ಕೊಪ್ಪಳ ಜಿಲ್ಲೆಯ ನಿಡಶೇಸಿ ಕೆರೆಯಲ್ಲಿ ಹಕ್ಕಿಗಳ ಚಿಲಿಪಿಲಿ…

ಬಿಸಿಲ ನಾಡು, ಬರದ ಬೀಡು ಅಂತೆಲ್ಲ ಕರೆಸಿಕೊಳ್ಳುವ ಹಿಂದುಳಿದ ಜಿಲ್ಲೆಗಳಲ್ಲಿ ಕೊಪ್ಪಳ ಸಹ ಒಂದು. ಇಂಥ ನಾಡಿನಲ್ಲಿ ಒಂದಲ್ಲ ಒಂದು ಪ್ರಕೃತಿದತ್ತ ವಿಶೇಷ ಸಂಗತಿಗಳಿಗೂ ಕೊಪ್ಪಳ ಹೆಸರುವಾಸಿ. ಜಿಲ್ಲೆಯ ದಾಳಿಂಬೆನಗರಿ ಅಂತಾನೇ ಕರೆಸಿಕೊಳ್ಳೋ ಕುಷ್ಟಗಿ ತಾಲೂಕಿನ ಸ್ಪೆಷಲ್ ಸ್ಟೋರಿ ಇಲ್ಲಿದೆ.
ನಿಡಶೇಸಿ ಕೆರೆಯ ದಡದಲ್ಲಿ ಸದ್ಯ ಬೆಳ್ಳಕ್ಕಿಗಳಿಗೆ ಮುಳ್ಳು ಕಂಟಿ ವಿಶ್ರಾಂತಿ ಸ್ಥಾನ
ನಿಡಶೇಸಿ ಕೆರೆಯ ದಡದಲ್ಲಿ ಸದ್ಯ ಬೆಳ್ಳಕ್ಕಿಗಳಿಗೆ ಮುಳ್ಳು ಕಂಟಿ ವಿಶ್ರಾಂತಿ ಸ್ಥಾನ

ಕೊಪ್ಪಳ: ಬಿಸಿಲ ನಾಡು, ಬರದ ಬೀಡು ಅಂತೆಲ್ಲ ಕರೆಸಿಕೊಳ್ಳುವ ಹಿಂದುಳಿದ ಜಿಲ್ಲೆಗಳಲ್ಲಿ ಕೊಪ್ಪಳ ಸಹ ಒಂದು. ಇಂಥ ನಾಡಿನಲ್ಲಿ ಒಂದಲ್ಲ ಒಂದು ಪ್ರಕೃತಿದತ್ತ ವಿಶೇಷ ಸಂಗತಿಗಳಿಗೂ ಕೊಪ್ಪಳ ಹೆಸರುವಾಸಿ. ಜಿಲ್ಲೆಯ ದಾಳಿಂಬೆನಗರಿ ಅಂತಾನೇ ಕರೆಸಿಕೊಳ್ಳೋ ಕುಷ್ಟಗಿ ತಾಲೂಕಿನ ಸ್ಪೆಷಲ್ ಸ್ಟೋರಿ ಇಲ್ಲಿದೆ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ನಿಡಶೇಸಿ ಕೆರೆ ತುಂಬಾನೇ ಫೇಮಸ್. ಆದರೆ ಸತತ ಬರಗಾಲದಿಂದ ಕೆರೆ ತುಂಬಿರಲಿಲ್ಲ. ಈ ವರ್ಷವೂ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಅಷ್ಟಕ್ಕಷ್ಟೇ. ಆದರೆ ಕುಷ್ಟಗಿ ತಾಲೂಕಿನ ವಿವಿಧೆಡೆ ಭರ್ಜರಿ ಮಳೆಯಾಗಿದೆ. ಆಂತೆಯೇ ಈ ನಿಡಶೇಷಿ ಕೆರೆ ಭರ್ತಿಯಾಗಿದೆ. ಕೆರೆ ಭರ್ತಿಯಾಗಿದ್ದು ಗ್ರಾಮದ ಜನರಿಗೂ, ರೈತರಿಗೂ ಸಂತಸದ ವಿಷಯ ಎಂಬುದರಲ್ಲಿ ಎರಡು ಮಾತಿಲ್ಲ. ಇದರ ಜೊತೆಗೆ ಸುಮಾರು ದಶಕದ ನಂತರ ಕೆರೆ ಸುತ್ತಮುತ್ತ ದೇಶಿ ಬಾನಾಡಿಗಳ ಕಲರವ ಕೇಳಲಾರಂಭಿಸಿದ್ದು ಪರಿಸರ, ಪಕ್ಷಿಪ್ರಿಯರ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ.

