ವೈದ್ಯಕೀಯ ಸೇವೆ ನಮ್ಮ ಆಯ್ಕೆ, ರೋಗಿಗಳು ವೈರಸ್'ನಿಂದ ಮುಕ್ತರಾಗುವುದಷ್ಟೇ ಮುಖ್ಯ: ನರ್ಸ್ ವಾರಿಯರ್

ಕೊರೋನಾ ವೈರಸ್ ದೇಶದಲ್ಲಿ ಕಾಲಿಟ್ಟಾಗಿನಿಂದಲೂ ವೈದ್ಯಕೀಯ ಸಿಬ್ಬಂದಿಗಳು ಜೀವಪಣಕ್ಕಿಟ್ಟು ಹಗಲು ರಾತ್ರಿ ಎನ್ನದೇ ಮಹಾಮಾರಿ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ರೋಗಿಗಳಲ್ಲಿರುವ ವೈರಸ್ ತಮ್ಮನ್ನೂ ಬಲಿಪಡೆದುಕೊಳ್ಳಬಹುದು ಎಂಬ ಸತ್ಯ ಗೊತ್ತಿದ್ದರೂ ಸೈನಿಕರಂತೆ ಸುರಕ್ಷಾ ಸಾಧನಗಳನ್ನು ಧರಿಸಿ, ಕಾರ್ಯಪ್ರವೃತ್ತರಾಗಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊರೋನಾ ವೈರಸ್ ದೇಶದಲ್ಲಿ ಕಾಲಿಟ್ಟಾಗಿನಿಂದಲೂ ವೈದ್ಯಕೀಯ ಸಿಬ್ಬಂದಿಗಳು ಜೀವಪಣಕ್ಕಿಟ್ಟು ಹಗಲು ರಾತ್ರಿ ಎನ್ನದೇ ಮಹಾಮಾರಿ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ರೋಗಿಗಳಲ್ಲಿರುವ ವೈರಸ್ ತಮ್ಮನ್ನೂ ಬಲಿಪಡೆದುಕೊಳ್ಳಬಹುದು ಎಂಬ ಸತ್ಯ ಗೊತ್ತಿದ್ದರೂ ಸೈನಿಕರಂತೆ ಸುರಕ್ಷಾ ಸಾಧನಗಳನ್ನು ಧರಿಸಿ, ಕಾರ್ಯಪ್ರವೃತ್ತರಾಗಿದ್ದಾರೆ. 

ರೋಗಿಗಳ ಸೇವೆಯಲ್ಲಿಯೇ ತೃಪ್ತಿ ಕಾಣುತ್ತಿರುವ ಅದೆಷ್ಟೇ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳು ತಮ್ಮ ಕುಟುಂಬ ಸದಸ್ಯರೊಂದಿಗೆ ಅಂತರ ಕಾಯ್ದುಕೊಂಡು ಜೀವನ ಸಾಗಿಸುತ್ತಿದ್ದಾರೆ. 

ಇದೀಗ ರಾಜ್ಯದಲ್ಲಿ ಸೈನಿಕರಂತೆ ದುಡಿಯುತ್ತಿರುವ ವೈದ್ಯಕೀಯ ಸಿಬ್ಬಂದಿಗಳಲ್ಲಿ ಸಾವಿತ್ರಿ ಎಂಬುವವರೂ ಕೂಡ ಒಬ್ಬರಾಗಿದ್ದು, ವೈರಸ್ ಹಬ್ಬುತ್ತಿರುವ ಈ ಸಮಯದಲ್ಲಿ ತಮ್ಮ ಸೇವೆ ಹಾಗೂ ಪರಿಸ್ಥಿತಿಯ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. 

ರೋಗಿಗಳು ಗುಣಮುಖರಾಗಿ ತಮ್ಮ ಕುಟುಂಬ ಸೇರಲಿ ಎಂಬುದನ್ನಷ್ಟೇ ನಾವು ಬಯಸುತ್ತಿದ್ದು, ವೈದ್ಯಕೀಯ ಸೇವೆ ಮಾಡಲು ಕುಟುಂಬ ಸದಸ್ಯರಿಂದಲೇ ದೂರವಿದ್ದೇವೆಂದು ಸಾವಿತ್ರಿಯವರು ಹೇಳಿದ್ದಾರೆ. 

