ಕೋವಿಡ್-19 ಲಾಕ್ ಡೌನ್ ವಿಸ್ತರಣೆ: ರಾಜ್ಯದ ಜನತೆಗೆ ಸಿಎಂ ಸಂದೇಶ

ಸ್ನೇಹಿತರೇ, ಕೋವಿಡ್-19 ವಿಪತ್ತಿನ ವಿರುದ್ಧ ಹೋರಾಡಲು ನಿಮ್ಮ ತಾಳ್ಮೆ ಹಾಗೂ ಸಹಕಾರ ನಿರ್ಣಾಯಕವಾದದ್ದು, ಒಗ್ಗಟ್ಟಿನ ಪ್ರಯತ್ನದಿಂದ ಈ ಸವಾಲನ್ನು ನಾವು ಜಯಿಸುತ್ತೇವೆ. 
ಸಿ.ಎಂ ಯಡಿಯೂರಪ್ಪ
ಸಿ.ಎಂ ಯಡಿಯೂರಪ್ಪ

ಕೊರೋನಾ ತಡೆಗೆ ಕೈಗೊಂಡ ಕಠಿಣ ಕ್ರಮಗಳ ನಂತರ, ಮೊದಲ ಬಾರಿಗೆ ಮಾ.19 ರಂದು ಚೀನಾದಲ್ಲಿ ವೈರಾಣು ಸೋಂಕಿತ ಹೊಸ ಪ್ರಕರಣ ಪತ್ತೆಯಾಗಲಿಲ್ಲ. ಅದೇ ದಿನದಂದು ಮಾತನಾಡಿದ್ದ ಬೀಜಿಂಗ್ ನ ಸಿಜಿಟಿಎನ್ ಸುದ್ದಿ ನಿರೂಪಕ ಜೌ ಯೂಯಿ ಅವರ ಮಾತುಗಳಲ್ಲಿ ಹೇಳಬೇಕಾದರೆ "ಕೋವಿಡ್-19 ರಾಷ್ಟ್ರೀಯ ಗಡಿ, ಸಾಮಾಜಿಕ ಎಲ್ಲೆ, ರಾಜಕೀಯ ವ್ಯವಸ್ಥೆ, ಸಾಂಸ್ಕೃತಿಕ ಮೌಲ್ಯಗಳನ್ನು ನೋಡುವುದಿಲ್ಲ. ಕಠಿಣವಾದ ಪರಿಣಾಮ ಬೀರಲಿದೆಯಷ್ಟೇ. ಇಡೀ ವಿಶ್ವವನ್ನು ಮಲಗಿಸುತ್ತದೆ. ಈ ಸಾಂಕ್ರಾಮಿಕ ರೋಗವನ್ನು ಎದುರಿಸುವಾಗ ಏನಾಗುತ್ತದೆ ಎಂಬುದು ಮುಖ್ಯವಲ್ಲ, ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದು ಮುಖ್ಯ"

ನನ್ನ ವ್ಯಸ್ತ, ಒತ್ತಡದ ಕಾರ್ಯಕ್ರಮಗಳ ನಡುವೆಯೂ ಈ ಸುದ್ದಿಯ ತುಣುಕನ್ನು ನನ್ನ ಸಹೋದ್ಯೋಗಳು ತೋರಿಸಿದರು. ಹೌದು, ಈ ವಿಪತ್ತನ್ನು ನಾವು ಒಂದು ಕುಟುಂಬವಾಗಿ, ತಂಡವಾಗಿ ಎದುರಿಸಬೇಕಿದೆ. ವೈವಿಧ್ಯಮಯ ರಾಷ್ಟ್ರವನ್ನು ಇಂತಹ ಗಾಢಾಂಧಕಾರ ಸಮಯದಲ್ಲಿ ಮುನ್ನಡೆಸಲು ರಾಜಕೀಯ ಸಮನ್ವಯ, ಸಹಕಾರ ಅತ್ಯಗತ್ಯ. ಜರಿಗಾಗಿ ನಾನು ಸದನದಲ್ಲಿ ಹಾಗೂ ಸಾರ್ವಜನಿಕವಾಗಿ ಪ್ರತಿಭಟನೆ ನಡೆಸಿದ್ದೇನೆ. ಹಿಂದೆಂದೂ ಕಂಡಿಲ್ಲದ ಇಂತಹ ಸಮಯದಲ್ಲಿ, ಸರ್ವಪಕ್ಷ ಸಭೆಯ ಮೂಲಕ ನನ್ನ ಸಹೋದ್ಯೋಗಳು, ಎಲ್ಲಾ ಪಕ್ಷಗಳಲ್ಲಿರುವ ನನ್ನ ಮಿತ್ರರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದೇನೆ.

