ಸಿ ಎಸ್ ಶಿವಳ್ಳಿ ಸಾವಿಗೆ ಮೈತ್ರಿ ಸರ್ಕಾರದ ಕಿರಕುಳ ಕಾರಣ: ಶ್ರೀರಾಮುಲು ಗಂಭೀರ ಆರೋಪ

ಮಾಜಿ ಸಚಿವ ಸಿ ಎಸ್ ಶಿವಳ್ಳಿ ಸಾವಿಗೆ ಮೈತ್ರಿ ಸರ್ಕಾರವೇ ಕಾರಣ. ಸರ್ಕಾರದ ಕಿರುಕುಳದಿಂದಲೇ ಶಿವಳ್ಳಿ ಮೃತಪಟ್ಟಿದ್ದಾರೆ ಎಂದು ಬಿಜೆಪಿ ಶಾಸಕ ಶ್ರೀರಾಮುಲು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ.
ಶ್ರೀರಾಮುಲು
ಶ್ರೀರಾಮುಲು
ಹುಬ್ಬಳ್ಳಿ: ಮಾಜಿ ಸಚಿವ ಸಿ ಎಸ್ ಶಿವಳ್ಳಿ ಸಾವಿಗೆ ಮೈತ್ರಿ ಸರ್ಕಾರವೇ ಕಾರಣ. ಸರ್ಕಾರದ ಕಿರುಕುಳದಿಂದಲೇ ಶಿವಳ್ಳಿ ಮೃತಪಟ್ಟಿದ್ದಾರೆ ಎಂದು ಬಿಜೆಪಿ ಶಾಸಕ ಶ್ರೀರಾಮುಲು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ.
ಕುಂದಗೋಳ ಕ್ಷೇತ್ರದ ಬೆಟದೂರು ಗ್ರಾಮದಲ್ಲಿ ಮಾತನಾಡಿದ ಅವರು, ಸಚಿವರಾಗಿದ್ದ ಸಿ ಎಸ್ ಶಿವಳ್ಳಿ ಅವರು ಈಗ ನಮ್ಮ ನಡುವೆ ಇಲ್ಲ. ಅವರ ಸಾವಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರವೇ ಕಾರಣ. ಮೈತ್ರಿ ಸರ್ಕಾರದ ಕಿರುಕುಳದಿಂದಲೇ ಶಿವಳ್ಳಿ ಮೃತಟ್ಟಿದ್ದಾರೆ.ಇದಕ್ಕೆ ಕುಂದಗೋಳ ಜನರಿಗೆ ಸರ್ಕಾರದ ವಿರುದ್ದ ಸೇಡು  ತಿರುಸಿಕೊಳ್ಳುವ ಸಮಯ ಬಂದಿದೆ ಎಂದು ಭಾವನಾತ್ಮಕ ವಿಚಾರ ಪ್ರಸ್ತಾಪಿಸಿ ಕ್ಷೇತ್ರದ ಮತದಾರರನ್ನು ಪ್ರಚೋದಿಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಬೇಕು. ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಬೇಕು. ಅವರು ರೈತರಿಗಾಗಿ ಬಹಳ ವರ್ಷಗಳಿಂದ ಹೋರಾಟ ಮಾಡಿದ್ದು, ನಮ್ಮ ಜೀವ ಹೋದರೂ ಸರಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ರಾಮುಲು ಮತದಾರರ ಮುಂದೆ ಪ್ರತಿಜ್ಞೆ ಮಾಡಿದರು.
ಯಡಿಯೂರಪ್ಪ ಮುಖ್ಯಮಂತ್ರಿ ಆದರೆ ಈಗಲೇ ಆಗಬೇಕು. ಮುಂದೆ ಅವರಿಗೆ ವಯಸ್ಸು ಹೆಚ್ಚಾಗುವ ಕಾರಣ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಮುಂದೆ ಮುಖ್ಯಮಂತ್ರಿ ಯಾಗುವ ಅವಕಾಶವಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಯಡಿಯೂರಪ್ಪ ಅವರಿಗೆ ನಾಟಕ ಮಾಡುವುದು ಗೊತ್ತಿಲ್ಲ. ಅವರು ಸ್ವಲ್ಪ ಸಿಡುಕಿನ ಸ್ವಭಾವದವರು. ತಾವು ಎಂದು ಯಡಿಯೂರಪ್ಪ ಅವರ ಬಗ್ಗೆ ಟೀಕೆ ಮಾಡಿಲ್ಲ. ಈ ಹಿಂದೆ ಯಡಿಯೂರಪ್ಪ ಅವರ ಬಳಿಕ ಜಗದೀಶ  ಶೆಟ್ಟರ್ ಮುಖ್ಯಮಂತ್ರಿ ಆಗಬೇಕು ಎಂದು ಬಯಸಿದ್ದೆ. ರಾಜಕೀಯ ಅಸ್ತಿತ್ವದ ಪ್ರಶ್ನೆಯಿಂದಾಗಿ ಪ್ರತ್ಯೇಕ ಪಕ್ಷ ಕಟ್ಟಿದ್ದೆ ಎಂದು ರಾಮುಲು ಹಳೆಯ ಘಟನೆಯನ್ನು ಸ್ಮರಿಸಿದರು.
ಬಿಜೆಪಿ ಶಾಸಕ ಬಿ.ಶ್ರೀರಾಮುಲು ಹೇಳಿಕೆಗೆ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ , ಬಿಜೆಪಿ ನಾಯಕರು ಹುಚ್ಚರ ಹಾಗೇ ಹೇಳಿಕೆ ನೀಡುತ್ತಿದ್ದಾರೆ. ಅವರ ಹೇಳಿಕೆಗಳಿಗೆಲ್ಲಾ ತಲೆಕೆಡಿಸಿಕೊಳ್ಳಬೇಕಿಲ್ಲ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com