ವೈದ್ಯಕೀಯ ಸೇವೆ ನಮ್ಮ ಆಯ್ಕೆ.... ಇದು ನಮ್ಮ ವೃತ್ತಿಪರತೆ. ನಮ್ಮ ರೋಗಿಗಳಿಗೆ ಚಿಕಿತ್ಸೆ ನೀಡಲು ನಾವು ಇಲ್ಲಿ ಸೇವೆ ಸಲ್ಲಿಸುತ್ತಿದ್ದೇವೆ. ವೈರಸ್ ನಿಂದ ರೋಗಿಗಳು ಗುಣಮುಖರಾಗುವುದಷ್ಟೇ ನಮಗೆ ಮುಖ್ಯ.ಎಂದು ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿರುವ ಸಾವಿತ್ರಿ ಎಸ್.ಕದಮ್ ಅವರು ಹೇಳಿದ್ದಾರೆ. 

ಬೆಳಿಗ್ಗೆ 7 ಗಂಟೆಗೆ ತಿಂಡಿ ತಿಂದು ಆಸ್ಪತ್ರೆಗೆ ಬರುತ್ತೇನೆ. ಪಿಪಿಇ ಸುರಕ್ಷಾ ಕವಚವನ್ನು ನೀಡಲಾಗುತ್ತದೆ. ಪಿಪಿಇ ಧರಿಸಿದ ವೇಳೆ ಉಸಿರಾಡುವುದಕ್ಕೂ ಕಷ್ಟವಾಗುತ್ತದೆ. ಶಿಫ್ಟ್ ಪೂರ್ಣಗೊಳ್ಳುವವರೆಗೂ ಊಟವಿರಲಿ, ನೀರು ಕೂಡ ಕುಡಿಯುವ ಬಗ್ಗೆ ಚಿಂತಿಸಲು ಸಾಧ್ಯವಾಗುವುದಿಲ್ಲ. 3 ಗಂಟೆಗೆ ಶಿಫ್ಟ್ ಪೂರ್ಣಗೊಳ್ಳುತ್ತದೆ. 6ಗಂಟೆಗೂ ಹೆಚ್ಚು ಕಾಲ ನಾವು ಆಹಾರ ಹಾಗೂ ನೀರು ಇಲ್ಲದೆ ಸೇವೆ ಸಲ್ಲಿಸುತ್ತೇವೆ. ಪಿಪಿಇ ಧರಿಸಿದ್ದ ವೇಳೆ ಶೌಚಾಲಯಕ್ಕೆ ಕೂಡ ಹೋಗಲು ಸಾಧ್ಯವಾಗುವುದಿಲ್ಲ. ಇನ್ನು ವೈರಸ್ ಇರುವವರಿಗೆ ಚಿಕಿತ್ಸೆ ನೀಡುತ್ತಿರುವುದರಿಂದ ನಮ್ಮಿಂದ ನಮ್ಮ ಕುಟುಂಬಸ್ಥರಿಗೂ ಸಮಸ್ಯೆಯಾಗದಂತೆ ದೂರ ಇದ್ದೇನೆ. ಕುಟುಂಬವನ್ನು ಹುಟ್ಟೂರು ಧಾರವಾಡಕ್ಕೆ ಕಳುಹಿಸಲಾಗಿದೆ. ಇದೀಗ ನಾನು ಮನೆಯಲ್ಲಿ ಒಬ್ಬಳೇ ಇದ್ದೇನೆ. 

ವೈರಸ್ ವಿರುದ್ಧ ಇದೊಂದು ಯುದ್ಧವಾಗಿದೆ. ಕೊರೋನಾ ವೈರಸ್ ವಿರುದ್ಧ ನಾವು ಹೋರಾಡುತ್ತಿದ್ದೇವೆ. ನರ್ಸ್ ಗಳು ಯೋಧರಂತೆ ಹೋರಾಡುತ್ತಿದ್ದೇವೆ. ಯಾವುದೇ ಪರಿಸ್ಥಿತಿ ಎದುರಾದರೂ ನಾವು ಹಿಂಜರಿಯುವುದಿಲ್ಲ. ನಮ್ಮ ರೋಗಿಗಳನ್ನು ರಕ್ಷಣೆ ಮಾಡುವುದು ನಮಗೆ ಮುಖ್ಯ ಎಂದು ತಿಳಿಸಿದ್ದಾರೆ. 

