![ಸಂಗ್ರಹ ಚಿತ್ರ](http://media.assettype.com/kannadaprabha%2Fimport%2F2019%2F11%2F8%2Foriginal%2Fbar-name.jpg?w=480&auto=format%2Ccompress&fit=max)
ಬೆಂಗಳೂರು: ಬಾರ್ ಮತ್ತು ರೆಸ್ಟೋರೆಂಟ್'ಗಳು ಹಾಗೂ ಮದ್ಯ ಮಾರಾಟ ಮಳಿಗೆಗಳಿಗೆ ದೇವರ ಹೆಸರು ನಾಮಕರಣ ಮಾಡದಂತೆ ನಿಷೇಧ ಹೇರಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದ್ದು, ಈ ವಿಚಾರ ಇದೀಗ ಚರ್ಚೆಗೆ ಗ್ರಾಸವಾಗಿದೆ.
ಮದ್ಯ ಮಾರಾಟ ಕೇಂದ್ರಗಳ ನಾಮಫಲಕಗಳಿಂದ ದೇವರ ಹೆಸರು ತೆರವುಗೊಳಿಸುವ ಕುರಿತು ಕಾನೂನು ಮತ್ತು ಅಬಕಾರಿ ಇಲಾಖೆಗಳ ಅಭಿಪ್ರಾಯ ಪಡೆಯುವಂತೆ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ತಮ್ಮ ಇಲಾಖೆಯ ಅಧಿಕಾರಿಗಳಿಗೆ ಈ ಹಿಂದೆ ಸೂಚನೆ ನೀಡಿದ್ದರು.
ಸಾಕಷ್ಟು ಬಾರ್ ಅಥವಾ ಮದ್ಯ ಮಾರಾಟ ಕೇಂದ್ರಗಳಿಗೆ ಮಹಾ ಗಣಪತಿ, ರಾಘವೇಂದ್ರ, ಮಂಜುನಾಥ, ವೆಂಕಟೇಶ ಎಂಬಿತ್ಯಾದಿ ದೇವರ ಹೆಸರುಗಳನ್ನು ಇಡಲಾಗಿರುತ್ತದೆ. ಇದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದರ ಜೊತೆಗೆ ದೇವರಿಗೆ ಅಗೌರವ ಸೂಚಿಸಿದಂತಾಗುತ್ತದೆ. ಹೀಗಾಗಿ ಇನ್ನು ಮುಂದೆ ಬಾರ್ ಗಳಿಗೆ ದೇವರ ಹೆಸರು ಇಡದಂತೆ ನಿಷೇಧ ಹೇರಲು ಹಾಗೂ ಹಾಲಿ ಇರುವ ಹೆಸರುಗಳನ್ನು ತೆಗೆಸಿಹಾಕಲು ಸಂಬಂಧ ಪಟ್ಟ ಕಾಯ್ದೆಗೆ ತಿದ್ದುಪಡಿ ಮಾಡಲು ಇಲಾಖೆ ಚಿಂತನೆ ನಡೆಸಿದೆ.
ಹುಬ್ಬಳ್ಳಿಯ ಹಳೇ ಬಸ್ ನಿಲ್ದಾಣದ ಬಳಿಯಿರುವ ಬಾರ್ ಮಾಲೀಕ ಮಂಜುನಾಥ್ ಮಾತನಾಡಿ, ಬಾರ್'ಗೆ ನನ್ನ ಹೆಸರನ್ನೇ ಇಡಲಾಗಿದೆ. ನನ್ನ ಹೆಸರು ದೇವರ ಹೆಸರೂ ಕೂಡ ಹೌದು. ಬಾರ್ ಹೆಸರು ಎಲ್ಲರಿಗೂ ಚಿರಪರಿಚಿತವನಾಗಿದೆ. ಹೆಸರು ಬದಲಾವಣೆ ಮಾಡುವ ಚಿಂತನೆ ಉತ್ತಮ ಆಲೋಚನೆಯಲ್ಲ ಎಂದು ಹೇಳಿದ್ದಾರೆ.
ಹುಬ್ಬಳ್ಳಿ ಕಾರವಾರ ರಸ್ತೆಯಲ್ಲಿರುವ ದುರ್ಗಾ ವೈನ್ ಶಾಪ್ ಮಾಲೀಕ ಮಾತನಾಡಿ, ಕಳೆದ 20 ವರ್ಷಗಳಿಂದಲೂ ಬಾರ್'ಗೆ ದೇವರ ಹೆಸರನ್ನಿಡಲಾಗಿದೆ. ನಮ್ಮ ಮನೆಯ ದೇವರ ಹೆಸರನ್ನು ಇಡಲಾಗಿದೆ. ವ್ಯವಹಾರ ಉತ್ತಮವಾಗಿ ನಡೆಯುವ ಸಲುವಾಗಿ ಇಟ್ಟಿದ್ದೇವೆ. ಇದೇ ಹೆಸರಿನಲ್ಲೇ ಜನರು ನಮ್ಮ ಅಂಗಡಿಯನ್ನು ಗುರ್ತಿಸುತ್ತಿದ್ದಾರೆ. ಸರ್ಕಾರ ನಿಯಮ ಬದಲಿಸಿದರೆ ಅದು ನಮ್ಮ ಭಾವನೆಗಳಿಗೂ ನೋವುಂಟು ಮಾಡುತ್ತದೆ. ಪರವಾನಗಿ ಕೊಡುವಾಗ ನಮಗೆ ಇಂತಹ ಯಾವುದೇ ನಿಯಮಗಳ ಬಗ್ಗೆ ಮಾಹಿತಿ ನೀಡಿರಲಿಲ್ಲ ಎಂದು ತಿಳಿಸಿದ್ದಾರೆ.
ಕಳೆದ 2 ವರ್ಷಗಳಲ್ಲಿ ಹುಬ್ಬಳ್ಳಿ ಹಾಗೂ ಧಾರವಾಡಗಳಲ್ಲಿ ಮದ್ಯ ಮಾರಾಟದ ಅಂಗಡಿಗಳ ಸಂಖ್ಯೆ ಹೆಚ್ಚಾಗಿದೆ. ಹಳೆಯದಾಗಿರುವ ಸಾಕಷ್ಟು ಮದ್ಯದ ಅಂಗಡಿಗಳಿಗೆ ದೇವರ ಹೆಸರುಗಳನ್ನೇ ಹೆಚ್ಚು ಇಡಲಾಗಿದೆ. ಸರ್ಕಾರ ನಿಯಮ ಬದಲಾಯಿಸಿದ್ದೇ ಆದರೆ, ಅದನ್ನು ನಾವು ಜಾರಿಗೆ ತರಲೇಬೇಕಾಗುತ್ತದೆ ಎಂದು ಅಬಕಾರಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
Advertisement