ರೈತರ ಖಾತೆಯಿಂದ ಹಣ ವಾಪಸ್‌; ಜೂನ್ 14ರಂದು ಬ್ಯಾಂಕರ್‌ಗಳ ಸಭೆ ಕರೆದ ಮುಖ್ಯಮಂತ್ರಿ

ಕೆಲವು ಮಾಧ್ಯಮಗಳಲ್ಲಿ ಸಾಲ ಮನ್ನಾ ಕುರಿತಂತೆ ಪ್ರಕಟವಾಗಿರುವ ಸುದ್ದಿಗೆ ಮುಖ್ಯಮಂತ್ರಿ ಎಚ್ ಡಿ ...
ಸಿಎಂ ಹೆಚ್ ಡಿ ಕುಮಾರಸ್ವಾಮಿ
ಸಿಎಂ ಹೆಚ್ ಡಿ ಕುಮಾರಸ್ವಾಮಿ
ಬೆಂಗಳೂರು: ಕೆಲವು ಮಾಧ್ಯಮಗಳಲ್ಲಿ ಸಾಲ ಮನ್ನಾ ಕುರಿತಂತೆ ಪ್ರಕಟವಾಗಿರುವ ಸುದ್ದಿಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. 
ಯಾದಗಿರಿ ಜಿಲ್ಲೆಯ ರಾಷ್ಟ್ರೀಕೃತ ಬ್ಯಾಂಕುಗಳು ರೈತರ ಸಾಲಗಳ ವರ್ಗೀಕರಣ ಮಾಡುವಲ್ಲಿ ಆಗಿರುವ ಲೋಪದಿಂದಾಗಿ ಈ ಗೊಂದಲ ಉಂಟಾಗಿದೆ ಎಂದಿದ್ದಾರೆ. 
ಪ್ರತಿ ಸಾಲ ಮನ್ನಾ ನಂತರ ರಾಜ್ಯ ಸರಕಾರ ನಡೆಸುವ ಆಡಿಟ್ ಸಂದರ್ಭದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ಈವರೆಗೆ 13988 ರೈತರ ಸಾಲ ಖಾತೆಗಳಲ್ಲಿ ಈ ಗೊಂದಲ ಉಂಟಾಗಿದೆ. ಸ್ಥಳೀಯ ಬ್ಯಾಂಕುಗಳು ತಮ್ಮಿಂದ ಆಗಿರುವ ಲೋಪದ ಕುರಿತು ಸ್ಪಷ್ಟನೆ ನೀಡುವಂತೆ ಸೂಚಿಸಲಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ರೈತರ ಸಾಲ ಮನ್ನಾ ಪ್ರಕ್ರಿಯೆಯನ್ನು ರಾಜ್ಯ ಸರಕಾರವು ಅತ್ಯಂತ ಜವಾಬ್ದಾರಿಯುತವಾಗಿ ಹಾಗೂ ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿದೆ. ರಾಜ್ಯ ಸರ್ಕಾರದಿಂದ ಈ ಗೊಂದಲ ಉಂಟಾಗಿಲ್ಲ. ಹಾಗೂ ಚುನಾವಣೆಗೂ ಈ ಗೊಂದಲಕ್ಕೂ ಸಂಬಂಧವಿಲ್ಲ ಮಾಧ್ಯಮಗಳು ಇಂತಹ ವಿಷಯಗಳನ್ನು ಅಧಿಕೃತ ಮಾಹಿತಿ ಪಡೆದುಕೊಂಡ ನಂತರವೇ ಸತ್ಯಾಸತ್ಯತೆ ಪರಿಶೀಲಿಸಿ ವರದಿ ಮಾಡಬೇಕು ಎನ್ನುವುದು ನನ್ನ ಕಳಕಳಿಯ ಮನವಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಲೋಕಸಭಾ ಚುನಾವಣೆಗೂ ಮುನ್ನ ರೈತರ ಖಾತೆಗಳಿಗೆ ರಾಜ್ಯ ಸರ್ಕಾರದ ಸಾಲ ಮನ್ನಾ ಯೋಜನೆಯಡಿ ಜಮೆಯಾದ ಹಣ, ಬ್ಯಾಂಕ್‌ ಅಧಿಕಾರಿಗಳು ವರ್ಗೀಕರಣ ಮಾಡುವಾಗ ಉಂಟಾದ ಲೋಪದಿಂದ ವಾಪಸ್ ಹೋಗಿದೆ. ಇದರಿಂದ ರೈತರಲ್ಲಿ ಗೊಂದಲ ಉಂಟಾಗಿದೆ. ಇದಕ್ಕೆ ಸಂಬಂಧಿಸಿದಂತೆ ಜೂನ್ 14ರಂದು ಮಧ್ಯಾಹ್ನ 2.30 ಗಂಟೆಗೆ ರಾಜ್ಯ ಮಟ್ಟದ ಬ್ಯಾಂಕರುಗಳ ಸಭೆ ಕರೆಯಲಾಗಿದೆ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com