ಗದ್ದಿಗೌಡರು, ಸಿಇಒ ಪತ್ರ
ಗದ್ದಿಗೌಡರು, ಸಿಇಒ ಪತ್ರ

ಬಾಗಲಕೋಟೆ: ಎಂಪಿ ಮಾತಿಗೆ ಚುನಾವಣೆ ಸಭೆ ಮುಂದೂಡಿದ ಸಿಇಒ ಮಾನಕರ 

ಜಿಲ್ಲಾ ಪಂಚಾಯಿತಿಯ ವಿವಿಧ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಗಾಗಿ ನಡೆಯಬೇಕಿದ್ದ ಚುನಾವಣೆಯನ್ನು ಸಂಸದರು ಸಭೆಗೆ ಹಾಜರಾಗಲು ಸಾಧ್ಯವಾಗದು ಎನ್ನುವ ಕಾರಣಕ್ಕಾಗಿ ಚುನಾವಣೆ ಪ್ರಕ್ರಿಯೆ ನಡೆಯಬೇಕಿದ್ದ ದಿನಾಂಕವನ್ನೇ ಮುಂದೂಡಿರುವ ಜಿಪಂ ಸಿಇಒ ಅವರ ನಡೆ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಬಾಗಲಕೋಟೆ: ಜಿಲ್ಲಾ ಪಂಚಾಯಿತಿಯ ವಿವಿಧ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಗಾಗಿ ನಡೆಯಬೇಕಿದ್ದ ಚುನಾವಣೆಯನ್ನು ಸಂಸದರು ಸಭೆಗೆ ಹಾಜರಾಗಲು ಸಾಧ್ಯವಾಗದು ಎನ್ನುವ ಕಾರಣಕ್ಕಾಗಿ ಚುನಾವಣೆ ಪ್ರಕ್ರಿಯೆ ನಡೆಯಬೇಕಿದ್ದ ದಿನಾಂಕವನ್ನೇ ಮುಂದೂಡಿರುವ ಜಿಪಂ ಸಿಇಒ ಅವರ ನಡೆ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಜಿಪಂ.ನ ನಾನಾ ಸ್ಥಾಯಿ ಸಮಿತಿಗಳ ರಚನೆ ಕುರಿತಂತೆ ನವೆಂಬರ್ ೨೨ ರಂದು ಚುನಾವಣೆ ನಡೆಯಬೇಕಿತ್ತು. ಇದಕ್ಕಾಗಿ ಎಲ್ಲ ಸಿದ್ಧತೆಗಳು ನಡೆದಿದ್ದವು. ಅದೇನು ಕಾರಣವೋ ಗೊತ್ತಿಲ್ಲ ನಾನಾ ಸ್ಥಾಯಿ ಸಮಿತಿಗಳ ರಚನೆ ಕುರಿತು ನ. ೨೨ ರಂದು ನಡೆಯುವ ಸಭೆಗೆ ಸಂಸತ್ ಅಧಿವೇಶನದಲ್ಲಿ ಭಾಗವಹಿಸುತ್ತಿರುವುದರಿಂದ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಚುನಾವಣೆ ದಿನಾಂಕವನ್ನು ಮುಂದೂಡಿ ಎಂದು ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡರ ಮೊಬೈಲ್ ಮೂಲಕ ಸಿಇಒ ಅವರಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಚುನಾವಣೆ ದಿನಾಂಕ ಮುಂದಕ್ಕೆ ಹೋಗಿದೆ. 

