ಸರ್ಕಾರದ ಸ್ಥಿರತೆಗಾಗಿ ಯಜ್ಞ, ಹೋಮ ನಡೆಸಿದ ಸಿಎಂ ಯಡಿಯೂರಪ್ಪ
ಚಿಕ್ಕಮಗಳೂರು: ಸರ್ಕಾರದ ಸ್ಥಿರತೆ ಹಾಗೂ ರಾಜ್ಯ ಕಲ್ಯಾಣಕ್ಕಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಚಿಕ್ಕಮಗಳೂರು ಜಿಲ್ಲೆಯ ಗೌರಿಗಡ್ಡೆ ಆಶ್ರಮದಲ್ಲಿ ಗುರುವಾರ ಯಜ್ಞ, ಹೋಮ ನಡೆಸಿದ್ದಾರೆ.
ಸ್ವರ್ಣ ಪೀಠಿಕೇಶ್ವರಿ ದತ್ತಾಶ್ರಮದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಿಜೆಪಿ ಹಿರಿಯ ನಾಯಕರು 2 ಗಂಟೆಗಳ ಕಾಲ ಸುಧೀರ್ಘವಾಗಿ ಸತ ರುದ್ರ ಯಜ್ಞದಲ್ಲಿ ಭಾಗಿಯಾಗಿದ್ದರು ಎಂದು ವರದಿಗಳು ತಿಳಿಸಿವೆ.
ಒಂದೆಡೆ ಸರ್ಕಾರದ ಸ್ಥಿರತೆಗಾಗಿ ಯಜ್ಞ ನಡೆಸಲಾಗುತ್ತಿದೆ ಎಂದು ಹೇಳಲಾಗುತ್ತಿದ್ದು, ಮತ್ತೊಂದೆಡೆ ಬಿಜೆಪಿ ನಾಯಕರು ರಾಜ್ಯದ ಕಲ್ಯಾಣಕ್ಕಾಗಿ ನಡೆಸಲಾಗಿದೆ ಎಂದು ಹೇಳುತ್ತಿದ್ದಾರೆ.
6 ದಿನಗಳ ಕಾಲ ಸುಧೀರ್ಘವಾಗಿ ನಡೆಯಿರುವ ಹೋಮ ನಿನ್ನೆ ಅಂತ್ಯಗೊಂಡಿದ್ದು, ಪೂರ್ಣಾಹುತಿ ಹಾಗೂ ಯಜ್ಞದಲ್ಲಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕರು ಹಾಗೂ ಸಂಸದೆ ಶೋಭಾ ಕರಂದ್ಲಾಜೆಯವರು ಭಾಗಿಯಾಗಿದ್ದರು. ಪೂಜೆ ವೇಳೆ ಮುಂದಿನ ಮೂರುವರೆ ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರೆಯುವಂತೆ ಯಡಿಯೂರಪ್ಪ ಅವರು ಬೇಡಿಕೊಂಡಿದ್ದಾರೆಂದು ಮೂಲಗಳು ತಿಳಿಸಿವೆ.
ಮೈತ್ರಿ ಸರ್ಕಾರಕ್ಕೆ ಧಕ್ಕೆಯುಂಟಾದ ಸಂದರ್ಭದಲ್ಲೂ ಕುಮಾರಸ್ವಾಮಿ ಹಾಗೂ ದೇವೇಗೌಡ ಅವರು ಇದೇ ಆಶ್ರಮಕ್ಕೆ ಭೇಟಿ ನೀಡಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