ನೆರೆ ಹಾಗೂ ಅತಿವೃಷ್ಟಿಯಿಂದ 30 ಸಾವಿರ ಕೋಟಿ ರೂ. ಹಾನಿ: ಸಿಎಂ ಯಡಿಯೂರಪ್ಪ

ಉತ್ತರ ಕರ್ನಾಟಕ ಭಾಗದಲ್ಲಿ ಉಂಟಾದ ನೆರೆ ಮತ್ತು ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಒಟ್ಟಾರೆ 30 ಸಾವಿರ ಕೋಟಿ ರೂ ನಷ್ಟ ಸಂಭವಿಸಿದ್ದು, ತುರ್ತು ಪರಿಹಾರಕ್ಕಾಗಿ 309 ಕೋಟಿ ರೂ...
ಸಿಎಂ ಯಡಿಯೂರಪ್ಪ
ಸಿಎಂ ಯಡಿಯೂರಪ್ಪ

ಬೆಂಗಳೂರು: ಉತ್ತರ ಕರ್ನಾಟಕ ಭಾಗದಲ್ಲಿ ಉಂಟಾದ ನೆರೆ ಮತ್ತು ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಒಟ್ಟಾರೆ 30 ಸಾವಿರ ಕೋಟಿ ರೂ ನಷ್ಟ ಸಂಭವಿಸಿದ್ದು, ತುರ್ತು ಪರಿಹಾರಕ್ಕಾಗಿ 309 ಕೋಟಿ ರೂ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶನಿವಾರ ತಿಳಿಸಿದ್ದಾರೆ.

ಇಂದು ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಕೇಂದ್ರ ಗೃಹ ಸಚಿವಾಲಯದ ನೆರೆ ಅಧ್ಯಯನ ತಂಡದ ಮುಖ್ಯಸ್ಥ, ಗೃಹ ಇಲಾಖೆಯ ಜಂಟಿ ಕಾರ್ಯದರ್ಶಿ ಪ್ರಕಾಶ್ ಹಾಗೂ 6 ಸದಸ್ಯರ ತಂಡದ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಕೇಂದ್ರದ 7 ಹಿರಿಯ ಅಧಿಕಾರಿಗಳ ನೇತೃತ್ವದ ತಂಡ ರಾಜ್ಯಕ್ಕೆ ಆಗಮಿಸಿದ್ದು, ನಾಳೆಯಿಂದ ಮೂರು ದಿನಗಳ ಕಾಲ ನೆರೆ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ, ಪರಿಶೀಲನೆ ಮಾಡಲಿದೆ ಎಂದರು.

ನೆರೆ ಹಾನಿಯ ಬಗ್ಗೆ ವಾಸ್ತವಿಕ ಸ್ಥಿತಿಯನ್ನು ಕೇಂದ್ರ ತಂಡಕ್ಕೆ ಮನವರಿಕೆ ಮಾಡಿಕೊಟ್ಟಿದ್ದು, ಪ್ರವಾಹದಿಂದ ರೈತರು, ಜನ ಸಾಮಾನ್ಯರ ಆಸ್ತಿ, ಬೆಳೆ ಹಾನಿಯಾಗಿದ್ದು, ಅವರು ತಮ್ಮ ಬದುಕು ಕಟ್ಟಿಕೊಳ್ಳಬೇಕಿದೆ ಎಂದು ಯಡಿಯೂರಪ್ಪ ಹೇಳಿದರು.

ಕೇಂದ್ರ ನೆರೆ ಅಧ್ಯಯನ ತಂಡದ ಭೇಟಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದ್ದು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಕೇಂದ್ರದ ನೆರೆ ಅಧ್ಯಯನ ತಂಡಕ್ಕೆ ಸಹಕಾರ ನೀಡಲಿದ್ದಾರೆ ಎಂದು ಸಿಎಂ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com