ಬಾಗಲಕೋಟೆಯಲ್ಲಿ ಸೋಂಕಿತರ ಸಂಖ್ಯೆ 12ಕ್ಕೆ‌ ಏರಿಕೆ

ಆಲಮಟ್ಟಿ ಜಲಾಶಯ ಹಿನ್ನೀರು ಬಾಧಿತ ಬಾಗಲಕೋಟೆ ಹಳೆ ಪಟ್ಟಣಕ್ಕೆ ಮಹಾಮಾರಿ ಕೊರೋನಾ ಒಕ್ಕರಿಸಿ ಸಂತ್ರಸ್ತರ ಬದುಕಿನೊಂದಿಗೆ ಚೆಲ್ಲಾಟ ಆರಂಭಿಸಿದೆ.
ಬಾಗಲಕೋಟೆ
ಬಾಗಲಕೋಟೆ
Updated on

ಬಾಗಲಕೋಟೆ: ಆಲಮಟ್ಟಿ ಜಲಾಶಯ ಹಿನ್ನೀರು ಬಾಧಿತ ಬಾಗಲಕೋಟೆ ಹಳೆ ಪಟ್ಟಣಕ್ಕೆ ಮಹಾಮಾರಿ ಕೊರೋನಾ ಒಕ್ಕರಿಸಿ ಸಂತ್ರಸ್ತರ ಬದುಕಿನೊಂದಿಗೆ ಚೆಲ್ಲಾಟ ಆರಂಭಿಸಿದೆ.

ಆಲಮಟ್ಟಿ ಜಲಾಶಯ ಹಿನ್ನೀರು ಬಾಧಿತ ಪ್ರದೇಶದಲ್ಲಿನ ಹಳೆ ಬಾಗಲಕೋಟೆಯ ಜನತೆಯ ಬದುಕು ಒಂದು ರೀತಿಯಲ್ಲಿ ಅಸಹನೀಯವಾಗಿದೆ. ಯಾವಾಗ ಮುಳುಗಡೆ ಪ್ರಕ್ರಿಯೆಯಿಂದ ಮುಕ್ತಿ ಸಿಗುತ್ತದೋ, ಯಾವಾಗ ನಾವೆಲ್ಲ ಸ್ಥಳಾಂತರಗೊಳ್ಳುತ್ತೇವೋ ಎನ್ನುವ ಸಂಕಷ್ಟದಲ್ಲೇ ಬದುಕು ಸಾಗಿಸುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿಯೇ ಇಲ್ಲಿಗೂ ವ್ಯಾಪಿಸಿರುವ ಮಹಾಮಾರಿ ಕೊರೋನಾ ಅಟ್ಟಹಾಸದಿಂದ ಜನತೆ ನಲುಗಿ ಹೋಗಿದ್ದಾರೆ.

ಕಲಬುರಗಿಗೆ ಹೋಗಿದ್ದ ವ್ಯಕ್ತಿಯಿಂದ ಬಾಗಲಕೋಟೆಗೆ ಆಮದಾಗಿರುವ ಕೊರೋನಾ ಇಂದು ಹೆಮ್ಮಾರಿಯಾಗಿ ನಿಂತಿದೆ. ಕಲಬುರಗಿಗೆ ಹೋಗಿ ಬಂದಿದ್ದ ವ್ಯಕ್ತಿಗೆ ಅಂಟಿದ್ದ ಸೋಂಕು ಬಳಿಕ ಆತನ ಕುಟುಂಬದ ನಾಲ್ವರಲ್ಲಿ ಕಾಣಿಸಿಕೊಂಡು ಕುಟುಂಬದ 65 ವರ್ಷ ವಯಸ್ಸಿನ ವೃದ್ಧರನ್ನು ಬಲಿ ತೆಗೆದುಕೊಂಡಿದೆ.

