ಐಟಿ ದಾಳಿ ಪ್ರಕರಣ: ಡಿಕೆಶಿವಕುಮಾರ್ ಇಂದಿನ ವಿಚಾರಣೆ ಅಂತ್ಯ, ನಾಳೆ ಬೆಳಗ್ಗೆ 11ಕ್ಕೆ ಮತ್ತೆ ವಿಚಾರಣೆ

ವಿಚಾರಣೆಗೆ ಸಮನ್ಸ್ ಜಾರಿಯಾದ ಹಿನ್ನೆಲೆಯಲ್ಲಿ ಮಾಜಿ ಸಚಿವ ಡಿಕೆ ಶಿವಕುಮಾರ್ ಜಾರಿ ನಿರ್ದೇಶನಾಲಯ(ಇಡಿ) ಇಂದಿನ ತನಿಖೆ ಅಂತ್ಯವಾಗಿದ್ದು, ನಾಳೆ ಬೆಳಗ್ಗೆ ಮತ್ತೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್

ಸಮನ್ಸ್ ಹಿನ್ನಲೆಯಲ್ಲಿ ವಿಚಾರಣೆಗೆ ಹಾಜರಾಗಿರುವ ಡಿಕೆಶಿವಕುಮಾರ್, ಸಂಜೆ 6.30ರಿಂದ ನಿರಂತರ ವಿಚಾರಣೆ

ನವದೆಹಲಿ: ವಿಚಾರಣೆಗೆ ಸಮನ್ಸ್ ಜಾರಿಯಾದ ಹಿನ್ನೆಲೆಯಲ್ಲಿ ಮಾಜಿ ಸಚಿವ ಡಿಕೆ ಶಿವಕುಮಾರ್ ಜಾರಿ ನಿರ್ದೇಶನಾಲಯ(ಇಡಿ) ಇಂದಿನ ತನಿಖೆ ಅಂತ್ಯವಾಗಿದ್ದು, ನಾಳೆ ಬೆಳಗ್ಗೆ ಮತ್ತೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

ಇಂದು ಸಂಜೆ 4.50ಕ್ಕೆ ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿದ ಶಿವಕುಮಾರ್ ಮಾಧ್ಯಮಗಳ ಜೊತೆ ಮಾತನಾಡಿದರು. 'ನಾವು ಮನುಷ್ಯರೇ. ಇಡಿ ಅಧಿಕಾರಿಗಳು ಬುದ್ಧಿವಂತರು. ಮೊದಲು ನ್ಯಾಯಾಲಯಕ್ಕೆ ಹೋಗಿದ್ದು ಈಗ ಮತ್ತೆ ನೋಟಿಸ್ ಕೊಟ್ಟಿದ್ದಾರೆ. ನಾನು ಓಡಿ ಹೋಗಲ್ಲ ಎನ್ನುವುದು ಅವರಿಗೂ ತಿಳಿದಿದೆ. ಖಂಡಿತ ಅವರಿಗೆ ಗೌರವ ನೀಡುತ್ತೇನೆ ಎಂದು ತಿಳಿಸಿದರು.  ನಂತರ ಸರ್ದಾರ್ ಪಟೇಲ್ ಮಾರ್ಗದಲ್ಲಿರುವ ಕರ್ನಾಟಕ ಭವನಕ್ಕೆ ತೆರಳಿದರು.

ಕರ್ನಾಟಕ ಭವನದಿಂದ ಸಹೋದರ ಡಿಕೆ ಸುರೇಶ್ ತಮ್ಮ ನಿವಾಸಕ್ಕೆ ಕರೆದುಕೊಂಡು ಹೋದರು. ನಂತರ ಡಿಕೆಶಿ ನೇರವಾಗಿ ಖಾನ್ ಮಾರುಕಟ್ಟೆಯಲ್ಲಿರುವ ಲೋಕನಾಯಕ ಭವನದಲ್ಲಿರುವ ಜಾರಿ ನಿರ್ದೇಶನಾಲಯ ಕಚೇರಿ ತೆರಳಿದರು. ಸಂಜೆ 6.30ರ ವೇಳೆಗೆ ಕಚೇರಿಯನ್ನು ಪ್ರವೇಶಿಸುವ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಕೈ ಮುಗಿದು ಒಳ ಪ್ರವೇಶಿಸಿದರು.

ಡಿಕೆಶಿ ಜೊತೆ ಸುರೇಶ್ ಅವರು ಕಚೇರಿಯ ಒಳ ಪ್ರವೇಶಿಲು ಮುಂದಾದಾಗ ಅಧಿಕಾರಿಗಳು ಅವರನ್ನು ತಡೆದರು. ಸಂಜೆ 7 ಗಂಟೆಯಿಂದ ಡಿಕೆ ಶಿವಕುಮಾರ್ ಅವರ ವಿಚಾರಣೆ ಆರಂಭವಾಗಿದ್ದು, ಡಿಕೆಶಿ ಅವರನ್ನು ಇಡಿಯ ವಿವಿಧ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆ ವೇಳೆ ನಾನಾ ರೀತಿಯ ಪ್ರಶ್ನೆ ಮಾಡಲಾಗುತ್ತಿದ್ದು, ರಾತ್ರಿ 10.30ರ ಸಂದರ್ಭದಲ್ಲಿ ವಿಚಾರಣೆಗೆ ಅಧಿಕಾರಿಗಳು ತಾತ್ಕಾಲಿಕ ಬ್ರೇಕ್ ನೀಡಿದ್ದರು. ಬಳಿಕ ಮತ್ತೆ ರಾತ್ರಿ 11 ಗಂಟೆಗೆ 2ನೇ ಹಂತದ ವಿಚಾರಣೆ ಆರಂಭಿಸಿದರು. ಈ ವೇಳೆ ನಾನಾ ರೀತಿಯ ಪ್ರಶ್ನೆ ಕೇಳಿದ ಅಧಿಕಾರಿಗಳಿಗೆ ಡಿಕೆಶಿ ಕೂಡ ಉತ್ತರಿಸಿದ್ದಾರೆ.