ನನ್ನ ಸರ್ಕಾರಕ್ಕೆ ಸರ್ವಾನುಮತದ ಬೆಂಬಲ ನೀಡಿರುವ ಪ್ರತಿಪಕ್ಷಗಳ ನಾಯಕರಿಗೆ ಧನ್ಯವಾದ. ಅವರ ಸಲಹೆಗಳನ್ನು ಜಾರಿಗೊಳಿಸುವುದಕ್ಕೆ ಬದ್ಧ. ರಾಜ್ಯದಲ್ಲಿ ಕೊರೋನಾ ವೈರಸ್ ಪ್ರಕರಣಗಳನ್ನು ಪರೀಕ್ಷೆ ಮಾಡುವುದಕ್ಕೆ ಟೆಸ್ಟಿಂಗ್ ಕಿಟ್ ಗಳ ಕೊರತೆಯಾಗಲೀ, ಮಾಸ್ಕ್ ಗಳ ಕೊರತೆಯಾಗಲಿ ಇರಲಿಲ್ಲ, ಅಗತ್ಯವಿದ್ದಲ್ಲಿ ಸರ್ಕಾರ ಅವುಗಳನ್ನು ಆಮದು ಮಾಡಿಕೊಳ್ಳಲಿವೆ. ಔಷಧಿಗಳ ಲಭ್ಯತೆ, ಕ್ಲಿನಿಕ್ ಗಳ ಸಂಖ್ಯೆ, ವೈದ್ಯರಿಗೆ ಪ್ರೊಟೆಕ್ಟಿವ್ ಗೇರ್‌ ವೈದ್ಯರಿಗೆ ನೀಡುವುದು, ರಾಜ್ಯದಲ್ಲಿರುವ ಕ್ವಾರಂಟೈನ್ ರೂಮ್ ಗಳ ಬಗ್ಗೆ ಸಭೆಯಲ್ಲಿ ಪರಿಸ್ಥಿತಿಯನ್ನು ವಿವರಿಸಲಾಗಿದೆ. ಪ್ರತಿಪಕ್ಷಗಳಿಗೆ ನೀಡಿದ್ದ ಭರವಸೆಯಂತೆ 21 ದಿನಗಳ ಲಾಕ್ ಡೌನ್ ಗೆ ಸರ್ಕಾರಿ ಆದೇಶಗಳನ್ನು ಜಾರಿಯ ಮೇಲ್ವಿಚಾರಣೆಗಾಗಿ ಅಧಿಕಾರಿಗಳು ಸಚಿವರನ್ನೊಳಗೊಂಡ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದೆ. ಜಿಲ್ಲಾ ಹಾಗೂ ತಾಲೂಕ್ ಆಸ್ಪತ್ರೆಗಳಿಗೆ ಪರೀಕ್ಷಾ ಕಿಟ್, ಪೊಲೀಸ್ ಹಾಗೂ ಪೌರ ಕಾರ್ಮಿಕರಿಗೆ ಜೀವ ರಕ್ಷಕಗಳನ್ನು ನೀಡುವುದಕ್ಕೂ ನಿರ್ಧರಿಸಲಾಗಿದೆ.

ಲಾಕ್ ಡೌ ನಿಂದ ಉಂಟಾಗಿರುವ ಅನಾನುಕೂಲತೆಗಳ ಬಗ್ಗೆ ರಾಷ್ಟ್ರೀಯ-ಸ್ಥಳೀಯ ಮಾಧ್ಯಮಗಳಲ್ಲಿ ಬಂದ ವರದಿಗಳನ್ನು ಗಮನಿಸುತ್ತಿದ್ದೇನೆ, ವಸ್ತುಸ್ಥಿತಿಯನ್ನು ಸರ್ಕಾರದ ಗಮನಕ್ಕೆ ತರುತ್ತಿರುವ ಮಾಧ್ಯಮಗಳ ಕೆಲಸ ಪ್ರಸಂಸನೀಯ. ಹಲವು ಪತ್ರಕರ್ತರು ಲಾಕ್ ಡೌನ್ ನಡುವೆಯೂ ತಮ್ಮ ಕರ್ತವ್ಯಗಳ ಹೊರತಾಗಿ ಮಾನವೀಯ ಕೆಲಸಗಳನ್ನು ಮಾಡುತ್ತಿದ್ದಾರೆ, ಅವರ ಕಾಳಜಿ ಮೆಚ್ಚುವಂಥದ್ದು.

