ವರ್ಷದ ಅನಾಥ ಮೊಮ್ಮಗನೊಂದಿಗೆ ಜೀವನೋಪಾಯಕ್ಕಾಗಿ ಹೋರಾಟ ಮಾಡುತ್ತಾ ಬಂದಿದ್ದಾರೆ. 1992ರಿಂದ ಅವರ ಬದುಕಿನ ಏಕೈಕ ಸಂಗಾತಿಯಾಗಿರುವುದು ಒಂದು ಬಾಡಿಗೆಯ ಆಟೋರಿಕ್ಷಾ ಮಾತ್ರ. ಹೌದು ಇದು ಬೆಂಗಳೂರು ನಗರವಾಸಿ ಶಾಂತಾ ಎನ್. ಅವರ ಜೀವನ ಕಥೆ.
ತನ್ನ ಮೊಮ್ಮಗನಿಗೆ ಗುಣಮಟ್ಟದ ಶಿಕ್ಷಣ ನಿಡಬೇಕೆನ್ನುವ ಮಹದಾಸೆ ಹೊತ್ತಿರುವ ಶಾಂತಾ ಅವರಿಗೆ ಇದುವರೆಗೆ ಒಂದು ಸ್ವಂತ ಆಟೋರಿಕ್ಷಾ ಕೊಳ್ಳಲಾಗಲಿಲ್ಲ ಎಂಬ ಕೊರಗಿದೆ. ಈ ನಡುವೆ ಅವರ ದಾಖಲೆ ಪತ್ರಗಳೆಲ್ಲವೂ ಕಳೆದ ಕೆಲ ವರ್ಷದ ಹಿಂದೆ ಬೆಂಕಿಗಾಹುತಿಯಾಗಿ ಸುಟ್ಟು ಹೋಗಿದ್ದು ಆಕೆ ಅದರ ನಕಲನ್ನು ಪಡೆಯಲು ಸಾಕಷ್ಟು ಹೋರಾಟ ನಡೆಸಿದ್ದಾರೆ. ಸ್ವಂತ ಆಟೋರಿಕ್ಷಾ ಖರೀದಿಗಾಗಿ ಈ ದಾಖಲೆ ಪತ್ರಗಳು ಅವರಿಗೆ ಅಗತ್ಯವಾಗಿದೆ.
ಶಾಂತಾ ಅವರ ಮಗಳು ಎಂಟು ವರ್ಷಗಳ ಹಿಂದೆ ತೀರಿ ಹೋಗಿದ್ದಾರೆ. ಇನ್ನು ಅಳಿಯ ಸಹ ಎರಡು ವರ್ಷದ ಹಿಂದೆ ಕಾಲವಶರಾದರು. "ಅಲ್ಲಿಂದೀಚೆಗೆ ನನಗಿರುವ ಏಕೈಕ ಭರವಸೆ ನನ್ನ ಮೊಮ್ಮಗ ಮಾತ್ರ. ಆತ ಸೇಂಟ್ ಜೋಸೆಫ್ ಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿದ್ದಾನೆ/ನಾನು ಪ್ರತಿದಿನ ಅವನನ್ನು ಬೆಳಿಗ್ಗೆ ಎಂಟಕ್ಕೆ ಶಾಲೆ ಸಮೀಪ ಬಿಟ್ಟು ನಾನು ಬಾಡಿಗೆಗೆ ಆಟೋ ಓಡಿಸುತ್ತೇನೆ. ಮತ್ತೆ ಸಂಜೆ ನಾಲ್ಕಕ್ಕೆ ಅವನ ಶಾಲೆ ಮುಗಿದ ಬಳಿಕ ಅವನನ್ನು ಮನೆಗೆ ಕರೆದೊಯ್ಯುವೆ. ನನ ಪತಿ ಟೈಲರ್ ಆಗಿದ್ದು ಅವರು ಮನೆಯಲ್ಲೇ ಬಟ್ಟೆಗಳನ್ನು ಹೊಲಿಯುವ ಕಾಯಕದಲ್ಲಿದ್ದಾರೆ. ನಾವು ಬಾಡಿಗೆ ಮನೆಯಲಿ ವಾಸವಿದ್ದೇವೆ"
ಹತ್ತನೇ ತರಗತಿ ಮುಗಿಸಿ ಟೈಪ್ ರೈಟಿಂಗ್ ಪರೀಕ್ಷೆ ಕಟ್ಟಿದ್ದ ಶಾಂತಾ ಅವರಿಗೆ ಉದ್ಯೋಗವೇನೂ ಅಷ್ಟು ಸುಲಭವಾಗಿ ಸಿಕ್ಕಲಿಲ್ಲ. ಕಡೆಗೆ ಯಶವಂತಪುರ ಸಮೀಪ ಎನ್ ಜಿಒ ಒಂದು ನಡೆಸುತ್ತಿದ್ದ ಆಟೋ ಚಾಲನೆ ತರಬೇತಿಗಾಗಿ ಸೇರಿಕೊಂಡರು."ನಾನೇನೂ ವಾಹನ ಚಾಲನೆ ಬಗ್ಗೆ ಆಸಕ್ತಿ ಇದ್ದವಳಲ್ಲ, ನಾನು ಆಟೋ ಓಡಿಸುವದನ್ನು ಕಲಿಯುವವರೆಗೆ ಒಂದು ಸೈಕಲ್ ಸಹ ತುಳಿದಿರಲಿಲ್ಲ. ಆದರೆ ಎನ್ ಜಿಒ ಸದಸ್ಯರು ನನಗೆ ಪ್ರೋತ್ಸಾಹ ನೀಡಿದ್ದರು. ಅದೇ ವೇಳೆ ಬೆಂಗಳೂರು ಮಹಾನಗರ ಪಾಲಿಕೆ ಒಟ್ಟು 35  ಮಹಿಳೆಯರಿಗೆ ಆಟೋ ಓಡಿಸಲು ವಾಹನ ಚಾಲನಾ ಪರವಾನಗಿ ನೀಡಿತ್ತು. ಆದರೆ 1992ರಿಂದ ಇಂದಿನವರೆಗೆ ಇದೇ ಕಾಯಕದಲ್ಲಿರುವವಳು ನಾನು ಮಾತ್ರವೇ."
