'ಅನ್ನಭಾಗ್ಯ' ಕ್ಕೆ  ಕತ್ತರಿ ಹಾಕಿದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ: ಡಿ.ಕೆ.ಶಿವಕುಮಾರ್ 

ಕಿಸಾನ್ ಸಮ್ಮಾನ್ ಯೋಜನೆಯ ಅನುಷ್ಠಾನಕ್ಕಾಗಿ ಅನ್ನಭಾಗ್ಯ ಯೋಜನೆಗೆ ಕತ್ತರಿ ಹಾಕಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್,  ಸಿದ್ದರಾಮಯ್ಯ ಬದ್ಧತೆಯಿಂದ ಯೋಜನೆ .,..
ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್

ಬೆಂಗಳೂರು: ಕಿಸಾನ್ ಸಮ್ಮಾನ್ ಯೋಜನೆಯ ಅನುಷ್ಠಾನಕ್ಕಾಗಿ ಅನ್ನಭಾಗ್ಯ ಯೋಜನೆಗೆ ಕತ್ತರಿ ಹಾಕಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್,  ಸಿದ್ದರಾಮಯ್ಯ ಬದ್ಧತೆಯಿಂದ ಯೋಜನೆ ತಂದಿದ್ದಾರೆ. ನಮ್ಮ ಹಳೆಯ ಯೋಜನೆ ಕೈ ಬಿಟ್ಟರೆ ನಾವು ಸುಮ್ಮನಿರುವುದಿಲ್ಲ, ಇದರ ವಿರುದ್ಧ ಬೃಹತ್ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರ, ಹಳೆಯ ಯೋಜನೆಯನ್ನು ರದ್ದುಪಡಿಸಬಾರದು. ನಮ್ಮ ಯೋಜನೆಗೆ ಬಗ್ಗೆ ನಮಗೆ ಬದ್ಧತೆಯಿದೆ. ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಯಡಿಯೂರಪ್ಪ ಹೇಳಿದ್ದರು. ಅದರಂತೆ ಅವರು ನಡೆದುಕೊಳ್ಳಬೇಕು. ನಮ್ಮ ಕಾರ್ಯಕ್ರಮವನ್ನು ತೆಗೆದುಹಾಕಿದರೆ ನಾವು ಸುಮ್ಮನಿರುವುದಿಲ್ಲ, ಇದರ ವಿರುದ್ಧ ಬೃಹತ್ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ರೈತರಿಗೆ ಹಲವು ಯೋಜನೆಗಳನ್ನು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ  ‌ಮಾಡಿದ್ದರು. ಈಗ ಈ ಘೋಷಣೆಗೆ ಅವರು ಹೊಸ ಬಣ್ಣ ಹಾಕಲು ಹೊರಟಿದ್ದಾರೆ. ಈಗ ನಾನು  ಹೊಸದಾಗಿ ಮಾಡಿದ್ದೇನೆ ಎಂದು ಎಲ್ಲಾ ಕಡೆ ಜಾಹೀರಾತು ಕೊಟ್ಟು ಫೋಸು ನೀಡುತ್ತಿದ್ದಾರೆ. ಯಡಿಯೂರಪ್ಪ ಚೆನ್ನಾಗಿ ಕಾಣಲಿ ಎಂದು ವ್ಯಂಗ್ಯವಾಡಿದರು.

ಇಂದಿರಾ ಕ್ಯಾಂಟಿನ್ ಸೇರಿದಂತೆ ಸಿದ್ದರಾಮಯ್ಯಗೆ ಘೋಷಣೆ ಮಾಡಿದ ಯಾವುದೇ ಕಾರ್ಯಕ್ರಮಗಳನ್ನು ತಡೆ ಹಿಡಿಯಬಾರದು. ಒಂದು ವೇಳೆ ಹಿಂಪಡೆದರೆ ನಾವು ಸುಮ್ಮನೆ ಕುಳಿದುಕೊಳ್ಳುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ಹಲವೆಡೆ ಪ್ರವಾಹ ಪರಿಸ್ಥಿತಿ ಇದೆ. ಕೊಡಗು, ಮಲೆನಾಡು ಮತ್ತು ಉತ್ತರ ಕರ್ನಾಟಕದಲ್ಲಿ ಪ್ರವಾಹ ಉಂಟಾಗಿ ಅಪಾರ ನಾಶ-ನಷ್ಟ ಉಂಟಾಗಿದೆ. ಕೊಡಗಿನಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಮುಖ್ಯಮಂತ್ರಿಯವರು ಪ್ರತಿ ಮನೆಗೆ 5 ಸಾವಿರ ನೀಡುವುದಾಗಿ ಘೋಷಿಸಿದ್ದಾರೆ. ಮನೆ ನಿರ್ಮಾಣಕ್ಕೆ  5 ಲಕ್ಷ ನೀಡುವುದಾಗಿ ಪ್ರಕಟಿಸಿದ್ದಾರೆ. ಅವರು ಹೇಳಿದಂತೆ ನಡೆದುಕೊಳ್ಳಬೇಕು ಎಂದು ಶಿವಕುಮಾರ್ ಹೇಳಿದರು.

