ಸಾರಿಗೆ ಅದಾಲತ್ ನಲ್ಲಿ ಆರ್ ಟಿಓ ಅಧಿಕಾರಿಗಳಿಂದ ಆಟೋ ಚಾಲಕರಿಗೆ ಕಿರುಕುಳ ಆರೋಪ
ಬೆಂಗಳೂರು: ಯಶವಂತಪುರದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನಿನ್ನೆ ನಡೆದ ಸಾರಿಗೆ ಅದಾಲತ್ ನಲ್ಲಿ ನೂತನ ಮೋಟಾರು ವಾಹನಗಳ ಕಾಯ್ದೆಯಡಿ ವಿನಾಕಾರಣ ದಂಡ ವಿಧಿಸುತ್ತಿರುವ ಬಗ್ಗೆ ಆಟೋ ಚಾಲಕರು ಧ್ವನಿ ಎತ್ತಿದ್ದಾರೆ.
ವಿಮೆ ಹಾಗೂ ಫಿಟ್ನೆಸ್ ಸರ್ಟಿಫಿಕೇಟ್ ಇಲ್ಲ ಎಂದು ಆರ್ ಟಿಓ ಅಧಿಕಾರಿಗಳು ಪ್ರಕರಣ ದಾಖಲಿಸುತ್ತಿದ್ದಾರೆ. ಆದಾಗ್ಯೂ, ನೋಂದಣಿ ಹಾಗೂ ಅನುಮತಿ ಇಲ್ಲದೆ ವಾಹಾನಗಳ ಚಾಲನೆಗೆ ಸಂಬಂಧಿಸಿದ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 192 ರ ಹೆಸರಿನಲ್ಲಿ ತಪ್ಪಾಗಿ ಪ್ರಕರಣ ದಾಖಲಿಸಲಾಗುತ್ತಿದೆ. ಈ ಅಪರಾಧಗಳಿಗೆ ಬೇರೆ ಬೇರೆ ರೀತಿಯಲ್ಲಿ ದಂಡ ವಿಧಿಸಲಾಗುತ್ತದೆ ಎಂದು ಅದಾಲತ್ ನಲ್ಲಿ ಪಾಲ್ಗೊಂಡಿದ್ದ ಆಟೋ ಡ್ರೈವರ್ ಜಯರಾಮ್ ಆರೋಪಿಸಿದ್ದಾರೆ.
ಆಟೋ ಲೈಸೆನ್ಸ್ ನವೀಕರಿಸಲು ಬ್ಯಾಡ್ಜ್ ಪಡೆಯಬೇಕಾಗುತ್ತದೆ. ಅದಕ್ಕಾಗಿ ಡ್ರೈವಿಂಗ್ ಶಾಲೆಗಳನ್ನು ಸಂಪರ್ಕಿಸಿದರೆ ಫಾರಂ14ಪಡೆಯಬೇಕಾದರೆ ಹಣ ನೀಡಬೇಕಾಗುತ್ತದೆ. ಡ್ರೈವಿಂಗ್ ಶಾಲೆಗಳಿಂದ ನಮಗೆ ಯಾವುದೇ ತರಬೇತಿ ಸಿಗದ ಕಾರಣ ಇದನ್ನು ಆರ್‌ಟಿಒ ಕಚೇರಿಗಳಲ್ಲಿ ಉಚಿತವಾಗಿ ಲಭ್ಯವಾಗಬೇಕು ಎಂದು ಮತ್ತೊಬ್ಬ ಆಟೋ ಡ್ರೈವರ್ ಚಂದ್ರು ಹೇಳುತ್ತಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಾದೇಶಿಕ ಸಾರಿಗೆ ಅಧಿಕಾರಿ ಮಂಜುನಾಥ್, ಸಭೆಯ ನಡಾವಳಿಗಳನ್ನು ದಾಖಲಿಸಲಾಗುತ್ತದೆ ಮತ್ತು ಮುಂದಿನ ಕ್ರಮಕ್ಕಾಗಿ ಉನ್ನತ ಅಧಿಕಾರಿಗಳಿಗೆ ಕಳುಹಿಸಲಾಗುತ್ತದೆ ಎಂದು ಹೇಳಿದರು. ಆದರೆ, ಯಾವುದೇ ಉನ್ನತ ಅಧಿಕಾರಿಗಳು ಈ ಅದಾಲತ್ ನಲ್ಲಿ ಪಾಲ್ಗೊಂಡಿರಲಿಲ್ಲ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