ಈಗ ಕುಷ್ಟಗಿ ತಾಲೂಕಿನಾದ್ಯಂತ ನಿಡಶೇಸಿ ಕೆರೆಯದ್ದೇ ಮಾತು. ಸಾರ್ವಜನಿಕರ ಸಹಭಾಗಿತ್ವದಲ್ಲಿ ಅಭಿವೃಧ್ಧಿಗೊಂಡಿರುವ ಈ ಕೆರೆಗೆ ಮುಂಗಾರು ಗತಿಸಿದರೂ, ನೀರಿರಲಿಲ್ಲ. ಹಿಂಗಾರು ಕೊನೆಯ ಘಟ್ಟದಲ್ಲಿ ಸುರಿದ ಭಾರಿ ಮಳೆಗೆ 320 ಎಕರೆ ಪ್ರದೇಶದ ಪೈಕಿ ಈ ಕೆರೆ ಮುಳುಗಡೆಯಾಗಿದ್ದು 280 ಎಕರೆ. ಇಷ್ಟೊಂದು ವಿಶಾಲ ಪ್ರದೇಶದಲ್ಲಿ ನೀರು ಆವರಿಸಿಕೊಂಡಿದೆ. 

ಕೆರೆ ಸುತ್ತಮುತ್ತಲಿನ ತೋಟಪಟ್ಟಿಗಳು ಹಸಿರಿನಿಂದ ಕಂಗೋಳಿಸುತ್ತಿವೆ. ಅಂತರ್ಜಲ ವೃದ್ದಿಸುವ ಕೆರೆ, ಪಕ್ಷಿಗಳಿಗೆ ಆಸರೆ ತಾಣವಾಗಿ ಬದಲಾಗಿದೆ. ಪಕ್ಷಿಗಳ ಕಲರವ ಕೆರೆಯ ಅಂದವನ್ನು ಹೆಚ್ಚಿಸಿದೆ. 

ಸಮಾರು ವರ್ಷಗಳಿಂದ ಬರಗಾಲದ ಬೇಗುದಿಗೆ ನಿಡಶೇಷಿ ಕೆರೆ ಬತ್ತಿ ಬಟಾ ಬಯಲಾಗಿತ್ತು. ಪ್ರಾಣಿ ಪಕ್ಷಿಗಳು ಕೆರೆಯ ಜಾಗದತ್ತ ಮುಖ ಮಾಡಿರಲಿಲ್ಲ. ಆ ವೇಳೆ ಇದನ್ನು ಮನಗಂಡ ಪಕ್ಷಿಪ್ರಿಯರು, ಸಮಾಜಪರ ಸಂಘಟನೆಗಳ ಕಾರ್ಯಕರ್ತರು  ಪ್ರಾಣಿ ಪಕ್ಷಿಗಳಿಗೆ ನಿರಾಸೆಯಾಗದಂತೆ ಅಲ್ಲಲ್ಲಿ ನೀರಿನ ಅರವಟ್ಟಿಗೆಗಳನ್ನು ಇಟ್ಟು ಪಕ್ಷಿಗಳ ಬರುವಿಕೆಗೆ, ಇರುವಿಕೆಗೆ ಕಾಯುತ್ತಿದ್ದುದನ್ನ ಸ್ಮರಿಸಬಹುದು.