ಕಳೆದ ಕೆಲ ವರ್ಷದ ಹಿಂದೆ ಮಹಿಳಾ ಆಟೋ ಚಾಲಕಿಯರಿಗಾಗಿ ಬಿಬಿಎಂಪಿ "ಪಿಂಕ್ ಆಟೋ" ಖರೀದಿಸಲು ಎಪ್ಪತ್ತು ಸಾವಿರ ರು. ಸಬ್ಸಿಡಿ ನೀಡುವ ಯೋಜನೆ ಘೋಷಿಸಿತ್ತು. ಆಗ ಬಿಬಿಎಂಪಿಗೆ ಈ ಕುರಿತು ಅರ್ಜಿ ಸಲ್ಲಿಸಿದ್ದ ಶಾಂತಾ ಅವರಿಗೆ ಅವರ ಜಾತಿ ಪ್ರಮಾಣಪತ್ರ ಹಾಗೂ ಎಸ್.ಎಸ್.ಎಲ್.ಸಿ. ಅಂಕಪಟ್ಟಿಯಂತಹಾ ದಾಖಲೆಗಳನ್ನು ತರ ಹೇಳಲಾಗಿದೆ. ಆದರೆ ಬಹು ಹಿಂದೆ ಅವರು ನೀಲಸಂದ್ರ ಸ್ಲಂ ನಲ್ಲಿ ಶೆಡ್ ನಿವಾಸಿಯಾಗಿದ್ದಾಗ ಸಂಭವಿಸಿದ್ದ ಅಗ್ನಿ ಅನಾಹುತದಲ್ಲಿ ಅವರ ಎಲ್ಲಾ ಶೈಕ್ಷಣಿಕ ದಾಖಲೆಗಳು ಸುಟ್ಟು ಹೋಗಿದ್ದವಾಗಿ ಅವರು ಆ ದಾಖಲೆಗಳನ್ನು ನೀಡಲು ಸಾಧ್ಯವಾಗಲಿಲ್ಲ.
1992 ರಿಂದ ಇಲ್ಲಿಯವರೆಗೆ, ಶಾಂತಾ ಬಾಡಿಗೆ ಆಟೋವನ್ನೇ ಓಡಿಸುತ್ತಿದ್ದಾರೆ.ಇಂದು, ಅವರು ದಿನಕ್ಕೆ ರೂ 250 ಗಳನ್ನು ಆಟೋ ಮಾಲಿಕರಿಗೆ ಪಾವತಿಸುತ್ತಾರೆ. ಇದಕ್ಕಿಂತ ಹೆಚ್ಚು ಗಳಿಕೆಯಾದದ್ದು ಮಾತ್ರ ಅವರ ಪಾಕೆಟ್ ಗೆ ಹೋಗಲಿದೆ.ತನ್ನ ಮೊಮ್ಮಗನ ಶಿಕ್ಷಣ, ಆಟೋ ಚಾಲನೆಯ ಸಮಯ ಪರಿಪಾಲನೆ ಎಲ್ಲದರ ನಡುವೆಯೂ ಇಂದಿಗೂ ಅವರು ತಮ್ಮ ಶಿಕ್ಷಣ ದಾಖಲೆಗಳ ನಕಲು ಪ್ರತಿ ಪಡೆದುಕೊಳ್ಲಲು ಹೋರಾಟ ನಡೆಸಿದ್ದಾರೆ. ಆ ನಕಲು ಪ್ರತಿಗಳನ್ನು ಬಳಸಿ ಆಕೆ ಹೊಸದಾದ ಸ್ವಂತ ಆಟೋ ಖರೀದಿಸಬೇಕೆನ್ನುವುದು ಅವರ ಬಹುದೊಡ್ಡ ಕನಸಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com