ಸಂಸದರು ಮೊಬೈಲ್ ಮೂಲಕ ಸಭೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಆ  ಹಿನ್ನೆಲೆಯಲ್ಲಿಯೇ ಚುನಾವಣೆ ಮುಂದೂಡಲಾಗಿದೆ ಎಂದು ಕಾರಣ ನೀಡಿ ಸಿಇಒ ಅವರು ಸದಸ್ಯರುಗಳಿಗೆ ಪತ್ರ ಬರೆದಿದ್ದಾರೆ. ಬಹುಶಃ ಜಿಪಂ ಇತಿಹಾಸದಲ್ಲೇ ಇಂತಹ ಪ್ರಸಂಗ ನಡೆದಿಲ್ಲ ಎಂದು ಜಿಪಂ.ಸದಸ್ಯರು, ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರು ಹೇಳುತ್ತಿದ್ದಾರೆ. ಜಿಪಂ. ಸಿಇಒ ಅವರು ಸಂಸದರ ಮನವಿಗೆ ಸ್ಪಂದಿಸಿ ಚುನಾವಣೆಯನ್ನೇ ಮುಂದೂಡಿರುವುದು ಜಿಲ್ಲಾ ರಾಜಕಾರಣದಲ್ಲಿ ತೀವ್ರ ಚರ್ಚೆ ಆಗುತ್ತಿದೆ.

ಒಮ್ಮೆ ಚುನಾವಣೆ ದಿನಾಂಕ ನಿಗದಿ ಆದ ಬಳಿಕ ಚುನಾವಣೆ ಪ್ರಕ್ರಿಯೆ ನಡೆಯಬೇಕು ಎನ್ನುವುದು ನಿಯಮ. ಆದರೆ ಯಾರೋ ಸಂಬಂಧಪಟ್ಟ ಸದಸ್ಯರೊಬ್ಬರು ಸಭೆಗೆ ಬರಲು ಸಾಧ್ಯವಿಲ್ಲ ಎಂದು ಹೇಳಿದ ಮಾತ್ರಕ್ಕೆ ಇಡೀ ಚುನಾವಣೆ ಪ್ರಕ್ರಿಯೆ ಮುಂದೂಡಿರುವ ಸಿಇಒ ಕ್ರಮ ಎಷ್ಟು ಸರಿ ಎನ್ನುವುದು ಸದಸ್ಯರಲ್ಲಿ ಸಾಕಷ್ಟು ಗೊಂದಲವನ್ನುಂಟುಮಾಡಿದೆ.

ಜಿಪಂ. ಅಧ್ಯಕ್ಷೆ ಬಾಯಕ್ಕ ಮೇಟಿ ಅವರು ಸಿಇಒ ಅವರನ್ನು ಭೇಟಿ ಮಾಡಿ ಮನೆಯಲ್ಲಿ ಖಾಸಗಿ ಕಾರ್ಯಕ್ರಮವಿದೆ ಹಾಗಾಗಿ ಸ್ಥಾಯಿ ಸಮಿತಿಗಳ ಅಧ್ಯಕ್ಷರು ಹಾಗೂ ಸದಸ್ಯರ ಆಯ್ಕೆ ಸಭೆ ಮುಂದೂಡವಂತೆ  ಮನವಿ ಮಾಡಿದ್ದರಂತೆ. ಆಗ ಸಿಇಒ ಅವರು ಒಮ್ಮೆ ನಿಗದಿ ಪಡಿಸಿದ ದಿನಾಂಕವನ್ನು ಬದಲಾಯಿಸಲಾಗದು ಎಂದು ಹೇಳಿದ್ದರಂತೆ ಎಂದು ಮೂಲಗಳು ತಿಳಿಸಿವೆ. 

ಜಿಪಂ ಅಧ್ಯಕ್ಷರು ಚುನಾವಣೆ ಸಭೆ ದಿನಾಂಕ ಮುಂದೂಡಿ ಎಂದು ಮನವಿ ಮಾಡಿದಾಗ ಸಾಧ್ಯವಾಗದು ಎಂದು ಸ್ಪಷ್ಟವಾಗಿ ಹೇಳಿದ್ದ ಸಿಇಒ ಅವರು ಸಂಸದರು ಒಂದು ಕರೆ ಮಾಡಿ ಸಭೆ ಬರಲಾಗುತ್ತಿಲ್ಲ, ದಿನಾಂಕ ಮುಂದೂಡಿ ಎಂದು ಹೇಳಿದಾಕ್ಷಣ ಸಭೆ ಮುಂದೂಡಿರುವುದು ಎಲ್ಲರನ್ನೂ ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ. 