ಮಳೆರಾಯನ ಕೃಪೆಗೆ ಈ ಕೆರೆಗೆ ನೀರು ಹರಿದುಬರುತ್ತಿದ್ದಂತೆ ಪಕ್ಷಿಗಳ ಆಗಮನವೂ ಆಗುತ್ತಿದೆ. ಕೆರೆಯ ಪ್ರದೇಶದಲ್ಲೀಗ  ಬಾನಾಡಿಗಳ ಚಿಲಿಪಿಲಿ ಕರ್ಣಗಳಿಗೆ ಇಂಪು, ನಯನಗಳಿಗೆ ಮನಮೋಹಕ. ಕೆರೆಯಂಗಳದಲ್ಲಿ ಹಿಂಡು ಹಿಂಡಾಗಿ ಪಕ್ಷಿಗಳು ಜಮಾಯಿಸುತ್ತಿರುವುದು ಪಕ್ಷಿ ಪ್ರಿಯರು, ಹಕ್ಕಿಗಳ ಮೋಹಕ ಸೊಬಗನ್ನು ತಮ್ಮ ಕ್ಯಾಮೆರಾಗಳಲ್ಲಿ ಸೆರೆ ಹಿಡಿಯಲು ಸಕ್ರೀಯರಾಗಿರುವುದು ಸದ್ಯದ ಸಾಮಾನ್ಯ ಸಂಗತಿ.

ದಿನಕಳೆದಂತೆ ಪಕ್ಷಿಗಳ ಆಗಮನವೂ ಹೆಚ್ಚುತ್ತಿದು, ಕೆರೆಯಂಗಳದಲ್ಲಿ ಪಕ್ಷಿಗಳಿಗಾಗಿ ನಿರ್ಮಿಸಿದ ನಡುಗಡ್ಡೆಗಳಲ್ಲಿ ಅಹಾರಕ್ಕಾಗಿ ಕಾದು ಕುಳಿತಿರುವುದು ಕಂಡು ಬರುತ್ತಿದ್ದು, ಚುಕ್ಕೆ ಬಾತು, ಬಣ್ಣದ ಕೊಕ್ಕರೆ, ಬೆಳ್ಳಕ್ಕಿ, ಬಿಳಿ, ಕರಿ ಬಣ್ಣದ ಕೆಂಬರ್ಲು ಬೂದುಬುಕ್ಕ, ಹುಲ್ಲಂಕಿ, ಗುಳಮುಳಕ, ಮೆಟ್ಟಗಾಲು ಹಕ್ಕಿ, ಟಿಟ್ಟಿಬಾ ಮೊದಲಾದ ಪಕ್ಷಿಗಳು ಬಂದಿದ್ದು, ಇದರ ಜೊತೆಗೆ ನಾನಾ ನಮೂನೆಯ ಪಕ್ಷಿಗಳ ಚಿಣ್ಣಾಟವನ್ನು ಕಣ್ತುಂಬಿಕೊಳ್ಳುವ ತಾಣವಾಗಿ ನಿಡಶೇಸಿ ಕೆರೆ ಮಾರ್ಪಟ್ಟಿದೆ.

