
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸಂಚಾರಿ ನಿಯಮಗಳ ತಡೆಗೆ ಸಂಚಾರಿ ನಿಯಮಗಳ ತಡೆಗೆ ಪೊಲೀಸರು ಹೊಸ ಐಡಿಯಾ ಮಾಡಿದ್ದಾರೆ. ಥೇಟ್ ಸಂಚಾರಿ ಪೊಲೀಸರಂತೆ ಕಾಣುವ ಸಮವಸ್ತ್ರ ಧರಿಸಿದ ಬೊಂಬೆಯನ್ನು ನಗರದ ಪ್ರಮುಖ ರಸ್ತೆಗಳಲ್ಲಿ ನಿಲ್ಲಿಸಲಾಗುತ್ತಿದೆ.
ರಿಪ್ಲೆಕ್ಟರ್ ಜಾಕೆಟ್, ಹ್ಯಾಟ್ಸ್, ಬೂಟ್ಸ್ , ಮಾಸ್ಕ್ , ಸನ್ ಗ್ಲಾಸ್ ನೊಂದಿಗೆ ಪೊಲೀಸ್ ಸಮವಸ್ತ್ರ ಧರಿಸಿರುವ ಈ ಬೊಂಬೆ ನೋಡಲು ನಿಜವಾದ ಸಂಚಾರಿ ಪೊಲೀಸರು ನಿಂತಿರುವಂತೆ ಭಾಸವಾಗುತ್ತಿದ್ದು, ದೂರದಿಂದ ನಿಯಮ ಉಲ್ಲಂಘನೆಗೆ ಹೊಂಚು ಹಾಕುವ ವಾಹನ ಸವಾರರು ನಿಯಮ ಉಲ್ಲಂಘನೆ ಕೈ ಬಿಟ್ಟು, ಸಂಚಾರ ನಿಯಮ ಪಾಲಿಸುತ್ತಿರುವುದು ಕಂಡುಬಂದಿದೆ.
ಕೆಂಗೇರಿ, ರಾಜಾಜಿನಗರ, ಕೋರಮಂಗಲ ಸೇರಿದಂತೆ ಬೆಂಗಳೂರಿನ ವಿವಿಧ ಜಂಕ್ಷನ್ ಗಳಲ್ಲಿ ಸುಮಾರು 200ಕ್ಕೂ ಹೆಚ್ಚು ಮ್ಯಾನಿಕ್ವಿನ್ಸ್ ಗಳನ್ನು ನಿಲ್ಲಿಸಲಾಗುತ್ತಿದೆ. ವಾಹನ ಸವಾರರ ಸಂಚಾರಿ ನಿಯಮ ಉಲ್ಲಂಘನೆ ತಡೆಯಲು ಮುಂದಿನ ದಿನಗಳಲ್ಲಿ ರಿಯಲ್ ಪೊಲೀಸರ ಬದಲು ಈ ಮ್ಯಾನಿಕ್ವಿನ್ಸ್ ಗಳನ್ನು ಎಲ್ಲೆಡೆ ಹಾಕಲಾಗುವುದು ಎಂದು ಸಂಚಾರಿ ವಿಭಾಗದ ಜಂಟಿ ಕಮೀಷನರ್ ಬಿ. ಆರ್. ರವಿಕಾಂತೇಗೌಡ ಹೇಳಿದ್ದಾರೆ.
ಸುರಕ್ಷತೆಗಾಗಿ ಪ್ರತಿಯೊಬ್ಬರು ಸಂಚಾರಿ ನಿಯಮ ಪಾಲಿಸುವಂತೆ ಪ್ರಯತ್ನ ಮಾಡುತ್ತಿದ್ದೇವೆ. ಇದರಿಂದಾಗಿ ಇತರ ವಾಹನ ಸವಾರರು ಹಾಗೂ ಪಾದಚಾರಿಗಳು ಟ್ರಾಫಿಕ್ ಜಾಮ್ ಗೆ ಸಿಲುಕದೆ ಸುಗಮವಾಗಿ ಸಂಚರಿಸಬಹುದಾಗಿದೆ ಎಂದು ಮತ್ತೊಬ್ಬ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಮ್ಯಾನಿಕ್ವಿನ್ಸ್ ನಿಂದ ವಾಹನ ಸವಾರರು ಜಂಪಿಂಗ್ ಸಿಗ್ನಲ್ ಹಾಗೂ ಚಾಲನೆ ವೇಳೆ ಮೊಬೈಲ್ ಬಳಕೆಯನ್ನು ತಡೆಯಬಹುದಾಗಿದೆ ಎಂದು ಅನೇಕ ಮಂದಿ ಭರವಸೆ ವ್ಯಕ್ತಪಡಿಸಿದ್ದಾರೆ.
Advertisement