

ಬೆಂಗಳೂರು: ಎಲ್ಲವೂ ಅಂದುಕೊಂಡಂತೆ ಆದರೆ ನಿಮ್ಹಾನ್ಸ್ ನ ಯೋಗ ವೃತ್ತಿಪರರು ವಿಶ್ವಾದ್ಯಂತ ಕೋವಿಡ್-19 ರೋಗಿಗಳಿಗೆ ಆನ್ ಲೈನ್ ಯೋಗ ಥೆರಪಿ ಹೇಳಿಕೊಡಲಿದ್ದಾರೆ. ಪ್ರಸ್ತುತ ನಿಮ್ಹಾನ್ಸ್ ನ ಆಂತರಿಕ ಯೋಗ ಕೇಂದ್ರ ಆನ್ ಲೈನ್ ಯೋಗ ತರಗತಿ ನಡೆಸುವ ಮೂಲಕ ಒತ್ತಡ ನಿರ್ವಹಣೆ ಮಾಡುವುದು ಹೇಗೆ ಎಂದು ಹೇಳಿಕೊಡುತ್ತಾರೆ.
ಕೇಂದ್ರ ಆರೋಗ್ಯ ಸಚಿವಾಲಯ ನಿಮ್ಹಾನ್ಸ್ ಸಹಯೋಗದಲ್ಲಿ ಆನ್ ಲೈನ್ ನೇರ ಯೋಗ ತರಗತಿಗಳನ್ನು ಆರಂಭಿಸಿದ್ದು ಅಗತ್ಯವಿರುವವರು ನೇರವಾಗಿ ವೀಕ್ಷಿಸಿ ಅದರಂತೆ ಆಸಕ್ತರು ಮನೆಯಲ್ಲಿಯೇ ಕುಳಿತುಕೊಂಡು ಯೋಗ ಮಾಡಬಹುದು.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ನಿಮ್ಹಾನ್ಸ್ ನಿರ್ದೇಶಕ ಡಾ ಗಂಗಾಧರ್, ಝೂಮ್ ಆಪ್ ಮೂಲಕ ಕೆಲ ದಿನಗಳ ಹಿಂದೆ ಆನ್ ಲೈನ್ ಯೋಗ ತರಗತಿಗಳನ್ನು ಆರಂಭಿಸಲಾಯಿತು.ಕೇಂದ್ರ ಆರೋಗ್ಯ ಸಚಿವಾಲಯ ವೆಬ್ ಸೈಟ್ ನಲ್ಲಿ ಕೂಡ ರೆಕಾರ್ಡ್ ಮಾಡಿರುವ ವಿಡಿಯೊಗಳನ್ನು ಅಪ್ ಲೋಡ್ ಮಾಡಲಾಗುತ್ತಿದ್ದು ಅಲ್ಲಿ ನಿಮ್ಹಾನ್ಸ್ ನ ಯೋಗ ತಜ್ಞರು ಮಾಡಿದ ಯೋಗಗಳು ಸಿಗುತ್ತವೆ.
ಯೋಗದಲ್ಲಿ ಪಿ ಹೆಚ್ ಡಿ ಮಾಡಿರುವ ನಿಮ್ಹಾನ್ಸ್ ನ ಸಹಾಯಕ ಪ್ರಾಧ್ಯಾಪಕ ಡಾ ಹೇಮಂತ್ ಭಾಗವ್ ಅವರು ಈ ಆನ್ ಲೈನ್ ಯೋಗ ತರಗತಿಯ ಒಬ್ಬ ಶಿಕ್ಷಕರು. ಇದು ಒಂದು ಗಂಟೆಯ ತರಗತಿ. ಸೋಮವಾರದಿಂದ ಶುಕ್ರವಾರದವರೆಗೆ ಇರುತ್ತದೆ. ಬೆಳಗ್ಗೆ 7 ಗಂಟೆಗೆ ಮತ್ತು ಬೆಳಗ್ಗೆ 11 ಗಂಟೆಗೆ ಹೀಗೆ ಎರಡು ಭಾಗಗಳಾಗಿ ತರಗತಿಗಳಿರುತ್ತದೆ. ಮೊದಲ 45 ನಿಮಿಷ ಹೇಳಿಕೊಡುವುದು, ಮಾಡುವುದು ಮತ್ತು ಕೊನೆಯ 15 ನಿಮಿಷ ಸಂವಾದಗಳಿರುತ್ತದೆ. ಒಂದು ಸಲಕ್ಕೆ ಗರಿಷ್ಠ 500 ಮಂದಿ ಲಾಗಿನ್ ಆಗಬಹುದು. ಪ್ರಸ್ತುತ ದೇಶಾದ್ಯಂತ 350 ಮಂದಿ ಇದರ ತರಗತಿ ಪಡೆಯುತ್ತಾರೆ ಎಂದು ಹೇಳಿದರು.
ಆಸಕ್ತಿಯಿರುವವರು www.nimhansyoga.in ಸಂಪರ್ಕಿಸಬಹುದು.
ಬಿಎಂಟಿಸಿಯಿಂದ ಆನ್ ಲೈನ್ ಯೋಗ ತರಗತಿಗಳು: ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲಿಯೇ ಜನರು ಚಟುವಟಿಕೆಗಳಿಂದ ಇರಲು ಬೆಂಗಳೂರು ಸಾರಿಗೆ ನಿಗಮ ತನ್ನ ಸಿಬ್ಬಂದಿಗೆ ಆನ್ ಲೈನ್ ಯೋಗ ತರಗತಿಗಳನ್ನು ಆಯೋಜಿಸಿದೆ. ಇದಕ್ಕಾಗಿ ನಿರಕುಲ ಯೋಗ ಅಕಾಡೆಮಿ ಕೈಜೋಡಿಸಿದೆ.