ಆಸ್ಪತ್ರೆಯಲ್ಲಿ ಒಟ್ಟು 5 ಮಂದಿ ವೈರಸ್ ಪೀಡಿತ ವ್ಯಕ್ತಿಗಳಿದ್ದು, 8 ಮಂದಿ ಕ್ವಾರಂಟೈನ್ ನಲ್ಲಿದ್ದಾರೆ. ಈ ರೋಗಿಗಳ ಜವಾಬ್ದಾರಿ ನರ್ಸ್ ಗಳದ್ದೇ ಆಗಿದೆ. ವಾರ್ಡ್ ನಲ್ಲಿ 5 ಮಂದಿ ನರ್ಸ್ ಗಳಿಗೆ ಜವಾಬ್ದಾರಿ ನೀಡಲಾಗಿದೆ. ಪ್ರತೀಯೊಬ್ಬರೂ ಒಂದೊಂದು ಪಾಳಿಯಂತೆ 3 ಪಾಳಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ನಾನು ಬೆಳಿಗ್ಗೆ 8 ರಿಂದ ಮಧ್ಯಾಹ್ನ 2 ಗಂಟೆವರೆಗೂ ಕಾರ್ಯನಿರ್ವಹಿಸುತ್ತೇನೆ. ಒಮ್ಮೆ ಆಸ್ಪತ್ರೆಗೆ ಬಂದು ಪಿಪಿಇ ಧರಿಸಿದ ಬಳಿಕ ಶಿಫ್ಟ್ ಪೂರ್ಣಗೊಳ್ಳುವವರೆಗೂ ಅದನ್ನು ಬಿಚ್ಚುವಂತಿಲ್ಲ. ಕೆಲಸ ಆರಂಭವಾದ ಬಳಿಕ ಹೊರಗೆ ಕೂಡ ಹೋಗುವಂತಿಲ್ಲ. ಶಿಫ್ಟ್ ಪೂರ್ಣಗೊಳ್ಳುವವರೆಗೂ ನಾವು ವಾರ್ಡ್ ನಲ್ಲಿಯೇ ಇರಬೇಕು. ವಾರ್ಡ್ ಹೊರಗಿರುವ ಜಾಗದಲ್ಲಷ್ಟೇ ಕುಳಿತುಕೊಳ್ಳಬಹುದು. ಅಲ್ಲಿದ್ದುಕೊಂಡೇ ರೋಗಿಗಳನ್ನು ನೋಡಿಕೊಳ್ಳುತ್ತಿರಬೇಕು. ರೋಗಿಗಳನ್ನು ಪರಿಶೀಲಿಸುವ ವೈದ್ಯರು, ಗಂಟೆ ಕಾಲ ಅಲ್ಲಿಯೇ ಇರುತ್ತಾರೆ. ಆದರೆ ನಾವು 6 ಗಂಟೆಗಳ ಕಾಲ ಇರಬೇಕು. 

ನನ್ನಿಂದ ನನ್ನ ಪತಿ ಹಾಗೂ ಮಕ್ಕಳು ಅಪಾಯದಲ್ಲಿರುವಂತಾಗಿದೆ. ಧಾರವಾಡಕ್ಕೆ ಹೋಗಲು ಇಷ್ಟವಿಲ್ಲದಿದ್ದರೂ, ಕಳುಹಿಸಿದ್ದೇನೆ. ಕುಟುಂಬಸ್ಥರಿಲ್ಲದೆ ಇರುವುದು ಅತ್ಯಂತ ಕಠಿಣವಾಗಿದೆ. ಮನೆಗೆ ಬಂದ ಕೂಡಲೇ ಕಾಲ ಕಳೆಯುವುದು ಕೂಡ ಕಷ್ಟಕರವಾಗಿದೆ. ಮನೆಗೆ ಬಂದಾಗ ಯಾರಾದರೂ ಮಾತನಾಡಿಸಬೇಕೆಂದು ಮನಸ್ಸು ಬಯಸ್ಸುತ್ತದೆ. ನನ್ನಂತೆಯೇ ಇತರೆ ನರ್ಸ್ ಗಳೂ ಕೂಡ ಕಠಿಣ ಪರಿಸ್ಥಿತಿ ಎದುರಿಸುತ್ತಿದ್ದಾರೆ. ನಿನ್ನನ್ನು ನೋಡಬೇಕು ಮನೆಗೆ ಬರಲೇ ಎಂದು ನ್ನ ಮೂರು ವರ್ಷ ಮಗು ಕೇಳಿದಾಗ ಕರುಳು ಹಿಂಡುತ್ತದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com