ಬಳಿಕ ಪಕ್ಕದ ಮನೆ ಮಹಿಳೆಗೆ ಹರಡಿದ ಸೋಂಕು ಆಕೆಯ ಮಗ, ಮಗಳು ಮತ್ತು ಮೈದುನನ ಮಗನಿಗೆ ಕಾಣಿಸಿಕೊಂಡಿತ್ತು. ಇದೇ ವೇಳೆ ಮುಧೋಳ ನಗರಕ್ಕೆ ಆಗಮಿಸಿದ್ದ ಗುಜರಾತ್ ಮೂಲದ ವ್ಯಕ್ತಿಯಲ್ಲೂ ಸೋಂಕು ಕಾಣಿಸಿಕೊಳ್ಳುವ ಮೂಲಕ ಜಿಲ್ಲೆಯ ಮತ್ತೊಂದು ತಾಲೂಕಿಗೆ ಕೊರೋನಾ ಕಾಲಿಟ್ಟಿತ್ತು. ನಿನ್ನೆ ತಾನೇ ಮುಧೋಳನಲ್ಲಿ ಗುಜರಾತ್ ಮೂಲದ ವ್ಯಕ್ತಿಯ ಸಂಪರ್ಕದ ವ್ಯಕ್ತಿಯಲ್ಲೂ ಸೋಂಕು ದೃಢಪಟ್ಟು ಜಿಲ್ಲೆಯಲ್ಲಿ ಒಟ್ಟು 9 ಜನರಲ್ಲಿ ಸೋಂಕು ದೃಢಪಟ್ಟಿತ್ತು. 

ಇಂದು ಬಾಗಲಕೋಟೆಯಲ್ಲಿನ ಇಬ್ಬರು ಮಹಿಳೆಯರು ಮತ್ತು ಒಬ್ಬರು ಪುರುಷರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಎರಡಂಕಿ ಗಡಿ ದಾಟು 12ಕ್ಕೆ ತಲುಪಿದೆ. ಬಾಗಲಕೋಟೆಯಲ್ಲಿನ ಮೂವರಿಗೆ ಸೋಂಕು ಪಕ್ಕದ ಮನೆಯವರಿಂದಲೇ ವಿಸ್ತರಿಸಿದೆ ಎನ್ನವುದನ್ನು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ. ಒಟ್ಟು ಇದುವರೆಗಿನ 12 ಪ್ರಕರಣಗಳ ಪೈಕಿ ಇಬ್ಬರು ಮುಧೋಳ ನಗರದವರಾಗಿದ್ದು, ಉಳಿದ 10 ಜನ (ಮೂವರು ಮಕ್ಕಳು ಸೇರಿದಂತೆ) ಬಾಗಲಕೋಟೆ ಹಳೆ ಪಟ್ಟಣಕ್ಕೆ ಸೇರಿದವರಾಗಿದ್ದಾರೆ.

