ಹುತಾತ್ಮ ಅರಣ್ಯ ಸಿಬ್ಬಂದಿ ಪರಿಹಾರ 30 ರೂ.ಲಕ್ಷಕ್ಕೆ ಹೆಚ್ಚಳ: ಸಿಎಂ ಯಡಿಯೂರಪ್ಪ

ಕರ್ತವ್ಯದಲ್ಲಿದ್ದಾಗ ಹುತಾತ್ಮರಾಗುವ ಅರಣ್ಯ ಇಲಾಖೆ ಸಿಬ್ಬಂದಿ ಕುಟುಂಬಗಳಿಗೆ ನೀಡಲಾಗುತ್ತಿರುವ ಪರಿಹಾರ ಮೊತ್ತವನ್ನು 20 ಲಕ್ಷ ರೂ. ಗಳಿಂದ 30 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ಅರಣ್ಯ ಭವನದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ
ಅರಣ್ಯ ಭವನದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ
Updated on

ಬೆಂಗಳೂರು: ಕರ್ತವ್ಯದಲ್ಲಿದ್ದಾಗ ಹುತಾತ್ಮರಾಗುವ ಅರಣ್ಯ ಇಲಾಖೆ ಸಿಬ್ಬಂದಿ ಕುಟುಂಬಗಳಿಗೆ ನೀಡಲಾಗುತ್ತಿರುವ ಪರಿಹಾರ ಮೊತ್ತವನ್ನು 20 ಲಕ್ಷ ರೂ. ಗಳಿಂದ 30 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

ನಗರದ ಅರಣ್ಯ ಭವನದಲ್ಲಿಂದು ಏರ್ಪಡಿಸಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಹುತಾತ್ಮ ಅರಣ್ಯ ಸಿಬ್ಬಂದಿಗೆ ಗೌರವ ಸಲ್ಲಿಸಿದ ನಂತರ ಮಾತನಾಡಿ, ರಾಜ್ಯದಲ್ಲಿ ಒಟ್ಟು ಭೌಗೋಳಿಕ ವಿಸ್ತೀರ್ಣದ ಶೇ. 22ರಷ್ಟು ಅರಣ್ಯ ಪ್ರದೇಶ ಇರುವುದು ನೆಮ್ಮದಿ ನೀಡುವ ವಿಚಾರ. ಇದಕ್ಕಾಗಿ ಹಗಲಿರುಳು ಶ್ರಮಿಸುವ ಅರಣ್ಯ ಸಿಬ್ಬಂದಿಯ ಕಾಯಕ ಶ್ಲಾಘನೀಯ ಎಂದರು. ಅರಣ್ಯ ಇಲಾಖೆ ಸಿಬ್ಬಂದಿ ಕರ್ತವ್ಯದಲ್ಲಿರುವಾಗ ಮೃತಪಟ್ಟರೆ ನೀಡುವ ಪರಿಹಾರ ಮೊತ್ತವನ್ನು ಪೊಲೀಸ್ ಇಲಾಖೆಗೆ ಸರಿ ಸಮನಾಗಿ ಹೆಚ್ಚಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು. ಅಲ್ಲದೆ, ಹುತಾತ್ಮರ ಕುಟುಂಬಗಳ ಕ್ಷೇಮಾಭಿವೃದ್ಧಿಗೂ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

ದಿನಗೂಲಿ ನೌಕರರ ಸಮಸ್ಯೆ ಕುರಿತು ಸಹ ಚರ್ಚಿಸಿ ಶೀಘ್ರವೇ ಕ್ರಮ ಕೈಗೊಳ್ಳುವುದು. ಅರಣ್ಯ ಸಂಪತ್ತು ಮತ್ತು ವನ್ಯಜೀವಿಗಳ ಸಂರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿ ಸರ್ವೋಚ್ಛ ತ್ಯಾಗವನ್ನು ಮಾಡಿದಂತಹ ಸಮರ್ಪಣಾ ಮನೋಭಾವದ ಹಲವಾರು ಅರಣ್ಯ ಅಧಿಕಾರಿಗಳ ಹೆಸರುಗಳು ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಇಂದಿಗೂ ಹಚ್ಚಹಸಿರಾಗಿ ರಾರಾಜಿಸುತ್ತಿವೆ. ಇವರ ಅಸಾಧಾರಣ ಪ್ರಯತ್ನಗಳು, ಧೈರ್ಯಶೀಲ ಕಾರ್ಯಗಳು ಅಪಾಯಕ್ಕೆ ಒಳಗಾದ, ನೈಸರ್ಗಿಕ ಸಂಪನ್ಮೂಲಗಳನ್ನು ಮತ್ತು ವನ್ಯಜೀವಿಗಳನ್ನು ಸಂರಕ್ಷಿಸಿ ಕಾಪಾಡಲು ಮುಂದಿನ ಪೀಳಿಗೆಗೆ ಸ್ಪೂರ್ತಿಯಾಗಿದೆ ಎಂದು ಮುಖ್ಯಮಂತ್ರಿ ಗಳು ಬಣ್ಣಿಸಿದರು.