ಈ ಅಸಾಧಾರಣ ಪರಿಸ್ಥಿತಿಯನ್ನು ಎದುರಿಸುವುದಕ್ಕೆ ಪರಿಣಾಮಕಾರಿ ವ್ಯವಸ್ಥೆ ಇರುವುದರ ಬಗ್ಗೆ ಸಮಾಧಾನವಿದ್ದರೂ ರಾಜ್ಯದಲ್ಲಿ ರೈತರ ಸಂಕಷ್ಟದ ಪರಿಸ್ಥಿತಿಯ ಬಗ್ಗೆ ಪ್ರತ್ಯೇಕ ಸಭೆ ನಡೆಸಿದ್ದೇನೆ. ರೈತರನ್ನು ಆರ್ಥಿಕ ನಷ್ಟದಿಂದ ರಕ್ಷಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ.

ರೈತರು ತಾವು ಬೆಳೆದ-ಟೊಮೆಟೊ, ದ್ರಾಕ್ಷಿ, ಕಲ್ಲಂಗಡಿ, ನಿಂಬೆಹಣ್ಣು, ಹಾಲು-ರೇಷ್ಮೆ ಸೇರಿದಂತೆ ಬೆಳೆಗಳ ಆದಾಯದ ಬಗ್ಗೆ ಆತಂಕಪಡಬೇಕಿಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಸುತ್ತೇನೆ. ನಗರ, ಟೌನ್ ಪ್ರದೇಶಗಳಲ್ಲಿನ ಗ್ರಾಹಕರಿಗೆ ಹಣ್ಣು-ತರಕಾರಿ ಲಭ್ಯತೆ ಇರುವಂತೆ ಕ್ರಮ ಕೈಗೊಳ್ಳಲಾಗಿದೆ. ಕರ್ನಾಟಕದಿಂದ ಬೇರೆಡೆಗೆ ಬೆಳೆಗಳ ಸಾಗಣೆ ಮಾಡುವುದಕ್ಕೂ ಅವಕಾಶ ಲಭಿಸುವಂತೆ ನಿರ್ದೇಶನ ನೀಡಲಾಗಿದೆ. ರೈತರಿಗೆ ಒಳಿತಾಗಲು ಪೊಲೀಸರು ಅಗತ್ಯ ಸರಕುಗಳ ಸಾಗಣೆಗೂ ಅವಕಾಶ ನೀಡಲಿದ್ದಾರೆ. ಪರಿಣಾಮ ಗ್ರಾಹಕರಿಗೆ ಸರಕುಗಳ ಕೊರತೆ ಅಥವಾ ಬೆಲೆ ಏರಿಕೆ ಕಾಡುವುದಿಲ್ಲ. ಅಗತ್ಯ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.

ಲಾಕ್ ಡೌನ್ ಅವಧಿಯಲ್ಲಿ ಜನರು ಎದುರಿಸುತ್ತಿರುವ ಕಷ್ಟಗಳ ಬಗ್ಗೆ ನನ್ನ ಸರ್ಕಾರಕ್ಕೆ ಅರಿವಿದೆ. ಜನರ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ಪ್ರತಿದಿನವೂ ನಾನು ಮತ್ತು ನನ್ನ ಸಹೋದ್ಯೋಗಳು ಕೆಲಸ ಮಾಡುತ್ತಿದ್ದೆವೆ. ವಿಪಕ್ಷಗಳ ನಾಯಕರು, ಮಾಧ್ಯಮ ಸಹೋದರರು ನೀಡುವ ಸಲಹೆಗಳು ನಮ್ಮ ಸರ್ಕಾರ ಕೊರೋನಾ ವಿರುದ್ಧ ಹೋರಾಡಲು ರೂಪಿಸುತ್ತಿರುವ ಬಹು ವಿಧದ ತಂತ್ರದ ಭಾಗವಾಗುವಂತೆ ನೋಡಿಕೊಳ್ಳಲಾಗುತ್ತಿದೆ.