ಪಕ್ಷಿಗಳಿಗೆ ಸದ್ಯ ಮೊಟ್ಟೆ ಇಟ್ಟು, ಸಂತಾನಕ್ಕೆ ಪ್ರಾಶಸ್ತ್ಯ ಎನಿಸಿದೆ ಆದರೆ ಕೆರೆ ಸುತ್ತಲು ಗಿಡಗಳಿಲ್ಲ. ತೋಟ ಪಟ್ಟಿಗಗಳಲ್ಲಿರುವ ಗಿಡಗಳನ್ನೇ ಆಶ್ರಯಿಸಬೇಕಿದೆ. ಅರಣ್ಯ ಇಲಾಖೆಯ ಕೆರೆಯ ಸರಹದ್ದಿನ ವಡ್ಡಿನ ಸುತ್ತಲೂ ಗಿಡ ನೆಟ್ಟಿದ್ದು, ಜನರ ಓಡಾಟದ ಹಿನ್ನೆಲೆಯಲ್ಲಿ ಪಕ್ಷಿಗಳು ಕೆರೆ ದಡಕ್ಕೆ ಆಗಮಿಸುತ್ತಿಲ್ಲ. ಕೆಲ ಸಮಯ ಮಾತ್ರ ಕೆರೆ ದಡದಲ್ಲಿ ಕಾಣಿಸಿಕೊಳ್ಳುವ ಪಕ್ಷಿಗಳು, ಬಹುತೇಕ ಸಮಯವನ್ನು ಕೆರೆಯ ನಡುಗಡ್ಡೆಗಳಲ್ಲಿ ಕಾಲ ಕಳೆಯುತ್ತಿರುವುದರಿಂದ ಪಕ್ಷಿಗಳ ನ್ಶೆಜತೆಯನ್ನು ದೂರದರ್ಶಕ ಸಾಧನೆಯಿಂದ ಗುರುತಿಸಲು ಸಾಧ್ಯವಿದ್ದು, ಆ ವ್ಯವಸ್ಥೆ ಅರಣ್ಯ ಇಲಾಖೆ ಕೈಗೊಳ್ಳಬೇಕಿರುವುದು ಅಗತ್ಯವಿದೆ ಎಂಬುದು ಪಕ್ಷಿತಜ್ಙರ ಅಭಿಪ್ರಾಯ.

ನವೆಂಬರ್-ಡಿಸೆಂಬರ್ನಲ್ಲಿ ವಿದೇಶಿ ಹಕ್ಕಿಗಳ ಆಗಮನದ ನಿರೀಕ್ಷೆ: 
ಸತತ ಬರ, ಮಳೆ ಅಭಾವದ ಹಿನ್ನೆಲೆಯಲ್ಲಿ ನಿಡಶೇಸಿ ಕೆರೆ ಬತ್ತಿದ್ದರಿಂದ ದೇಶಿ ವಿದೇಶಿ ಹಕ್ಕಿಗಳು ಬರಲಿಲ್ಲ. ಇದೀಗ ನೀರು ಬಂದಿದ್ದು, ದೇಶಿ ಹಕ್ಕಿಗಳನ್ನು ಮಾತ್ರ ಸದ್ಯ ಕಾಣಬಹುದಾಗಿದೆ. ನವೆಂಬರ, ಡಿಸೆಂಬರ್ ವೇಳೆ ಚಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿದೇಶಿ ಹಕ್ಕಿಗಳ ಆಗಮನ ನಿರೀಕ್ಷೆ ಇದೆ. ಕೆರೆ ಅಭಿವೃಧ್ಧಿ ಸಂದರ್ಭದಲ್ಲಿ ಕೆರೆ ದಡದಲ್ಲಿದ್ದ ಗಿಡಗಳನ್ನು ತೆರವುಗೊಳಿಸಲಾಗಿದ್ದು, ಸದ್ಯ ಪಕ್ಷಿಗಳು ಕೂರಲು ಗಿಡಗಳ ವ್ಯವಸ್ಥೆ ಇಲ್ಲ. ಅರಣ್ಯ ಇಲಾಖೆ ಈ ಪ್ರದೇಶದಲ್ಲಿ ಬೇಗ ಬೆಳೆಯುವ ಗಿಡ, ಪೊದೆ ಸಸ್ಯಗಳನ್ನು ನೆಡುವುದಂದ ಪಕ್ಷಿಗಳಿಗೆ ವಿಶ್ರಾಂತಿಗೆ ಹಾಗೂ ಗೂಡು ಕಟ್ಟಲು ಸಹಕಾರಿಯಾಗಲಿದೆ.

ವರದಿ: ಬಸವರಾಜ ಕರುಗಲ್, ಚಿತ್ರ ಕೃಪೆ: ಅಮರೇಗೌಡ ಪಾಟೀಲ, ಜಾಲಿಹಾಳ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com