ಬಳಿಕ ರಾತ್ರಿ 11.45ರ ಸಂದರ್ಭದಲ್ಲಿ ಅಧಿಕಾರಿಗಳು ಇಂದಿನ ವಿಚಾರಣೆ ಅಂತ್ಯಗೊಳಿಸಿದ್ದು, ಮತ್ತೆ ನಾಳೆ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ವಿಚಾರಣೆ ಬಳಿಕ ಹೊರ ಬಂದ ಡಿಕೆಶಿ ಮಾಧ್ಯಮಗಳೊಂದಿಗೆ ವಿಚಾರಣೆ ಕುರಿತು ಪ್ರತಿಕ್ರಿಯೆ ನೀಡಿದ್ದು ಅಧಿಕಾರಿಗಳು ಕೇಳಿದ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದ್ದೇನೆ. ನಾಳೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ ಎಂದು ಹೇಳಿದರು.

2017ರ ಆಗಸ್ಟ್ 2 ರಂದು ದೆಹಲಿಯ ಡಿಕೆ ಶಿವಕುಮಾರ್ ಆಪ್ತರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದಾಗ ದಾಖಲೆ ಇಲ್ಲದ ಸುಮಾರು 8.59 ಕೋಟಿ ರೂ. ಹಣ ಪತ್ತೆಯಾಗಿತ್ತು. ವಿಚಾರಣೆ ವೇಳೆ ಡಿಕೆಶಿವಕುಮಾರ್ ಸುಳ್ಳು ಮಾಹಿತಿ ನೀಡಿದ್ದಾರೆಂದು ಆರೋಪಿಸಿ ಐಟಿ ಅಧಿಕಾರಿಗಳು ಈ ಹಿಂದೆ ಆರ್ಥಿಕ ಅಪರಾಧ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಅಪಾರ್ಟ್ ಮೆಂಟ್‍ನಲ್ಲಿ ಪತ್ತೆ ಹಣದ ಜತೆಗೆ ಹವಾಲಾ ಮೂಲಕ ಏಜೆಂಟ್‍ಗಳ ಸಹಾಯದಿಂದ ಡಿಕೆ ಶಿವಕುಮಾರ್ ಕೋಟ್ಯಂತರ ರೂ.ಗಳನ್ನು ಕಾಂಗ್ರೆಸ್ ಹೈಕಮಾಂಡ್‍ಗೆ ನೀಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ನೋಟು ನಿಷೇಧಗೊಂಡ ಸಂದರ್ಭದಲ್ಲಿ ಡಿ.ಕೆ ಶಿವಕುಮಾರ್ ಸಾವಿರಾರು ಕೋಟಿ ರೂ.ಗಳನ್ನು ಬದಲಾಯಿಸಿದ್ದಾರೆ. ಆಪ್ತರ ಮೂಲಕ ಕಪ್ಪುಹಣವನ್ನು ಬಿಳಿಯಾಗಿಸಲು ಪರಿವರ್ತಿಸಿದ್ದಾರೆ ಎಂಬ ಆರೋಪವೂ ಕೇಳಿ ಬಂದಿತ್ತು. ಅಲ್ಲದೆ ವಿದೇಶದಲ್ಲೂ ಡಿಕೆಶಿ ಹಣವನ್ನು ಹೂಡಿಕೆ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇಡಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿತ್ತು.

ಇಡಿ ಸಮನ್ಸ್ ಜಾರಿಗೊಳಿಸಿದ್ದನ್ನು ಪ್ರಶ್ನಿಸಿ ಡಿಕೆ ಶಿವಕುಮಾರ್ ಸೇರಿದಂತೆ ಗೆಳೆಯರಾದ ಆಂಜನೇಯ, ರಾಜೇಂದ್ರ, ಹನುಮಂತಯ್ಯ ಎಂಬುವವರು ಸಲ್ಲಿಸಿದ್ದ ತಕಾರರು ಅರ್ಜಿಯನ್ನು ಹೈಕೋರ್ಟ್ ನ್ಯಾ. ಅರವಿಂದ್ ಕುಮಾರ್ ಗುರುವಾರ ವಜಾಗೊಳಿಸಿ ವಿಚಾರಣೆಗೆ ಹಾಜರಾಗಬೇಕೆಂದು ಆದೇಶಿಸಿದ್ದರು. ಅರ್ಜಿ ವಜಾಗೊಂಡ ಬೆನ್ನಲ್ಲೇ ಗುರುವಾರ ರಾತ್ರಿ ಇಡಿ ಅಧಿಕಾರಿಗಳು ಡಿಕೆ ಶಿವಕುಮಾರ್ ನಿವಾಸಕ್ಕೆ ಆಗಮಿಸಿ ಶುಕ್ರವಾರ ಮಧ್ಯಾಹ್ನ 1 ಗಂಟೆಯ ವೇಳೆಗೆ ವಿಚಾರಣೆಗೆ ಹಾಜರಾಗಬೇಕೆಂದು ಸಮನ್ಸ್ ಜಾರಿ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com