ಸಭೆ ಮುಂದೂಡಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಜಿಪಂ. ಅಧ್ಯಕ್ಷೆ ಬಾಯಕ್ಕ ಮೇಟಿ, ಉಪಾಧ್ಯಕ್ಷ  ಮುತ್ತಪ್ಪ ಕೋಮಾರ, ಏಕಾಏಕಿ ಸಭೆ ಮುಂದೂಡಿರುವುದು ಅಚ್ಚರಿಯನ್ನುಂಟು ಮಾಡಿದೆ. ಒಮ್ಮೆ ಸಭೆ ನಿಗದಿ ಆದ ಬಳಿಕ ಮುಂದೂಡಲು ಬಾರದು. ವಿಶೇಷ ಪ್ರಕರಣ ಎದುರಾದಲ್ಲಿ ಮಾತ್ರ ಮುಂದೂಡಬಹುದಾಗಿದ್ದು, ಸಂಸದರು ಸಭೆಗೆ ಹಾಜರಾಗಲು ಸಾಧ್ಯವಾಗುವುದಿಲ್ಲ ಎನ್ನುವ ಕಾರಣಕ್ಕೆ ಚುನಾವಣೆ ದಿನಾಂಕವನ್ನು ಸಿಇಒ ಮುಂದೂಡಿದ್ದಾರೆ. ಈ ಬಗ್ಗೆ ನಮಗೂ ಹೆಚ್ಚಿನ ಮಾಹಿತಿ ಇಲ್ಲ. ಕಚೇರಿಗೆ ಹೋಗಿ ಸಿಇಒ ಅವರನ್ನು ಭೇಟಿ ಮಾಡಿ ತಿಳಿದುಕೊಳ್ಳಬೇಕಿದೆ. ಬಹುಶಃ ಸದಸ್ಯರೊಬ್ಬರು ಸಭೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎನ್ನುವ ಹಿನ್ನೆಲೆಯಲ್ಲಿ ಚುನಾವಣೆ ಪ್ರಕ್ರಿಯೆ ದಿನಾಂಕ ಮುಂದೂಡಿರುವ ಇತಿಹಾಸವೇ ಇಲ್ಲ ಎನ್ನುವ ಅಭಿಪ್ರಾಯ ವ್ಯಕ್ತ ಪಡಿಸಿದರು.

ಸಭೆ ಮುಂದೂಡಿಕೆ ಕುರಿತು ವಿವರಣೆಗಾಗಿ ಜಿಪಂ. ಸಿಇಒ ಅವರಿಗೆ ಎಷ್ಟೇ ಕರೆ ಮಾಡಿದರೂ ಕರೆ ಸ್ವೀಕರಿಸಲೇ ಇಲ್ಲ. ಹಾಗಾಗಿ ಸಂಸದ ನಿರ್ದೇಶನದ ಹಿನ್ನೆಲೆಯಲ್ಲಿ ಚುನಾವಣೆ ಸಭೆ ಮುಂದೂಡಲು ಅವಕಾಶವಿದೆಯೋ ಹೇಗೆ ಎನ್ನುವ ಸ್ಪಷ್ಟನೆ ಸಿಗಲಿಲ್ಲ. ಒಂದಂತೂ ನಿಜ ಚುನಾವಣೆ ಸಭೆ ಮುಂದೂಡಿರುವ ಕ್ರಮ ಜಿಪಂ. ಸದಸ್ಯರಲ್ಲಿ ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ

ವರದಿ: ವಿಠಲ್ ಬಲಕುಂದಿ

Related Stories

No stories found.

Advertisement

X
Kannada Prabha
www.kannadaprabha.com