ಹುಬ್ಬಳ್ಳಿ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಗೆ ಪ್ರತಿಭಟನೆ ಬಿಸಿ, ಕಾಂಗ್ರೆಸ್ ಕಾರ್ಯಕರ್ತರಿಂದ ಮುತ್ತಿಗೆ 

ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಳಿ ನಗರ ಹುಬ್ಬಳ್ಳಿ-ಧಾರವಾಡಕ್ಕೆ ಆಗಮಿಸಿದ ಕೇಂದ್ರ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಶನಿವಾರ ಪ್ರತಿಭಟನೆ ಎದುರಿಸುವ ಸಂದರ್ಭ ಎದುರಾಯಿತು. 
ಕೇಂದ್ರ ಸಚಿವೆ ಇತ್ತೀಚೆಗೆ ಬೆಳಗಾವಿಯ ಪ್ರವಾಹ ಸಂತ್ರಸ್ತರ ಕ್ಷೇಮ ಆಲಿಸಲು ಬಂದಾಗಿನ ಸಾಂದರ್ಭಿಕ ಚಿತ್ರ
ಕೇಂದ್ರ ಸಚಿವೆ ಇತ್ತೀಚೆಗೆ ಬೆಳಗಾವಿಯ ಪ್ರವಾಹ ಸಂತ್ರಸ್ತರ ಕ್ಷೇಮ ಆಲಿಸಲು ಬಂದಾಗಿನ ಸಾಂದರ್ಭಿಕ ಚಿತ್ರ

ಹುಬ್ಬಳ್ಳಿ: ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಳಿ ನಗರ ಹುಬ್ಬಳ್ಳಿ-ಧಾರವಾಡಕ್ಕೆ ಆಗಮಿಸಿದ ಕೇಂದ್ರ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಶನಿವಾರ ಪ್ರತಿಭಟನೆ ಎದುರಿಸುವ ಸಂದರ್ಭ ಎದುರಾಯಿತು.


ಹುಬ್ಬಳ್ಳಿ ವಿಮಾನ ನಿಲ್ದಾಣದ ಎದುರು ಮಾಜಿ ಸಚಿವ ಕಾಂಗ್ರೆಸ್ ನಾಯಕ ಆರ್ ವಿ ದೇಶಪಾಂಡೆ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕೇಂದ್ರದ ವಿರುದ್ಧ ಉತ್ತರ ಕರ್ನಾಟಕ ಪ್ರವಾಹ ಪೀಡಿತರಿಗೆ ಪರಿಹಾರ ಹಣ ಬಿಡುಗಡೆ ಮಾಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಪ್ರತಿಭಟನಾನಿರತ ಕಾಂಗ್ರೆಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡರು.


ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಆರ್.ವಿ.ದೇಶಪಾಂಡೆ, ಕೇಂದ್ರ ಸರ್ಕಾರ 1,200 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಕೇಳಿದ್ದೇವೆ. ಆದರೆ ಈ ಪರಿಹಾರ ಮೊತ್ತ ಸಾಕಾಗುವುದಿಲ್ಲ. ಕನಿಷ್ಠ ಪಕ್ಷ 5 ಸಾವಿರ ಕೋಟಿ ಕೇಂದ್ರ ಬಿಡುಗಡೆ ಮಾಡಬೇಕು. ಈ ಹಿಂದೆ ಇಷ್ಟೊಂದು ಪ್ರಮಾಣದಲ್ಲಿ ನೆರೆ ಬರದಿದ್ದರೂ, ಯುಪಿಎ ಸರ್ಕಾರ 16 ಸಾವಿರ ಕೋಟಿ ಬಿಡುಗಡೆ ಮಾಡಿತ್ತು. ಇಂದು ರಾಜ್ಯದ ಬಹುತೇಕ ಜಿಲ್ಲೆಗಳು ಅನಾವೃಷ್ಠಿಗೀಡಾಗಿವೆ. ಸರ್ಕಾರ ನೀಡಿದ ಹಣ ಸಂತ್ರಸ್ತರಿಗೆ ತಲುಪಿಲ್ಲ. ಜನ ಬೀದಿಪಾಲಾಗುತ್ತಿದ್ದು, ಜನರು ಕಷ್ಟದಲ್ಲಿದ್ದಾಗ ರಾಜ್ಯ ಸರ್ಕಾರ ಇನ್ನೂ ಕ್ರಿಯಾಶೀಲವಾಗಬೇಕಿತ್ತು ಎಂದು ಕಿಡಿಕಾರಿದರು.


ಮಾಜಿ ಸಂಸದ ಐ ವಿ ಸನದಿ, ಕೇಂದ್ರ ಸರ್ಕಾರ ಇನ್ನಷ್ಟು ಪರಿಹಾರ ಬಿಡುಗಡೆ ಮಾಡಬೇಕು. ಇನ್ನು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹಲವು ಸಮಸ್ಯೆಗಳಿದ್ದು ಅವುಗಳನ್ನು ಪರಿಹರಿಸಬೇಕು ಎಂದರು. 

ಈ ಸಂದರ್ಭದಲ್ಲಿ ಪ್ರತಿಭಟನಾ ನಿರತ ಸುಮಾರು 70 ಮಂದಿ ಕಾಂಗ್ರೆಸ್ ಕಾರ್ಯಕರ್ತೆಯರನ್ನು  ಪೊಲೀಸರು ವಶಕ್ಕೆ ಪಡೆದರು. ಕಪಿಡಬ್ಲ್ಯುಸಿಸಿ ಕಾರ್ಯದರ್ಶಿ ದೀಪಾ ಗೌರಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿತ್ತು. 


ಧಾರವಾಡದ ಡಾ. ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಆಯೋಜನೆಗೊಂಡಿರುವ ರಾಷ್ಟ್ರೀಯ ತೆರಿಗೆ ಸಲಹೆಗಾರ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ನಿರ್ಮಲಾ ಸೀತಾರಾಮನ್ ತೆರಳಿದರು. ಈ ವೇಳೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ರಾಜ್ಯ ಸಚಿವ ಜಗದೀಶ್ ಶೆಟ್ಟರ್, ಸಂಸದ ಶಿವಕುಮಾರ ಉದಾಸಿ, ಶಾಸಕ ಅರವಿಂದ ಬೆಲ್ಲದ ಉಪಸ್ಥಿತಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com