ಪೌರಾಡಳಿತ ಸಚಿವ ಸಿ.ಎಸ್. ಶಿವಳ್ಳಿ ತೀವ್ರ ಹೃದಯಾಘಾತದಿಂದ ನಿಧನ

ಪೌರಾಡಳಿತ ಸಚಿವ ಸಿ.ಎಸ್ ಶಿವಳ್ಳಿ ಅವರು ತೀವ್ರ ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ.
ಸಿಎಸ್ ಶಿವಳ್ಳಿ
ಸಿಎಸ್ ಶಿವಳ್ಳಿ
ಹುಬ್ಬಳ್ಳಿ: ಪೌರಾಡಳಿತ ಸಚಿವ ಸಿ.ಎಸ್ ಶಿವಳ್ಳಿ ಅವರು ತೀವ್ರ ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. 
ಧಾರವಾಡ ಜಿಲ್ಲೆಯ ಕುಂದಗೋಳ ಕಾಂಗ್ರೆಸ್ ಶಾಸಕರಾಗಿದ್ದ ಸಿಎಸ್ ಶಿವಳ್ಳಿ ಅವರಿಗೆ ಇಂದು  ಮಧ್ಯಾಹ್ನ 1.30ರ ಸುಮಾರಿಗೆ ತೀವ್ರ ಹೃದಯಾಘಾತವಾಗಿದ್ದು, ಕೂಡಲೇ ಅವರನ್ನು ಹುಬ್ಬಳ್ಳಿಯ ಲೈಫ್ ಲೈನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

ಬೈಪಾಸ್ ಸರ್ಜರಿ ಮಾಡಿಸಿಕೊಂಡಿದ್ದ ಸಿ.ಎಸ್ ಶಿವಳ್ಳಿ ಅವರು, ಧಾರವಾಡದಲ್ಲಿ ನಡೆದ ಕಟ್ಟಡ ದುರಂತ ಸ್ಥಳಕ್ಕೆ ಆಗಮಿಸಿ, ದಿಗ್ಬ್ರಮೆ ವ್ಯಕ್ತ ಪಡಿಸಿದ್ದರು. ಅಲ್ಲದೆ ನಿನ್ನೆ ಮಧ್ಯರಾತ್ರಿಯವರೆಗೂ ಕಟ್ಟಡ ದುರಂತ ಸ್ಥಳದಲ್ಲಿದ್ದು, ಪರಿಹಾರ ಕಾರ್ಯಗಳಲ್ಲಿ ಭಾಗವಹಿಸಿದ್ದರು.

ಸಿಎಸ್ ಶಿವಳ್ಳಿ ಎಂದೇ ಜನಪ್ರಿಯರಾಗಿದ್ದ ಚನ್ನಬಸಪ್ಪ ಸತ್ಯಪ್ಪ ಶಿವಳ್ಳಿ ಅವರು ಬಡ ಕುಟುಂಬದಿಂದ ಬಂದವರು. ಯರಗುಪ್ಪಿಯಲ್ಲಿ ಜನಿಸಿದ ಶಿವಳ್ಳಿ ಅವರು ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅವರಿಗೆ ನಾಲ್ವರು ಸಹೋದರರು, ಮೂರು ಮಂದಿ ಸಹೋದರಿಯರು ಇದ್ದಾರೆ. ಮೂರು ದಶಕಗಳಿಂದ ರಾಜಕೀಯದಲ್ಲಿದ್ದ ಶಿವಳ್ಳಿ, ಆರು ಬಾರಿ ಸ್ಪರ್ಧೆ ಮಾಡಿ, ಮೂರು ಬಾರಿ ಗೆಲುವು ಸಾಧಿಸಿದ್ದರು.

1994ರಲ್ಲಿ ಕೆಸಿಪಿಯಿಂದ ಸ್ಪರ್ಧಿಸುವ ಮೂಲಕ ರಾಜಕೀಯ ಪ್ರವೇಶಿಸಿದ್ದ ಶಿವಳ್ಳಿ ಅವರು, ಮೊದಲ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. 

1999ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದ ಶಿವಳ್ಳಿ, 2008ರಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಸೋತರು. 2013 ಮತ್ತು 2018ರಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com