ಭೀಕರ ಪ್ರವಾಹದ ನಡುವೆ 44 ಮಂದಿಯನ್ನು ರಕ್ಷಿಸಿದ ಭಾರತೀಯ ಸೇನೆ

ಪ್ರವಾಹ ಪೀಡಿತ ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಸಿಲುಕಿದ್ದ 44 ಮಂದಿಯನ್ನು ಭಾರತೀಯ ಸೇನೆ ಮತ್ತು ರಕ್ಷಣಾ ತಂಡ ಶುಕ್ರವಾರ ಬೆಳಗ್ಗೆವರೆಗೆ ರಕ್ಷಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಳಗಾವಿ: ಪ್ರವಾಹ ಪೀಡಿತ ಬೆಳಗಾವಿ ಮತ್ತು  ಬಾಗಲಕೋಟೆ ಜಿಲ್ಲೆಗಳಲ್ಲಿ ಸಿಲುಕಿದ್ದ 44 ಮಂದಿಯನ್ನು ಭಾರತೀಯ ಸೇನೆ ಮತ್ತು ರಕ್ಷಣಾ ತಂಡ ಶುಕ್ರವಾರ ಬೆಳಗ್ಗೆವರೆಗೆ ರಕ್ಷಿಸಿದೆ.
ಗೋಕಾಕ್‌ ತಾಲೂಕಿನ ಉದಿಗಟ್ಟಿ ಗ್ರಾಮದಿಂದ 7 ಮಂದಿ, ರೋನಿ ಎಂಬಲ್ಲಿಂದ 6 ಮಂದಿ ಹಾಗೂ ಬೆಳಗಾವಿ ಜಿಲ್ಲೆಯ ಮುಧೋಳ ತಾಲೂಕಿನ ಗಿರ್ದಲದಿಮ್ ಗ್ರಾಮದಿಂದ ಓರ್ವ ವ್ಯಕ್ತಿಯನ್ನು ಭಾರತೀಯ ಸೇನೆ ಇಂದು ಹೆಲಿಕಾಪ್ಟರ್ ಮೂಲಕ ಅವರನ್ನು ಮೇಲಕ್ಕೆತ್ತಿ ರಕ್ಷಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯ ಹಾಲೊಳ್ಳಿ ಮತ್ತು ರೂಗಿ ಗ್ರಾಮಗಳಿಂದ ಇತರ 13 ಮಂದಿಯನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಗಿದೆ.  ರಕ್ಷಿಸಲ್ಪಟ್ಟ ಸಂತ್ರಸ್ತರು ಕಳೆದ ಮೂರು ದಿನಗಳಿಂದ ಪ್ರವಾಹಕ್ಕೆ ಸಿಲುಕಿಕೊಂಡಿದ್ದರು.
ಕಳೆದ ಮೂರು ದಿನಗಳಿಂದ ಪ್ರವಾಹಬಾಧಿತ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳುತ್ತಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಬೆಳಗಾವಿ ಜಿಲ್ಲೆಯ ಮುಧೋಲ್, ಗೋಕಾಕ್ ಮತ್ತು ತಾಲ್ಲೂಕುಗಳಲ್ಲಿ ಇಂದು ವೈಮಾನಿಕ ಸಮೀಕ್ಷೆ ನಡೆಸಿದ್ದು, ಬಾಗಲಕೋಟೆಯ ಜಿಲ್ಲೆಯ 6381 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ಪರಿಹಾರ ಶಿಬಿರಗಳನ್ನು ಸ್ಥಾಪಿಸಿದ್ದು, ಸಾಕಷ್ಟು ಮೂಲಸೌಕರ್ಯ ಸೌಲಭ್ಯಗಳನ್ನು ಒದಗಿಸಿದೆ. ಜಾನುವಾರುಗಳಿಗೆ ಮೇವು ಮತ್ತು ನೀರು ಒದಗಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿನ ಪ್ರವಾಹ ಪರಿಸ್ಥಿತಿಗಳು ಭೀಕರವಾಗಿವೆ, ಆದರೂ ಯಾರು ಕೂಡ ಭಯಭೀತರಾಗುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದು, ಸಂತ್ರಸ್ತರಿಗೆ ಪರಿಹಾರ ನೀಡಲು ರಾಜ್ಯ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿಸಿದ್ದಾರೆ.
ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿನ ಪ್ರವಾಹ ಪರಿಸ್ಥಿತಿ ಕೂಡ ಭೀಕರವಾಗಿದ್ದು,  ನಾಳೆ ಅಲ್ಲಿಗೆ ಭೇಟಿ ನೀಡಿ ಪರಿಹಾರ ಕಾರ್ಯಗಳನ್ನು ಪರಿಶೀಲಿಸುತ್ತೇನೆ ಎಂದು ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಕೆಲವು ಪರಿಹಾರ ಶಿಬಿರಗಳಿಗೆ ಮುಖ್ಯಮಂತ್ರಿಗಳು ಭೇಟಿ ನೀಡಿ ಸಂತ್ರಸ್ತರ ಅಹವಾಲು, ಕುಂದುಕೊರತೆಗಳನ್ನು ಆಲಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com