ಅರಣ್ಯ ಸಂಪತ್ತಿನ ರಕ್ಷಣೆ ಮಾಡುವಾಗ ದುರಾದೃಷ್ಟವಶಾತ್ ಕಳ್ಳಕಾಕರ, ವನ್ಯಪ್ರಾಣಿಗಳ ಹಾಗೂ ಇತರೆ ದುಷ್ಟಶಕ್ತಿಗಳ ದಾಳಿಗೆ ಸಿಲುಕಿ ಈವರೆಗೆ 47 ಅರಣ್ಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಹುತಾತ್ಮರಾಗಿದ್ದಾರೆ. ಈ ಹಿಂದೆ ಕುಖ್ಯಾತ ಕಾಡುಗಳ್ಳ ವೀರಪ್ಪನ್‍ನ ಮೋಸದ ಬಲೆಗೆ ಸಿಲುಕಿ  ಶ್ರೀ ಪಿ. ಶ್ರೀನಿವಾಸ್, ಭಾರತೀಯ ಅರಣ್ಯ ಸೇವಾ ಅಧಿಕಾರಿ ಇವರು ಹುತಾತ್ಮರಾಗಿದ್ದರು. ಇವರು ಸಹ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು. ಇವರ ಕಾರ್ಯದಕ್ಷತೆ ಪ್ರಾಮಾಣಿಕತೆ ಹಾಗೂ ಅಮೋಘ ಸೇವೆಯನ್ನು ಮೆಚ್ಚಿ ಭಾರತ ಸರ್ಕಾರ ಇವರಿಗೆ “ಕೀರ್ತಿ ಚಕ್ರ” ಶೌರ್ಯ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಿ ಗೌರವಿಸಿರುವುದನ್ನು ಮುಖ್ಯಮಂತ್ರಿಗಳು ಸ್ಮರಿಸಿದರು.

ಕರ್ತವ್ಯ ನಿರ್ವಹಿಸುವಾಗ ಕಾಡಾನೆಯ ದಾಳಿಯಿಂದ ಮೃತಪಟ್ಟ ಕ್ಷೇಮಾಭಿವೃದ್ಧಿ ನೌಕರರಾದ ಕಾವೇರಿ ವನ್ಯಜೀವಿ ವಿಭಾಗದ ಅಲಗಾ ಹಾಗೂ ಹಾಸನ ವಿಭಾಗದ ಎಲ್.ಎನ್. ಅಣ್ಣೇಗೌಡ ಇವರಿಗೆ ಶ್ರದ್ಧಾಂಜಲಿ ಅರ್ಪಿಸಿದ ಅವರು ಆನೆಗಳ ದಾಳಿಯಿಂದ ಪ್ರಾಣ ಹಾನಿ, ರೈತರ ಬೆಳೆ ಹಾನಿ ಹಾಗೂ      ಆರ್ಥಿಕ ಸಂಕಷ್ಟವನ್ನು ಪರಿಗಣಿಸಿ ಮಾನವ – ಆನೆ ಸಂಘರ್ಷ ನಿಯಂತ್ರಣಕ್ಕೆ ಸರ್ಕಾರ ಯೋಜನೆ ರೂಪಿಸಿದೆ. ರಾಜ್ಯದ ಅರಣ್ಯ ಸಂಪತ್ತು ಮತ್ತು ವನ್ಯಜೀವಿ ಸಂರಕ್ಷಣೆಗಾಗಿ ಅರಣ್ಯ ಇಲಾಖೆಯನ್ನು ಇನ್ನಷ್ಟು ಸದೃಢಗೊಳಿಸಬೇಕಾಗಿದ್ದು, ಅದಕ್ಕಾಗಿ ವಿವಿಧ ಹಂತದ ಕ್ಷೇತ್ರ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಿಸಲು ಸರ್ಕಾರ ಕ್ರಮ ಕೈಗೊಂಡಿರುತ್ತದೆ ಎಂದರು.

 ಅರಣ್ಯ ಪ್ರದೇಶಗಳಲ್ಲಿ ಬೇಟೆ ಹಾಗೂ ಅಕ್ರಮ ಚಟುವಟಿಕೆಗಳ ನಿಗ್ರಹಕ್ಕಾಗಿ ಅತ್ಯಾಧುನಿಕ ಸಲಕರಣೆಗಳನ್ನು ಅರಣ್ಯ ಸಿಬ್ಬಂದಿಗೆ ಪೂರೈಸಲಾಗುತ್ತಿದೆ. ಈ ಕ್ರಮ ಸಿಬ್ಬಂದಿಯ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದರೊಂದಿಗೆ ಕಳ್ಳಬೇಟೆ ಮೇಲೂ ಕಣ್ಣಿಡಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.   ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಸಂದೀಪ್ ದವೆ , ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪುನ ಟಿ ಶ್ರೀಧರ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com