ಭೀಕರ ಪ್ರವಾಹ: ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳು ತತ್ತರ, ಜನಜೀವನ ಅಸ್ತವ್ಯಸ್ತ

ಮಹಾರಾಷ್ಟ್ರದಲ್ಲಿ ಭಾರಿ ಮಳೆಯ ಕಾರಣ ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ಬಿಜಾಪುರ ಮತ್ತು ರಾಯಚೂರು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಳಗಾವಿ/ರಾಯಚೂರು: ಮಹಾರಾಷ್ಟ್ರದಲ್ಲಿ ಭಾರಿ ಮಳೆಯ ಕಾರಣ ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ಬಿಜಾಪುರ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಭೀಕರ ಪ್ರವಾಹದ ಭೀತಿ ಎದುರಾಗಿದ್ದು, ಮಾಲ್ವಾಡ ಗ್ರಾಮದ 13 ಕುಟುಂಬಗಳನ್ನು ರಕ್ಷಿಸಲಾಗಿದೆ. ಕಳೆದ ಮೂರು ದಿನಗಳಲ್ಲಿ 40 ಹಳ್ಳಿಗಳು ಜಲಾವೃತವಾಗಿದ್ದು, ಸರ್ಕಾರದ ವತಿಯಿಂದ ರಕ್ಷಣಾ ಕಾರ್ಯ ಸಮರೋಪಾದಿಯಲ್ಲಿ ಸಾಗಿದೆ.
ಬೆಳಗಾವಿ, ಚಿಕ್ಕೋಡಿ, ವಿಜಯಪುರ, ಬಾಗಲಕೋಟೆ, ರಾಯಚೂರಿನಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಇಲ್ಲಿನ  ಜಮೀನುಗಳು ಜಲಾವೃತವಾಗಿವೆ. ಸೇತುವೆಗಳು ಮುಳುಗಡೆಯಾಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಬಾಗಲಕೋಟೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಘಟಪ್ರಭಾ ನದಿ ಉಕ್ಕಿ ಹರಿಯುತ್ತಿದೆ. ಮುಧೋಳ ತಾಲೂಕಿನ ಮಾಚಕನೂರು ಗ್ರಾಮದ ಹೊಳೆಬಸವೇಶ್ವರ ದೇವಸ್ಥಾನ ಜಲಾವೃತವಾಗಿದೆ. ವಿಜಯಪುರ ಜಿಲ್ಲೆಯ ಹಲವು ಗ್ರಾಮಗಳ ಜಮೀನಿಗೆ ನೀರು ನುಗ್ಗಿದೆ. ಅಪಾರ ಪ್ರಮಾಣದ ತೊಗರಿ, ಸಜ್ಜೆ, ಕಬ್ಬು ಬೆಳೆ ನಾಶವಾಗಿದೆ. 
ಕೃಷ್ಣಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಳ್ಳಿಗಳು ಜಲಾವೃತವಾಗಿವೆ. ಕೃಷ್ಣಾ ನದಿ ಪಾತ್ರದ ಎಲ್ಲ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮಾದರಗದ್ದಿ ಜಲಾವೃತವಾಗಿದ್ದು, 13 ಕುಟುಂಬಗಳನ್ನು ರಕ್ಷಿಸಲಾಗಿದೆ. 
ಸ್ಥಳಕ್ಕೆ ರಾಯಚೂರು ಉಪ ಆಯುಕ್ತ ಬಿ ಶರತ್ ಭೇಟಿ ನೀಡಿದ್ದು, ಶಿಲಹಳ್ಳಿ ಸೇತುವೆ ಬಳಿ ಪೊಲೀಸರನ್ನು ನಿಯೋಜಿಸಲು ಸೂಚಿಸಿದ್ದು, ರಕ್ಷಣಾ ಕಾರ್ಯಕ್ಕೆ ರಬ್ಬರ್ ದೋಣಿಗಳನ್ನು ಬಳಸುವಂತೆ ನಿರ್ದೇಶಿಸಿದ್ದಾರೆ.