ಏತನ್ಮಧ್ಯೆ, ಕಾರ್ಮಿಕ ಇಲಾಖೆ 10 ಲಕ್ಷ ಕಾರ್ಮಿಕರಿಗೆ ಆಹಾರ ವ್ಯವಸ್ಥೆ ಮಾಡಿದ್ದು, ಈ ಅತ್ಯುತ್ತಮ ಕೆಲಸಕ್ಕಾಗಿ ಸಚಿವ ಶಿವರಾಮ್ ಹೆಬ್ಬಾರ್, ಅವರ ಸಹೋದ್ಯೋಗಿಗಳು, ಕೊರೋನಾ ಸೈನಿಕರು ಕಾರ್ಮಿಕ, ಮಾಹಿತಿ ಸಾರ್ವಜನಿಕ ಸಂಪರ್ಕ ಇಲಾಖೆಯ ಸಿಬ್ಬಂದಿ, ಟ್ರೇಡ್ ಯೂನಿಯನ್ ಗಳ ಸಿಬ್ಬಂದಿಗಳನ್ನು ಅಭಿನಂದಿಸುತ್ತೇನೆ. 

ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದಲ್ಲಿ ಕಾರ್ಮಿಕ ಇಲಾಖೆ ನಡೆಸುತ್ತಿರುವ 24*7 ದಾಸೋಹ ಲೈನ್ ಸಹಾಯವಾಣಿ (155214) ಗೆ ರಾಜ್ಯಾದ್ಯಂತ ಆಹಾರ ಪೂರೈಕೆ ಬೇಡಿಗೆ ಬರುತ್ತಿದ್ದು, ಅವುಗಳನ್ನು ಬಿಬಿಎಂಪಿ ಸೇರಿದಂತೆ ಬೇರೆ ಬೇರೆ ಇಲಾಖೆಗಳಿಗೂ ಕಳಿಸಲಾಗುತ್ತಿದೆ.

ಹಗಲಿರುಳೆನ್ನದೇ ಕರ್ತವ್ಯದ ಕರೆಗೆ ಓಗೊಟ್ಟು ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಸೈನಿಕರ (ಹೆಲ್ತ್ ವಾರಿಯರ್ಸ್) ಸೇವೆಯನ್ನು ಗೌರವಿಸುತ್ತೇನೆ. ಆರೋಗ್ಯ ಸೈನಿಕರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಿರುವ ಸಾಮಾಜಿಕ ಜಾಲತಾಣದ ಸಂದೇಶಗಳನ್ನು ಕಂಡು ಅತ್ಯಂತ ಸಂತಸವಾಗಿದೆ. ಉದಾಹರಣೆಗೆ, ಬೆಳಗಾವಿಯ ಬಿಐಎಂಎಸ್ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ನರ್ಸ್ (ದಾದಿ) ಮಗು ತಾಯಿಯ ಅಪ್ಪುಗೆಗಾಗಿ ಹಾತೊರೆಯುತ್ತಿದ್ದದ್ದು ಕಂಡು ಹೃದಯ ಕದಡಿತ್ತು. ತಕ್ಷಣವೇ ನರ್ಸ್ ಸುನಂದಾ ಅವರೊಂದಿಗೆ ಮಾತನಾಡಿ ಸಂಕಷ್ಟದ ಸ್ಥಿತಿಯಲ್ಲಿ ಅವರ ಪರಿಶ್ರಮ, ತ್ಯಾಗಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ.

