ವಾಹನ ಮಾರಾಟ ಶೇ. 10.34 ರಷ್ಟು ಕುಸಿತ, ಜಿಎಸ್ಟಿ ಸಂಗ್ರಹದಲ್ಲಿ ಪ್ರಗತಿ: ಸಿಎಂ ಯಡಿಯೂರಪ್ಪ

ವಾಹನ ಮಾರಾಟ ಹಾಗೂ ಸಾರಿಗೆ ಮತ್ತು ಸಾರಿಗೇತರ ವಾಹನಗಳ ನೋಂದಣಿಯಲ್ಲಿ ಶೇ. 10.34 ರಷ್ಟು ಕಡಿತವಾಗಿದ್ದು, ಇದರಿಂದಾಗಿ ತೆರಿಗೆ ಸಂಗ್ರಹದ ಮೇಲೆ ಹೊಡೆತ ಬಿದ್ದಿದೆಯಾದರೂ,

Published: 11th September 2019 08:33 PM  |   Last Updated: 11th September 2019 08:33 PM   |  A+A-


BS Yediyurappa

ಬಿಎಸ್ ಯಡಿಯೂರಪ್ಪ

Posted By : Lingaraj Badiger
Source : UNI

ಬೆಂಗಳೂರು: ವಾಹನ ಮಾರಾಟ ಹಾಗೂ ಸಾರಿಗೆ ಮತ್ತು ಸಾರಿಗೇತರ ವಾಹನಗಳ ನೋಂದಣಿಯಲ್ಲಿ ಶೇ. 10.34 ರಷ್ಟು ಕಡಿತವಾಗಿದ್ದು, ಇದರಿಂದಾಗಿ ತೆರಿಗೆ ಸಂಗ್ರಹದ ಮೇಲೆ ಹೊಡೆತ ಬಿದ್ದಿದೆಯಾದರೂ, ರಾಜ್ಯದಲ್ಲಿ ಒಟ್ಟಾರೆ ತೆರಿಗೆ ಸಂಗ್ರಹದ ಮೇಲೆ ಅಷ್ಟಾಗಿ ಪರಿಣಾಮ ಕಂಡು ಬಂದಿಲ್ಲ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಬುಧವಾರ ಹೇಳಿದ್ದಾರೆ.

ಇಂದು ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ತೆರಿಗೆ ಸಂಗ್ರಹ ಇಲಾಖೆಗಳಾದ ವಾಣಿಜ್ಯ ತೆರಿಗೆ ಇಲಾಖೆ, ಅಬಕಾರಿ ಇಲಾಖೆ, ಸಾರಿಗೆ ಇಲಾಖೆ ಮತ್ತು ನೋಂದಣಿ ಮತ್ತು ಮುದ್ರಾಂಕ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ವಾಣಿಜ್ಯ ತೆರಿಗೆಯಲ್ಲಿ ಶೇ. 44.2ರಷ್ಟು ಪ್ರಗತಿ ಸಾಧಿಸಿದ್ದು, ಜಿಎಸ್ ಟಿ ತೆರಿಗೆ ಸಂಗ್ರಹದಲ್ಲಿ ಹೆಚ್ಚಳ ಕಂಡು ಬಂದಿದೆ. ಅಬಕಾರಿ ಇಲಾಖೆ, ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಗುರಿ ಮೀರಿದ ಸಾಧನೆ ಮಾಡಲಾಗಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಲ್ಪ ಪ್ರಮಾಣದಲ್ಲಿ ತೆರಿಗೆ ಸಂಗ್ರಹದಲ್ಲಿ ಹಿನ್ನೆಡೆಯಾಗಿದೆ ಎಂದು ಅವರು ತಿಳಿಸಿದರು.

ವಾಣಿಜ್ಯ ತೆರಿಗೆ ಇಲಾಖೆಯಲ್ಲಿ 2019-20ನೇ ಸಾಲಿನ ತೆರಿಗೆ ಸಂಗ್ರಹ ಗುರಿ 76,046 ಕೋಟಿ ರೂ ಆಗಿದ್ದು, ಆಗಸ್ಟ್ 31ವರೆಗೆ 33,618 ಕೋಟಿ ರೂ ತೆರಿಗೆ ಸಂಗ್ರಹವಾಗಿದೆ. ಇದು ವಾರ್ಷಿಕ ಗುರಿಗೆ ಹೋಲಿಸಿದರೆ ಶೇ.44.2 ರಷ್ಟಿದೆ. ಕಳೆದ ವರ್ಷ ಆಗಸ್ಟ್ ಅಂತ್ಯದ ವೇಳೆಯ ತೆರಿಗೆ ಸಂಗ್ರಹಕ್ಕೆ ಹೋಲಿಸಿದರೆ ಶೇ. 20.3 ರಷ್ಟು ಹೆಚ್ಚಳ ಕಂಡು ಬಂದಿದೆ ಎಂದರು.

