ಐಎನ್ಎಸ್ ವಿಕ್ರಮಾದಿತ್ಯದಲ್ಲಿ ಬೆಂಕಿಗೆ ಸ್ಟೀಮ್ ಪೈಪ್ ಸ್ಫೋಟ ಕಾರಣ:ಮೂಲಗಳ ಮಾಹಿತಿ

ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಮಾದಿತ್ಯದ ಎಂಜಿನ್ ಕೊಠಡಿಯಲ್ಲಿ ಸ್ಟೀಮ್ ಪೈಪ್ ನಲ್ಲಿ ...

Published: 28th April 2019 12:00 PM  |   Last Updated: 28th April 2019 10:12 AM   |  A+A-


INS Vikramaditya

ಐಎನ್ಎಸ್ ವಿಕ್ರಮಾದಿತ್ಯ

Posted By : SUD SUD
Source : The New Indian Express
ಕಾರವಾರ: ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಮಾದಿತ್ಯದ ಎಂಜಿನ್ ಕೊಠಡಿಯಲ್ಲಿ ಸ್ಟೀಮ್ ಪೈಪ್ ನಲ್ಲಿ ಸ್ಫೋಟಗೊಂಡ ಪರಿಣಾಮ ಕಾರವಾರದ ಐಎನ್ಎಸ್ ಕದಂಬ ನೌಕಾ ನೆಲೆಯಲ್ಲಿ ಅಗ್ನಿ ಅವಘಡವುಂಟಾಗಿ ಓರ್ವ ನೌಕಾಧಿಕಾರಿ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಘಟನೆಯಲ್ಲಿ ಇತರ 9 ಮಂದಿಗೆ ಗಾಯವಾಗಿತ್ತು.

ಸ್ಫೋಟದಿಂದ ಇಂಧನ ಪೈಪ್ ನಾಶಗೊಂಡು ಎಂಜಿನ್ ರೂಂನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಎಂಜಿನ್ ರೂಂನಲ್ಲಿ ಬೆಕಿ ಕಾಣಿಸಿಕೊಂಡಾಗ ಹೊಗೆ ತುಂಬಿ ಉಸಿರಾಡಲಾಗದೆ ಲೆಫ್ಟಿನೆಂಟ್ ಕಮಾಂಡರ್ ಧರ್ಮೇಂದ್ರ ಸಿಂಗ್ ಚೌಹಾಣ್ ಪ್ರಜ್ಞೆ ತಪ್ಪಿ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಇಂಧನ ಪೈಪ್ ನಲ್ಲಿ ಬೆಂಕಿ ಕಾಣಿಸಿಕೊಂಡ ಕೂಡಲೇ ಅಗ್ನಿ ಶಾಮಕ ಸಿಬ್ಬಂದಿ ಇಂಧನ ಪೂರೈಕೆಯನ್ನು ನಿಲ್ಲಿಸಿ ಮುಂದಿನ ಹೆಚ್ಚಿನ ಅವಘಡವನ್ನು ತಡೆಯಲು ಪ್ರಯತ್ನಿಸಿದರು.

ಎಂಜಿನ್ ರೂಂನಲ್ಲಿದ್ದ ಸ್ಪ್ರಿಂಕ್ಲರ್ ಗಳು ಸಹ ಸ್ವಯಂಚಾಲಿತವಾಗಿ ಚಲಿತವಾಗಿ ಬೆಂಕಿ ನಿಯಂತ್ರಣಕ್ಕೆ ಬಂದಿತು. ಬೆಂಕಿ ಅವಘಡ ಸಂಭವಿಸಿದಾಗ ವಿಮಾನ ವಾಹಕ ನೌಕೆಯಲ್ಲಿ 1,300 ಜನರಿದ್ದರು ಎಂದು ಮೂಲಗಳು ತಿಳಿಸಿವೆ.

ನೌಕೆಯ ಡೆಕ್ 3ಯಲ್ಲಿ ಬೆಂಕಿ ಕಾಣಿಸಿಕೊಂಡು ಎರಡು ಬೋಗಿಗಳನ್ನು ನಾಶಮಾಡಿದೆ. ನೌಕೆಯಲ್ಲಿ 21 ಹಡಗಿನ ಮೇಲಂತಸ್ತುಗಳಿದ್ದು ಮುಂದಿನ ದಿನಗಳಲ್ಲಿ ಇಂತಹ ದುರ್ಘಟನೆ ಮರುಕಳಿಸದಂತೆ ಸರಿಯಾಗಿ ತಪಾಸಣೆ ಮಾಡಲು ಆದೇಶ ಹೊರಡಿಸಲಾಗಿದೆ.

ಕಳೆದ ರಾತ್ರಿ ದೆಹಲಿಯಿಂದ ಕಾರವಾರಕ್ಕೆ ತನಿಖಾ ತಂಡ ಆಗಮಿಸಿದೆ. ಇಂದು ತನಿಖೆ ಆರಂಭವಾಗಲಿದ್ದು ಕಾರವಾರ ಮತ್ತು ಗೋವಾ ತೀರದಲ್ಲಿ ಮೇ 1ರಿಂದ ಆರಂಭವಾಗಲಿರುವ ಭಾರತ-ಫ್ರಾನ್ಸ್ ಜಂಟಿ ನೌಕಾ ಸಮರಭ್ಯಾಸಕ್ಕೆ ಐಎನ್ಎಸ್ ವಿಕ್ರಮಾದಿತ್ಯ ಸಿದ್ಧವಾಗುತ್ತದೆಯೇ ಇಲ್ಲವೇ ಎಂದು ಘೋಷಿಸಲಿದೆ.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp