
ಬೆಂಗಳೂರು: ಜೈಲಿಗೆ ಹೋಗಿ ಬಂದವರಿಗೆ ಹಾರ ತುರಾಯಿ ಹಾಕುವ ಸಂಸ್ಕೃತಿ ಸಲ್ಲದು, ಗಾಂಧೀಜಿ ಕೂಡಾ ಜೈಲಿಗೆ ಹೋಗಿದ್ದರು ಎನ್ನುವ ಉಡಾಫೆ ಮಾತು ಸಹಿಸಲು ಸಾಧ್ಯವಿಲ್ಲ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಹೇಳಿದ್ದಾರೆ.
ಹಾರ್ವರ್ಡ್ ಗ್ರೂಪ್ ಆಫ್ ಇನ್ಸಿಟ್ಯೂಟ್ ನಲ್ಲಿ ನಡೆದ ಕನ್ನಡರಾಜ್ಯೋತ್ಸವ ಹಾಗೂ ಗಾಂಧೀಜಿ ಸ್ಮರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಸಂತೋಷ್ ಹೆಗ್ಡೆ, ಮಹಾತ್ಮ ಗಾಂಧೀಜಿ ನೇತೃತ್ವದಲ್ಲಿ ನಡೆದ ಹೋರಾಟದ ಫಲವಾಗಿ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಆದರೆ ನಿಜವಾದ ಸ್ವಾತಂತ್ರ್ಯ ಪ್ರಜೆಗಳಿಗೆ ಇನ್ನೂ ಲಭಿಸಿಲ್ಲ.ರಾಜ ಮಹಾರಾಜರ ಕಾಲದಲ್ಲಿದ್ದ ಸಿಂಹಾಸನಗಳೆಂಬ ಪಳೆಯುಳಿಕೆಗಳ ಮೇಲೆ ಈಗ ರಾಜಕಾರಣಿಗಳು ವಿರಾಜಮಾನರಾಗಿದ್ದು, ಕೆಲವೇ ಕೆಲವು ರಾಜಕಾರಣಿಗಳು ಅರಸೊತ್ತಿಗೆಯ ಸುಖ, ಸಂಪತ್ತಿನಲ್ಲಿ ತೇಲಾಡುತ್ತಿದ್ದಾರೆ ಎಂದರು.
ರಾಜಕಾರಣಿಗಳಿಗೆ ಈಗ ಎಲ್ಲಾ ರೀತಿಯ ಸೌಲಭ್ಯಗಳಿವೆ. ಜನ ಎಷ್ಟೇ ತೊಂದರೆಯಲ್ಲಿದ್ದರೂರಾಜಕಾಣಿಗಳು ಯಾವುದೇ ಮುಜುಗರವಿಲ್ಲದೇ ಜಿರೋ ಟ್ರಾಫಿಕ್ ನಲ್ಲಿ ಸಂಚರಿಸುತ್ತಾರೆ. ಪ್ರಜೆಗಳಿಂದ, ಪ್ರಜೆಗಳಿಗೋಸ್ಕರ ಎನ್ನುವ ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ. ನಾವೀಗ ಪ್ರಜಾ ಪ್ರಭುತ್ವದ ಆಶಯವನ್ನು ಸಾಕಾರಗೊಳಿಸಲು ವ್ಯವಸ್ಥೆಯಲ್ಲಿ ಬದಲಾವಣೆ ತರುವ ಅಗತ್ಯವಿದೆ. ಇದಕ್ಕಾಗಿ ಎಲ್ಲರೂ ಕೈ ಜೋಡಿಸಬೇಕಾಗಿದೆ ಎಂದು ಸಂತೋಷ್ ಹೆಗ್ಡೆ ಕರೆ ನೀಡಿದರು.
Advertisement