ಜಿಎಸ್‍ಟಿ ತೆರಿಗೆ ಸಂಗ್ರಹದಲ್ಲಿಯೂ ಶೇ. 14.3 ರಷ್ಟು ಬೆಳವಣಿಗೆ ಕಂಡು ಬಂದಿದ್ದು, ಜಿಎಸ್‍ಟಿ ಜಾರಿಯಾದಾಗ 4.51 ಲಕ್ಷ ಮಂದಿ/ ಕಂಪೆನಿಗಳು ಜಿಎಸ್‍ಟಿ ನೋಂದಾವಣೆ ಮಾಡಿಕೊಂಡಿದ್ದರು. ಸದ್ಯ, ಜಿಎಸ್ಟಿ ನೋಂದಾವಣೆಯಾದವರ ಸಂಖ್ಯೆ 8,16,573 ದಾಟಿದ್ದು, ಶೇ.100ರಷ್ಟು ಹೆಚ್ಚಳವಾಗಿದೆ ಎಂದರು.

ಆರ್ಥಿಕ ಹಿಂಜರಿತದಿಂದ ಜಿಎಸ್ ಟಿ ಸಂಗ್ರಹಣೆಯಲ್ಲಿ ಸ್ವಲ್ಪ ಹಿನ್ನಡೆಯಾಗಿದ್ದರೂ ಇತರ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯ ಉತ್ತಮ ಸ್ಥಿತಿಯಲ್ಲಿದೆ. ತೆರಿಗೆ ಸಂಗ್ರಹವನ್ನು ಕಟ್ಟುನಿಟ್ಟಾಗಿ ನಿರ್ವಹಿಸಲಾಗುತ್ತಿದ್ದು, ವ್ಯಾಪಾರ ಸ್ಥಳಕ್ಕೆ ತೆರಳಿ ತೆರಿಗೆ ಸಂಗ್ರಹ ಮಾಡಲಾಗುತ್ತಿದೆ. ಜಿಎಸ್‍ಟಿ ಪಾವತಿಯಲ್ಲಿ ನಿರ್ಲಕ್ಷ್ಯ ತೋರಿದ 64 ಸಾವಿರಕ್ಕೂ ಹೆಚ್ಚು ಪರವಾನಿಗೆಗಳನ್ನು ರದ್ದುಪಡಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ನಿಯಮಿತ ತಪಾಸಣೆ,ಸೂಕ್ತ ನಿಗಾ ವಹಿಸುವುದರ ಜೊತೆಗೆ ಇ-ವೇ ಬಿಲ್‌ಗಳ ತಪಾಸಣೆಯನ್ನೂ ಕಟ್ಟುನಿಟ್ಟಾಗಿ ನಡೆಸುವ ಮೂಲಕ, ತೆರಿಗೆ ಸಂಗ್ರಹಣೆಯಲ್ಲಿ ವ್ಯತ್ಯಯವಾಗದಂತೆ ಎಚ್ಚರ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಸಾಲಿನಲ್ಲಿ 44 ಲಕ್ಷ ಇ-ವೇ ಬಿಲ್‍ಗಳನ್ನು ಪರಿಶೀಲನೆ  ಮಾಡಲಾಗಿದೆ. ಜಿಎಸ್‍ಟಿ ತೆರಿಗೆ ವಂಚನೆ ಪ್ರಕರಣಗಳನ್ನು ಪತ್ತೆ ಹಚ್ಚಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಜಾರಿ ಮತ್ತು ಜಾಗೃತಿ ವಿಭಾಗಗಳನ್ನು ಇನ್ನಷ್ಟು ಬಲಪಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ತೆರಿಗೆ ಸೋರಿಕೆಯಾಗದಂತೆ ಕಟ್ಟುನಿಟ್ಟಿನ ಕ್ರಮ ವಹಿಸಲು ಸೂಚಿಸಲಾಗಿದೆ ಎಂದು ಯಡಿಯೂರಪ್ಪ ಹೇಳಿದರು.

ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಒಟ್ಟಾರೆ ಬೆಳವಣಿಗೆ ಶೇ14.16 ರಷ್ಟಿದ್ದು,ಇತರ ರಾಜ್ಯಗಳಿಗಿಂತ ಉತ್ತಮ ಬೆಳವಣಿಗೆ ಕಂಡು ಬಂದಿದೆ.ಆದರೆ ಆರ್ಥಿಕ ಬೆಳವಣಿಗೆ ಇನ್ನೂ ಸುಧಾರಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.ಅಂತೆಯೇ ಆರ್ಥಿಕ ಬೆಳವಣಿಗೆ ದರ ಸುಸ್ಥಿರಗೊಳಿಸಲು ಎಲ್ಲ ಪ್ರಯತ್ನ ಮಾಡುವಂತೆ ಮುಖ್ಯಮಂತ್ರಿ ಸಲಹೆ ನೀಡಿದ್ದಾರೆ.

