ಹುಲಿ ದಾಳಿಗೆ ಮತ್ತೊಬ್ಬ ರೈತ ಬಲಿ: ನರಭಕ್ಷಕನನ್ನು ಸೆರೆ ಹಿಡಿಯದ್ದಕ್ಕೆ ಗ್ರಾಮಸ್ಥರ ಆಕ್ರೋಶ

ಬಂಡೀಪುರ ಅರಣ್ಯದಂಚಿನಲ್ಲಿ ಹುಲಿ ಹಾವಳಿ ಹೆಚ್ಚಾಗಿದೆ. ಜನ, ಜಾನುವಾರುಗಳ ಮೇಲೆ ಹುಲಿರಾಯ ಪದೇ ಪದೇ ದಾಳಿ ನಡೆಸುತ್ತಿದ್ದಾನೆ. ಒಂದು ತಿಂಗಳ ಅವಧಿಯಲ್ಲಿ ಇಬ್ಬರು ರೈತರು ಹುಲಿ ಬಾಯಿಗೆ ಸಿಕ್ಕಿ ಪ್ರಾಣಬಿಟ್ಟಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚಾಮರಾಜನಗರ: ಬಂಡೀಪುರ ಅರಣ್ಯದಂಚಿನಲ್ಲಿ ಹುಲಿ ಹಾವಳಿ ಹೆಚ್ಚಾಗಿದೆ. ಜನ, ಜಾನುವಾರುಗಳ ಮೇಲೆ ಹುಲಿರಾಯ ಪದೇ ಪದೇ ದಾಳಿ ನಡೆಸುತ್ತಿದ್ದಾನೆ. ಒಂದು ತಿಂಗಳ ಅವಧಿಯಲ್ಲಿ ಇಬ್ಬರು ರೈತರು ಹುಲಿ ಬಾಯಿಗೆ ಸಿಕ್ಕಿ ಪ್ರಾಣಬಿಟ್ಟಿದ್ದಾರೆ.

ಮೂರ್ಕಾಲು ಗುಡ್ಡದಲ್ಲಿ ಹುಲಿ ದಾಳಿಗೆ ಮತ್ತೋರ್ವ ರೈತ ಮೃತಪಟ್ಟಿರುವ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿಯಲ್ಲಿ ಮಂಗಳವಾರ ನಡೆದಿದೆ. ಶಿವಲಿಂಗಪ್ಪ ಎಂಬುವವರು ನಿನ್ನೆ ತಮ್ಮ ಜಮೀನಿನಲ್ಲಿ ದನ ಮೇಯಿಸುತ್ತಿದ್ದಾಗ ಏಕಾಏಕಿ ಹುಲಿ ದಾಳಿ ಮಾಡಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ತಿಂಗಳು ಶಿವಮಾರಯ್ಯ ಎಂಬುವವರು ಹುಲಿ ದಾಳಿಗೆ ಬಲಿಯಾಗಿದ್ದರು. ಹಲವು ಜಾನುವಾರುಗಳು ಕೂಡ ಬಲಿಯಾಗಿದ್ದವು. 

ನಿನ್ನೆ ಚಾಮರಾಜನಗರ ಜಿಲ್ಲೆಯ ಚೌಡಹಳ್ಳಿಯ ರೈತನನ್ನು ಹುಲಿ ಬಲಿತೆಗೆದುಕೊಂಡಿದೆ.  ಆತಂಕದಲ್ಲೇ ಬದುಕುತ್ತಿರುವ ಗ್ರಾಮಸ್ಥರು ಹುಲಿಯನ್ನು ಕೊಲ್ಲುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಹೀಗಾಗಿ ಅರಣ್ಯಾಧಿಕಾರಿಗಳು 48 ಗಂಟೆಗಳಲ್ಲಿ ಹುಲಿ ಸೆರೆ ಹಿಡಿಯುವುದಾಗಿ, ಒಂದು ವೇಳೆ ಸಿಗದಿದ್ದರೆ ಗುಂಡಿಕ್ಕಿ ಕೊಲ್ಲುವುದಾಗಿ ಎಪಿಸಿಸಿಎಫ್ ಜಗತ್ ರಾಂ ಭರವಸೆ ನೀಡಿದ್ದರು.

ಹುಲಿ ದಾಳಿಯ ಸುದ್ದಿ ತಿಳಿದ ಗ್ರಾಮಸ್ಥರ ಗದ್ದಲಕ್ಕೆ ಸ್ಥಳದಲ್ಲೇ ಅಡಗಿದ್ದ ಹುಲಿ ಜನರ ಮಧ್ಯೆ ಘರ್ಜಿಸುತ್ತ ಕಾಡಿನತ್ತ ಓಡಿದೆ. ಹುಲಿ ಕಾಣಿಸಿಕೊಂಡದ್ದರಿಂದ ಜನರು ಭಯಭೀತರಾಗಿ ಓಡಿದ್ದಾರೆ.

ಸ್ಥಳಕ್ಕೆ ಬಂಡೀಪುರ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ತಡವಾಗಿ ಭೇಟಿ ನೀಡಿದ್ದಾರೆ ಮತ್ತು ಹುಲಿ ದಾಳಿಯಿಂದ ಗ್ರಾಮಸ್ಥರ ರಕ್ಷಣೆಗೆ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಅಧಿಕಾರಿಗಳು ಕಾಟಾಚಾರದ ಶೋಧ ಕಾರ್ಯಾಚರಣೆ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿ ದಾಳಿಗೆ ರೈತನೊಬ್ಬ ಪ್ರಾಣ ಕಳೆದುಕೊಂಡು ತಿಂಗಳು ಕಳೆಯುವುದರೊಳಗೆ ಮತ್ತೊಬ್ಬ ರೈತನನ್ನು ಹುಲಿ ಕೊಂದು ಹಾಕಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com