ಸಂಕಷ್ಟದಲ್ಲಿರುವವರಿಗೆ ನನ್ನ ಮನೆಯ ಬಾಗಿಲು ಎಂದಿಗೂ ತೆರೆದಿರುತ್ತದೆ. ಕಳೆದ ವಾರ ತುರ್ತು ವೈದ್ಯಕೀಯ ಸೇವೆ ಅಗತ್ಯವಿದ್ದ ಎರಡು ಕುಟುಂಬಗಳಿಗೆ ನೆರವು ಸಿಗುವಂತೆ ನೋಡಿಕೊಳ್ಳಲಾಯಿತು. ಮಾಧ್ಯಮದ ಸ್ನೇಹಿತರು, ರಾಮದುರ್ಗ ತಾಲೂಕಿನ ನರಸಾಪುರದ ಕಿಡ್ನಿ ಕಸಿಗೆ ಒಳಗಾಗಿರುವ ಶೇಖವ್ವ ಅರಭಾವಿಗೆ ಔಷಧಿಗಳ ಅಲಭ್ಯತೆ ಬಗ್ಗೆ ಗಮನ ಸೆಳೆದಿದ್ದರು. ತಕ್ಷಣವೇ ಔಷಧಿಗಳು ಮನೆಗೇ ತಲುಪುವಂತೆ ವ್ಯವಸ್ಥೆ ಮಾಡಲಾಯಿತು. ಮತ್ತೊಂದು ಪ್ರಕರಣದಲ್ಲಿ ಕ್ಯಾನ್ಸರ್ ಎದುರಿಸುತ್ತಿರುವ ಬಾಬು ಸಾಬ್ ಲಕ್ಷ್ಮಣ್ ಕಂಬಲೆ ಎನ್ನುವವರಿಗೆ ಹುಬ್ಬಳ್ಳಿಯ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಯಬೇಕಿದ್ದು, ಲಾಕ್ ಡೌನ್ ನಿಂದ ಮುಂದೂಡಲಾಗಿತ್ತು. ಆದರೆ ತಕ್ಷಣವೇ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಶಸ್ತ್ರಚಿಕಿತ್ಸೆಗೆ ವ್ಯವಸ್ಥೆ ಮಾಡಲು ಸೂಚನೆ ನೀಡಲಾಯಿತು.

ಕಟ್ಟುನಿಟ್ಟಾದ ಲಾಕ್ ಡೌನ್ ಜಾರಿಗೊಳಿಸಲು ನಮ್ಮ ಖಾಕಿ ವಾರಿಯರ್ ಗಳು ಪ್ರತಿಯೊಂದು ಸ್ಥಳದಲ್ಲಿಯೂ ಅವರ ಕರ್ತವ್ಯ ಪಾಲನೆ ಮಾಡುತ್ತಿದ್ದಾರೆ, ನಿಮ್ಮ ಪ್ರದೇಶಗಳಲ್ಲಿ ಪೊಲೀಸ್ ಸಿಬ್ಬಂದಿಗಳೊಂದಿಗೆ ದಯವಿಟ್ಟು ಸಹಕರಿಸಿ.

ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ನಮ್ಮ ಕಾರ್ಯವಿಧಾನ ಸಮರೋಪಾದಿಯಲ್ಲಿದೆ ಎಂಬುದು ನಿಮಗೆ ಮನವರಿಕೆಯಾಗಿದೆ ಎಂದು ನಂಬಿದ್ದೇನೆ. ನಾನು ನನ್ನ ವರ್ಷದ ಪೂರ್ತಿ ವೇತನವನ್ನು ದೇಣಿಗೆ ನೀಡಿಲ್ಲ. ಬದಲಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನನ್ನ ವೇತನ ಕೊಡುಗೆ ಮೂಲಕ ನನ್ನ ಕರ್ತವ್ಯ ನಿರ್ವಹಿಸಿದ್ದೇನೆ. ಪರಿಹಾರ ನಿಧಿಗೆ ದೇಣಿಗೆ ಹರಿದುಬರುತ್ತಿದೆ. ಹವಲಾರು ಜನರು, ಉದ್ಯಮ ಸಂಸ್ಥೆಗಳು, ಎನ್ ಜಿಒ ಗಳು, ಅಗತ್ಯವಿರುವ, ಬಡವರಿಗೆ ಯಥಾಶಕ್ತಿ ಸೇವೆ ನೀಡುತ್ತಿದ್ದಾರೆ. ಅವರ ಔದಾರ್ಯಕ್ಕೆ ಧನ್ಯವಾದ ತಿಳಿಸುತ್ತೇನೆ.

ಕೊರೋನಾ ಸಾಂಕ್ರಾಮಿಕ ರೋಗ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ನನ್ನ ಸರ್ಕಾರ ಏ.30 ವರೆಗೆ ಲಾಕ್ ಡೌನ್ ನ್ನು ವಿಸ್ತರಿಸಿದೆ. ರಾಷ್ಟ್ರೀಯ ಲಾಕ್ ಡೌನ್ ಇಂದಿಗೆ ಕೊನೆಯಾಗಲಿದೆ. ಮುಂದಿನ ಎರಡು ವಾರಗಳಲ್ಲಿ ಹಂತ-ಹಂತವಾಗಿ ನಿರ್ಬಂಧಗಳನ್ನು ಸಡಿಲಗೊಳಿಸಲಾಗುವುದು.