ನೆರೆಯ ಕೊಯ್ನಾ, ವರುಣಾ ಸೇರಿದಂತೆ ಕೆಲವು ಜಲಾಶಯಗಳು ಬಹುತೇಕ ತುಂಬಿದ್ದು, ಇದರಿಂದ ಕೃಷ್ಣಾ ಕೊಳ್ಳದಲ್ಲಿ ನೀರಿನ ಹರಿವು ಹೆಚ್ಚಾಗಿದೆ. 519.60 ಮೀ.ಎತ್ತರದ ಆಲಮಟ್ಟಿ ಜಲಾಶಯ ಮೈದುಂಬಲು ಕೇವಲ 25 ಸೆಂಟಿ ಮೀಟರ್ ಮಾತ್ರ ಬಾಕಿ ಇದೆ. ಈಗಾಗಲೇ ಸುಮಾರು ಎರಡು ಲಕ್ಷ ಕ್ಯೂಸೆಕ್ಸ್‌ ನೀರು ನಾರಾಯಣಪುರ ಬ್ಯಾರೇಜ್‌ಗೆ ಹರಿಬಿಡಲಾಗುತ್ತಿದ್ದು, ರಾಯಚೂರು, ಯಾದಗಿರಿ ಪ್ರದೇಶಗಳಲ್ಲೂ ಪ್ರವಾಹದ ಭೀತಿ ಉಂಟಾಗಿದೆ.
ಮಹಾರಾಷ್ಟ್ರದಿಂದ ಸತತವಾಗಿ ಹರಿದುಬರುತ್ತಿರುವ ನೀರಿನಿಂದ ಬೆಳಗಾವಿ, ಬಾಗಲಕೋಟ, ವಿಜಯಪುರ, ರಾಯಚೂರು, ಯಾದಗಿರಿ ಜಿಲ್ಲೆಗಳ ಕೃಷ್ಣಾ, ಭೀಮಾ ನದಿಗಳಲ್ಲಿ ನೆರೆಹಾವಳಿಯ ಭೀತಿ ಎದುರಾಗಿದೆ. 
105 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಕೊಯ್ನಾ ಅಣೆಕಟ್ಟು ಶೇಕಡಾ 80ರಷ್ಟು ಭರ್ತಿಯಾಗಿದೆ. 2.20 ಲಕ್ಷ ಕ್ಯೂಸೆಕ್ ನೀರು ಕೃಷ್ಣೆಯ ಒಳ ಹರಿವು ಇದ್ದು, ಕೊಯ್ನಾ ಜಲಾಶಯದಿಂದ ನೀರು ಬಿಟ್ಟರೆ ಪ್ರವಾಹ ಉಂಟಾಗಲಿದೆ. ಇದರಿಂದ ಬೆಳಗಾವಿಯ 37 ಗ್ರಾಮಗಳಲ್ಲಿ ಜಿಲ್ಲಾಡಳಿತ ಕಟ್ಟೆಚ್ಚರ ಘೋಷಿಸಿದೆ.
ಯಾದಗರಿಯಲ್ಲಿ ಛಾಯಾ ಭಗವತಿ, ದಂಡಗುಂಡ ಬಸವೇಶ ದೇವಾಲಯ ಸೇರಿದಂತೆ ಹಲವು ದೇವಸ್ಥಾನಗಳು ಮುಳುಗಡೆಯಾಗಿವೆ. ನಾರಾಯಣಪುರ ಜಲಾಶಯದ ಹಿನ್ನೀರಿನ 500 ಎಕರೆಯಲ್ಲಿ ಬೆಳೆಯಲಾಗಿದ್ದ ಬೆಳೆಗಳು ಕೊಚ್ಚಿಹೋಗಿವೆ 
ಗದ್ದಿಯ ನೀಲಕಂಠರಾಯನ ಗದ್ದಿಗೆ ಸಂಪರ್ಕ ಕಲ್ಪಿಸಿ, ನಿವಾಸಿಗಳನ್ನು ರಕ್ಷಿಸುವ ಸಲುವಾಗಿ ಕೃಷ್ಣ ನದಿಯ ಸುತ್ತ ಕಾಲ್ಸೇತುವೆ ನಿರ್ಮಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com