ಜಿಎಸ್‍ಟಿ ಸಂರಕ್ಷಿತ ತೆರಿಗೆ ಮತ್ತು ವಾಸ್ತವ ತೆರಿಗೆ ಸಂಗ್ರಹದ ನಡುವಿನ ಅಂತರ ಕಡಿತಗೊಳಿಸಲು  ಶ್ರಮಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ವಿಭಾಗೀಯ ಜಂಟಿ ಆಯುಕ್ತರು, ರಾಜಸ್ವ ಸಂಗ್ರಹ ಕೊರತೆ ಆಗದಂತೆ ಎಚ್ಚರ ವಹಿಸುವಂತೆ ಹಾಗೂ ಮೇಲ್ಮನವಿಗಳನ್ನು ಶೀಘ್ರ ವಿಲೇವಾರಿ ಮಾಡುವಂತೆಯೂ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು.

ಅಬಕಾರಿ ಇಲಾಖೆಯಲ್ಲಿ 2019-20 ನೇ ಸಾಲಿಗೆ 20,950 ರೂ ತೆರಿಗೆ ಸಂಗ್ರಹದ ಗುರಿ ನಿಗದಿ ಪಡಿಸಲಾಗಿದೆ.ಏಪ್ರಿಲ್ 1 ರಿಂದ ಆಗಸ್ಟ್ 30 ರ ವರೆಗೆ 9145.36 ಕೋಟಿ ರೂ ತೆರಿಗೆ ಸಂಗ್ರಹ ವಾಗಿದ್ದು, ಶೇ 43.65 ರಷ್ಟು ಗುರಿ ಸಾಧನೆ ಮಾಡಲಾಗಿದೆ.ತೆರಿಗೆ ಸಂಗ್ರಹ ತೃಪ್ತಿಕರವಾಗಿದ್ದು, ವರ್ಷದ ಅಂತ್ಯಕ್ಕೆ ನಿಗದಿತ ಗುರಿ ಸಾಧಿಸುವ ವಿಶ್ವಾಸವಿದೆ.ತೆರಿಗೆ ಸಂಗ್ರಹದಲ್ಲಿ ಕಳೆದ ವರ್ಷಕ್ಕಿಂತ 952.70 ಕೋಟಿ ರೂ ಹೆಚ್ಚುವರಿ ಮೊತ್ತ ಸಂಗ್ರಹವಾಗಿದ್ದು ಶೇ 11.63 ರಷ್ಟು ಹೆಚ್ಚಳವಾಗಿದೆ ಎಂದು ಅವರು ತಿಳಿಸಿದರು.

ಸಾರಿಗೆ ಇಲಾಖೆ ಹಾಗೂ ಸಾರಿಗೆ ನಿಗಮಗಳ ತೆರಿಗೆ ಸಂಗ್ರಹದ ವಾರ್ಷಿಕ ಗುರಿ 7100 ಕೋಟಿ ರೂ. ಗಳಷ್ಟಿದ್ದು ಆಗಸ್ಟ್ 30 ರ ವರೆಗೆ 2750.82 ಕೋಟಿ ರೂ ತೆರಿಗೆ ಸಂಗ್ರಹದ ಗುರಿ ನಿಗದಿಪಡಿಸಲಾಗಿತ್ತು.
ಅದರಲ್ಲಿ 2476 ಕೋಟಿ ರೂ ತೆರಿಗೆ ಸಂಗ್ರವಾಗಿದ್ದು,ತೆರಿಗೆ ಸಂಗ್ರಹ ನಿಗದಿತ ಗುರಿಯ ಶೇ 90 ರಷ್ಟಾಗಿದೆ.ವಾಹನ ಮಾರಾಟ,ಸಾರಿಗೆ ಮತ್ತು ಸಾರಿಗೇತರ ವಾಹನಗಳ ನೋಂದಣಿಯಲ್ಲಿ ಶೇ 10.34 ರಷ್ಟು ಕಡಿಮೆಯಾಗಿದೆ.ಇದರಿಂದಾಗಿ ತೆರಿಗೆ ಸಂಗ್ರಹದಲ್ಲಿ ವ್ಯತ್ಯಯವಾಗಿದೆ.ಅಕ್ಟೋಬರ್ ಬಳಿಕ ಸುಧಾರಣೆಯಾಗುವ ನಿರೀಕ್ಷೆ ಇದೆ ಎಂದು ಮುಖ್ಯಮಂತ್ರಿ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ನೂತನ ಮೋಟಾರು ವಾಹನ ಕಾಯ್ದೆ ದಂಡ ಹೆಚ್ಚಳ ಸಂಬಂಧಿಸಿದಂತೆ ದಂಡದ ಮೊತ್ತವನ್ನು ಇಳಿಸುವ ಬಗ್ಗೆ ಪರಿಶೀಲನೆ ನಡೆಸಲು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಮುಖ್ಯಮಂತ್ರಿ ಅವರು, ಗುಜರಾತ್ ಸರ್ಕಾರ ಹೊರಡಿಸಿರುವ ಆದೇಶವನ್ನು ಪರಿಶೀಲಿಸಿ ಎರಡು ಮೂರು ದಿನಗಳಲ್ಲಿ ಅಗತ್ಯ ಪರಿಷ್ಕರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಅವರು ತಿಳಿಸಿದರು.

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp