
ಬೆಂಗಳೂರು: ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ತಡೆದ ಪೊಲೀಸರು ನೀವು ಯಾರು ಎಂದು ಪ್ರಶ್ನೆ ಮೇಲೆ ಪ್ರಶ್ನೆ ಕೇಳಿ ಮುಜುಗರ ಉಂಟು ಮಾಡಿದ ಸನ್ನಿವೇಶ ನಡೆದಿದೆ.
ಲಾಕ್ ಡೌನ್ ಸಮಯದಲ್ಲಿ ಪರಿಸ್ಥಿತಿ ಅರಿಯಲು, ಪಾಸ್‌ಗಳ ದುರುಪಯೋಗ ಪತ್ತೆಹಚ್ಚಲು ಬಸವರಾಜ ಬೊಮ್ಮಾಯಿ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ತರರಾವ್, ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಂಡ ನಗರ ಪ್ರದಕ್ಷಿಣೆ ಹಾಕುತ್ತಿದ್ದರು. ಈ ಸಮಯದಲ್ಲಿ ಕರ್ನಾಟಕ -ತಮಿಳುನಾಡು ಗಡಿ ಭಾಗ ಸೇರುವ ಅತ್ತಿಬೆಲೆ ಚೆಕ್ ಪೋಸ್ಟ್ ಬಳಿ ಬಂದಾಗ ಅಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ ಒಳಬರುವ ಹಾಗೂ ಹೊರ ಹೋಗುವ ವಾಹನಗಳನ್ನು ತಪಾಸಣೆ ಮಾಡುತ್ತಿದ್ದರು.
ಈ ಸಮಯದಲ್ಲಿ ಬಸವರಾಜ ಬೊಮ್ಮಾಯಿ ಅವರನ್ನು ಪೊಲೀಸರು ತಡೆದಿದ್ದಾರೆ. ಆಶ್ಚರ್ಯಕರ ಸಂಗತಿ ಎಂದರೆ, ಪೊಲೀಸರು ತಕ್ಷಣ ಬಂದು ಬಸವರಾಜ ಬೊಮ್ಮಾಯಿ ಅವರನ್ನು ಯಾರು ನೀವು, ಎಲ್ಲಿ ಹೋಗುತ್ತಿದ್ದೀರಿ ಎಂದು ಪ್ರಶ್ನೆ ಮೇಲೆ ಪ್ರಶ್ನೆಗಳನ್ನು ಕೇಳಿದ್ದಾರೆ. ಬೊಮ್ಮಾಯಿ ಅವರು ಒಂದು ಕ್ಷಣ ಗಲಿಬಿಲಿಯಾಗಿದ್ದಾರೆ, ಅರೆ ನಮ್ಮ ಪೊಲೀಸರಿಗೆ ನಾನು ಯಾರು ಎಂಬುದು ತಿಳಿದಿಲ್ಲವೆ ಎಂದುಕೊಂಡು ನೀವು ಯಾರು ಎಂದು ಪ್ರಶ್ನಿಸುವಷ್ಟರಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರರಾವ್, ಸಂದೀಪ್ ಪಾಟೀಲ್ ಗೃಹ ಸಚಿವರ ಸಹಾಯಕ್ಕೆ ಧಾವಿಸಿದ್ದಾರೆ.
ನಂತರ ಪೊಲೀಸರು ಯಾರು ಎಂದು ವಿವರ ಪಡೆದಾಗ ಆ ಪೊಲೀಸರು ತಮಿಳುನಾಡು ಪೊಲೀಸರಾಗಿದ್ದರು. ರಾಜ್ಯಕ್ಕೆ ಸೇರಿದ ಅತ್ತಿಬೆಲೆ ಗಡಿಯ ಒಳಪ್ರವೇಶಿಸಿ ಬ್ಯಾರಿಕೇಡ್ ನಿರ್ಮಿಸಿ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದರು. ಕೂಡಲೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್ಪಿ ರವಿ ಡಿ.ಚನ್ನಣ್ಣನವರ್ ಅವರನ್ನು ಕರೆದ ಗೃಹ ಸಚಿವರು, ಕರ್ನಾಟಕದ ಗಡಿಯೊಳಗೆ ತಮಿಳುನಾಡು ಪೊಲೀಸರು ಹೇಗೆ ಬಂದರು ಎಂಬದರ ಬಗ್ಗೆ ಪ್ರಶ್ನಿಸಿದ್ದಾರೆ. ಕೂಡಲೆ ತಮಿಳುನಾಡು ಪೊಲೀಸರನ್ನು ಹೊರಹಾಕಿ ಕರ್ನಾಟಕ ಪೊಲೀಸ್ ಸಿಬ್ಬಂದಿಯನ್ನು ಅಲ್ಲಿಗೆ ನಿಯೋಜಿಸುವಂತೆ ಸೂಚಿಸಿದ್ದಾರೆ.
ಸಚಿವ ಬೊಮ್ಮಾಯಿ ಅವರು, ತಮಿಳುನಾಡಿನ ಹೊಸೂರು ಜಿಲ್ಲೆ ಡಿವೈಎಸ್ಪಿ ಅವರನ್ನು ಕರೆದು ತಮ್ಮ ಸಿಬ್ಬಂದಿಯನ್ನು ರಾಜ್ಯದ ಗಡಿಯಿಂದ ತೆರವುಗೊಳಿಸಿ ಎಂದು ಸೂಚಿಸಿದರು ಎನ್ನಲಾಗಿದೆ. ಈ ಸಂಬಂಧ ಮಾತನಾಡಿದ ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ.ಚನ್ನಣ್ಣನವರ್ ನಮ್ಮ ಸಿಬ್ಬಂದಿ ಅಲ್ಲಿಯೇ ಇದ್ದರು. ಆದರೆ, ಅಷ್ಟೊಂದು ವಾಹನಗಳ ಓಡಾಟ ಇಲ್ಲದ ಕಾರಣ ತಮಿಳುನಾಡು ಪೊಲೀಸರು ನಮ್ಮ ಗಡಿಭಾಗದಲ್ಲಿ ಬ್ಯಾರಿಕೇಡ್ ನಿರ್ಮಿಸಿದ್ದರು. ಈಗ ಅವುಗಳನ್ನು ತೆರವುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕದ 100 ಮೀಟರ್ ಒಳಗೆ ತಮಿಳುನಾಡು ಪೊಲೀಸರು ಯಾರು ಪ್ರವೇಶಿಸದಂತೆ ಬ್ಯಾರಿಕೇಡ್ ಗಳನ್ನು ಹಾಕಿದ್ದರು. ಅವರ ವ್ಯಾಪ್ತಿ ಕೊನೆಗೊಳ್ಳುವ ರಸ್ತೆಯಲ್ಲಿ ಅವರು ಇದ್ದರು, ಹಾಗಾಗಿ ನಾವು ಅವರನ್ನು ವಾಪಸ್ ತಮಿಳುನಾಡಿನ ವ್ಯಾಪ್ತಿ ಕೊನೆಗೊಳ್ಳುವ ಪ್ರದೇಶಕ್ಕೆ ಬ್ಯಾರಿಕೇಡ್ ಹಾಕಿ ರಸ್ತೆ ಬ್ಲಾಕ್ ಮಾಡುವಂತೆ ಸೂಚಿಸಿದ್ದಾಗಿ ರವಿ ಚೆನ್ನಣ್ಣನವರ್ ತಿಳಿಸಿದ್ದಾರೆ.
Advertisement