ಮುಖ್ಯಮಂತ್ರಿ ದೆಹಲಿಗೆ ಹೋಗಿದ್ದಾರೆ. ಅಲ್ಲಿಂದ ಎಷ್ಟು ಗಿಫ್ಟ್ ತರುತ್ತಾರೆ ಎಂಬುದನ್ನು ಕಾದು ನೋಡೋಣ. ಮುಖ್ಯಮಂತ್ರಿ ಪರಿಹಾರ ನಿಧಿಗೆ ತಾವು ವೈಯಕ್ತಿಕವಾಗಿ 50 ಲಕ್ಷ ರೂಪಾಯಿ ನೀಡುತ್ತೇನೆ ಎಂದು ಶಿವಕುಮಾರ್ ಘೋಷಿಸಿದರು.

ಟೆಲಿಫೋನ್ ಕದ್ದಾಲಿಕೆ ಪ್ರಕರಣದ ಬಗ್ಗೆ ಕೇಳಿದ ಪ್ರಶ್ನೆಗೆ, ಯಾವ ಫೋನ್ ಟ್ಯಾಪಿಂಗ್ ಕೂಡ ಆಗಿಲ್ಲ, ಮಾಧ್ಯಮಗಳಿಗೆ ಅದು ಹೇಗೆ ಸಿಗುತ್ತದೆಯೋ ಗೊತ್ತಿಲ್ಲ. ನಾನು ಇದರ ಬಗ್ಗೆ ವಿಚಾರಿಸಿದ್ದೇನೆ,  ಮುಖ್ಯಮಂತ್ರಿಯವರು ಇದರ ಬಗ್ಗೆ ಯಾವ ತನಿಖೆ ಬೇಕಾದರೂ ಮಾಡಲಿ ಎಂದು ಪ್ರತಿಕ್ರಿಯಿಸಿದರು.

ಫೋನ್ ಕದ್ದಾಲಿಕೆ ಬಗ್ಗೆ ಬಿಜೆಪಿ ಮುಖಂಡ ಆರ್.ಅಶೋಕ್ ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ಅವರಿಗೆ ರಾಜಕಾರಣ ಬೇಕಾಗಿದೆ, ಹಾಗಾಗಿ ಇದರಲ್ಲಿ ರಾಜಕೀಯ ಮಾಡುತ್ತಿದ್ದಾರೆ. ನಮ್ಮ ಮೇಲೆಲ್ಲ ಈ ಹಿಂದೆ ದಾಳಿಗಳು ನಡೆದಿವೆ. ಬಿಜೆಪಿಯವರು ನಮ್ಮ ಫೋನ್ ಕದ್ದಾಲಿಸಿದ್ದಾರೆ ಎಂದು ಪರೋಕ್ಷವಾಗಿ ಬಿಜೆಪಿ ನಾಯಕರಿಗೆ ಡಿಕೆಶಿ ಟಾಂಗ್ ಕೊಟ್ಟರು.

ಕೆಪಿಸಿಸಿ ಅಧ್ಯಕ್ಷರಾಗುತ್ತೀರಾ ಎಂಬ ಪ್ರಶ್ನೆಗೆ, ನನಗೆ ಯಾವುದು ಹುದ್ದೆ ಬೇಡ, ನಾನು ನನ್ನ ಕ್ಷೇತ್ರ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಶೀಲನೆ ‌ಮಾಡಿದ್ದೇನೆ, ಶಾಸಕಾಂಗ ಪಕ್ಷದ ನಾಯಕರು ಈ ಬಗ್ಗೆ ಯಾವ ತೀರ್ಮಾನ ಕೈಗೊಳ್ಳುತ್ತಾರೋ ಅದಕ್ಕೆ ನಾನು ಬದ್ಧನಾಗಿರುತ್ತೇನೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com