ಕರ್ನಾಟಕದಲ್ಲಿ ಮೊದಲ ಕೊರೋನಾ ವೈರಸ್ ಪತ್ತೆಯಾಗಿದ್ದು ಮಾ.12 ರಂದು. ಗುಣಮುಖರಾಗಿರುವವರು, ಮೃತ್ಪಟ್ಟವರೂ ಸೇರಿ ಈವರೆಗೂ 247 ಪ್ರಕರಣಗಳು ವರದಿಯಾಗಿವೆ. ಸಕಾಲಿಕ ನಿರ್ಧಾರ, ಕಟ್ಟುನಿಟ್ಟಾದ ಕ್ರಮಗಳ ಫಲಿತ ಇಂದು ದೇಶದಲ್ಲಿ 10 ನೇ ಸ್ಥಾನದಲ್ಲಿದ್ದೇವೆ. ಕೊರೋನಾ ತಡೆಗೆ ಕೈಗೊಂಡ ಪರಿಣಾಮಕಾರಿ ಕ್ರಮಗಳು, ಜನತೆಯ ಬೆಂಬಲ, ನಮ್ಮ ಸರ್ಕಾರದ ಬದ್ಧತೆಗೆ ಈ ಫಲಿತಾಂಶ ದೃಢಪಡಿಸುತ್ತದೆ. ಅಂತೆಯೇ ಲಾಕ್ ಡೌನ್ ಹಾಗೂ ಇನ್ನಿತರ ಪರಿಣಾಮದಿಂದಾಗಿ ದೇಶಾದ್ಯಂತ ಕೊರೋನಾ ಸೋಂಕಿತರ ಸಂಖ್ಯೆ ಶೇ.28-14ಕ್ಕೆ ಇಳಿಕೆಯಾಗಿದೆ.

ದೇಶಾದ್ಯಂತ 220 ಪರೀಕ್ಷಾ ಪ್ರಯೋಗಾಲಯಗಳಿರುವಂತೆ ಪ್ರಧಾನಿ ಮೋದಿ ಕ್ರಮ ಕೈಗೊಂಡಿದ್ದಾರೆ. 15000 ಪರೀಕ್ಷೆಗಳನ್ನು ನಡೆಸುತ್ತಿದ್ದೇವೆ. ಏ.30 ರ ವೇಳೆಗೆ ಪ್ರಯೋಗಾಲಯಗಳ ಸಂಖ್ಯೆ 300 ಕ್ಕೆ ಏರಿಕೆಯಾಗಲಿದೆ. ಭಾರತ ಸರ್ಕಾರ ಮೇ.31 ರ ವೇಳೆಗೆ ಕೊರೋನಾ ಪರೀಕ್ಷೆಗಳ ಸಂಖ್ಯೆಯನ್ನು 1 ಲಕ್ಷಕ್ಕೆ ಏರಿಕೆ ಮಾಡುವ ಉದ್ದೇಶ ಹೊಂದಿದೆ. ರಾಷ್ಟ್ರೀಯ ಲಾಕ್ ಡೌನ್ ಇಂದಿಗೆ ಮುಕ್ತಾಯವಾಗಲಿದೆ. ಆದರೆ ಕೊರೋನಾ ಸಾಂಕ್ರಾಮಿಕ ರೋಗ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ನನ್ನ ಸರ್ಕಾರ ಏ.30 ವರೆಗೆ ಲಾಕ್ ಡೌನ್ ನ್ನು ವಿಸ್ತರಿಸಿದೆ. ಮುಂದಿನ ಎರಡು ವಾರಗಳಲ್ಲಿ ಹಂತ ಹಂತವಾಗಿ ನಿರ್ಬಂಧಗಳನ್ನು ಸಡಿಲಗೊಳಿಸಲಾಗುತ್ತದೆ. 

ಸ್ನೇಹಿತರೇ, ಕೋವಿಡ್-19 ವಿಪತ್ತಿನ ವಿರುದ್ಧ ಹೋರಾಡಲು ನಿಮ್ಮ ತಾಳ್ಮೆ ಹಾಗೂ ಸಹಕಾರ ನಿರ್ಣಾಯಕವಾದದ್ದು, ಒಗ್ಗಟ್ಟಿನ ಪ್ರಯತ್ನದಿಂದ ಈ ಸವಾಲನ್ನು ನಾವು ಜಯಿಸುತ್ತೇವೆ. 

-  ಬಿ.ಎಸ್ ಯಡಿಯೂರಪ್ಪ
ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com