ಬೆಂಗಳೂರು: ರೈಲ್ವೆ ಹಳಿ ಮೇಲೆ ಟಿಕ್ ಟಾಕ್ ವಿಡಿಯೋ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಇಬ್ಬರು ಯುವಕರು
ಬೆಂಗಳೂರು: ಟಿಕ್ ಟಾಕ್ ವಿಡಿಯೋ ಹುಚ್ಚಿನಿಂದಾಗಿ ದೇಶ-ವಿದೇಶಗಳಲ್ಲಿ ಹಲವರು ಪ್ರಾಣ ಕಳೆದುಕೊಂಡಿದ್ದು, ಶುಕ್ರವಾರ ಬೆಂಗಳೂರಿನಲ್ಲೂ ಇಬ್ಬರು ಯುವಕರ ರೈಲ್ವೆ ಹಳಿ ಮೇಲೆ ಟಿಕ್ ಟಾಕ್ ವಿಡಿಯೋ ಮಾಡಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೆ ವಿಡಿಯೋ ಮಾಡುತ್ತಿದ್ದ ಮತ್ತೊಬ್ಬ ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಿನ್ನೆ ಸಂಜೆ ಯಲಹಂಕ ಮತ್ತು ಚನ್ನಸಂದ್ರ ನಡುವೆ ಶ್ರೀರಾಮಪುರ ರೈಲ್ವೆ ಗೇಟ್ ಬಳಿ ರೈಲ್ವೆ ಹಳಿ ಮೇಲೆ ಟಿಕ್ ಟಾಕ್ ವಿಡಿಯೋ ಸಾಹಸ ಮಾಡುವಾಗ ರೈಲು ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ.
ಮೃತ ಯುವಕರನ್ನು ಹೆಗಡೆ ನಗರ ನಿವಾಸಿ, ಫುಡ್ ಡೆಲಿವರಿ ಕೊಡುವ ಕೆಲಸ ಮಾಡುತ್ತಿದ್ದ ಅಫ್ತಾಬ್ ಶರೀಫ್(19) ಮತ್ತು ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಮೊಹಮ್ಮದ್ ಮತೀನ್(23) ಎಂದು ಗುರುತಿಸಲಾಗಿದೆ. ಜಬೀವುಲ್ಲಾ(21) ಎಂಬ ಯುವಕನಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರೈಲ್ವೆ ಪೊಲೀಸ್ ವರಿಷ್ಠಾಧಿಕಾರಿ ಬೊರಲಿಂಗಯ್ಯ ಅವರು ತಿಳಿಸಿದ್ದಾರೆ.
ಶುಕ್ರವಾರ ಸಂಜೆ 5.30ರಿಂದ 6 ಗಂಟೆ ನಡುವೆ ಈ ಮೂವರು ಟಿಕ್‌ಟಾಕ್ ವಿಡಿಯೋ ಮಾಡಲು ರೈಲ್ವೆ ಹಳಿ ಮೇಲೆ ಹೋಗಿದ್ದರು. ಹಳಿ ಮೇಲೆ ನಿಂತು, ರೈಲು ಬರುವ ಸಂದರ್ಭದಲ್ಲಿ ಹೊರಗೆ ಜಿಗಿಯಬೇಕು ಎಂಬ ಪ್ಲಾನ್ ಮಾಡಿದ್ದರು.
ಕೋಲಾರ-ಬೆಂಗಳೂರು ಪ್ಯಾಸೆಂಜರ್ ರೈಲು ಯಲಹಂಕ ನಿಲ್ದಾಣದಿಂದ ನಗರದ ಕಡೆ ಬರುತ್ತಿತ್ತು. ಯುವಕರು ಹೊರಗೆ ಜಂಪ್ ಹೊಡೆಯುವಷ್ಟರಲ್ಲಿ ರೈಲು ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಯುವಕರು ಹಳಿಯಿಂದ ಸಾಕಷ್ಟು ದೂರಕ್ಕೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಒಬ್ಬನಿಗೆ ಗಂಭೀರ ಗಾಯಗಳಾಗಿವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