ಕಳೆದ ತಿಂಗಳು ಕಲಬುರಗಿಗೆ ಹೋಗಿ ಬಂದವರಲ್ಲಿ ಸೋಂಕು ಪತ್ತೆ ಆಗುತ್ತಿದ್ದಂತೆ ಜಿಲ್ಲಾಡಳಿತ ಆ ಕುಟುಂಬದವರಿದ್ದ ಪ್ರದೇಶವನ್ನೆಲ್ಲ ನಿರ್ಬಂಧಿತ ಪ್ರದೇಶವೆಂದು ಘೋಷಿಸಿ ತೀವ್ರ ನಿಗಾ ವಹಿಸಿತ್ತು. ಅಲ್ಲಿದ್ದವರಾರೂ ಹೊರಗೆ ಬರುವಂತಿಲ್ಲ. ಹೊರಗಿನವರೆಲ್ಲ ನಿರ್ಬಂಧಿತ ಪ್ರದೇಶಕ್ಕೆ ಹೋಗುವಂತಿಲ್ಲ ಎನ್ನುವ ಆದೇಶ ಹೊರಡಿಸಿ, ಇಡೀ ಪ್ರದೇಶವನ್ನು ಸೀಲ್‌ಡೌನ್ ಮಾಡಿದೆ.
ಏತನ್ಮಧ್ಯೆ ೬೫ ವರ್ಷದ ವೃದ್ಧನಲ್ಲಿ ಸೋಂಕು ಪತ್ತೆ ಆದಾಗಿನಿಂದಲೂ ಜಿಲ್ಲಾಡಳಿತ ಪ್ರಥಮ ಹಾಗೂ ದ್ವಿತೀಯ ಸಂಪರ್ಕ ಹೊಂದಿದವರನ್ನು ಪತ್ತೆ ಹಚ್ಚಿ ಕ್ವಾರಂಟೈನ್ ಮಾಡುತ್ತಲೇ ಬಂದಿದೆ. ಆದಾಗ್ಯೂ ಆ ಪ್ರದೇಶದಲ್ಲಿ ಪ್ರಥಮ ಹಾಗೂ ದ್ವಿತೀಯ ಸಂಪರ್ಕ ಹೊಂದಿದವರಲ್ಲಿ ಸೋಂಕು ದೃಢ ಪಡುತ್ತಿರುವುದು ಇಡೀ ಪ್ರದೇಶದಲ್ಲಿನ ಜನತೆ ಬೆಚ್ಚಿ ಬೀಳುವಂತೆ ಮಾಡಿದೆ.
ಇಷ್ಟಾಗಿಯೂ ನಿರ್ಬಂಧಿತ ಪ್ರದೇಶದಲ್ಲಿ ಅನಗತ್ಯ ತಿರುಗಾಟ ಕಡಿಮೆ ಆಗಿರಲಿಲ್ಲ. ಇಂದು ಹೊಸದಾಗಿ ಮತ್ತೆ ಮೂವರು ಪ್ರಕರಣಳು ಪತ್ತೆ ಆಗುತ್ತಿದ್ದಂತೆ ಗಾಬರಿಗೊಂಡಿರುವ ಜನತೆ ಮನೆ ಬಿಟ್ಟು ಹೊರ ಬರಲು ಹಿಂದೇಟು ಹಾಕಲಾರಂಭಿಸಿದ್ದಾರೆ. ನಿನ್ನೆಯವರೆಗೂ ಎಷ್ಟೆ ಹೇಳಿದರೂ ಅನಗತ್ಯವಾಗಿ ಜನತೆ ಹೊರಗೆ ಕಾಣಿಸಿಕೊಳ್ಳುತ್ತಿದ್ದರು. ಇದು ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು.

ಇಂದು ಪ್ರಥಮ ಹಂತದ ಲಾಕ್‌ಡೌನ್ ಮುಕ್ತಾಯಗೊಂಡು ದ್ವಿತೀಯ ಹಂತದ ಲಾಕ್‌ಡೌನ್ ಆರಂಭಗೊಂಡಿದೆ. ಇದು ಮೇ.3ರ ವರೆಗೆ ಇರಲಿದ್ದು, ಒಂದೇ ಪ್ರದೇಶದ 10 ಜನರಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡಿರುವುದರಿಂದ ಈ ಪ್ರದೇಶದಲ್ಲಿ ಬಿಗಿ ಭದ್ರತೆ ಇನ್ನಷ್ಟು ಹೆಚ್ಚಲಿದೆ. ಪೊಲೀಸ್ ಸರ್ಪಗಾವಲಿನ ಜತೆಗೆ ಅರೆಸೇನಾಪಡೆ ಆಗಮಿಸಿದರೂ ಅಚ್ಚರಿ ಪಡಬೇಕಿಲ್ಲ. ಬಾಗಲಕೋಟೆ ಹಳೆ ಪಟ್ಟಣದ ಹತ್ತು ಜನ ಮತ್ತು ಮುಧೋಳ ನಗರದ ಇಬ್ಬರಲ್ಲಿ ಸೋಂಕು ಪತ್ತೆ ಆಗಿದ್ದು, ಇವರುಗಳ ಪ್ರಥಮ ಹಾಗೂ ದ್ವಿತೀಯ ಸಂಪರ್ಕದ ಜನತೆಯನ್ನು ಹುಡುಕುವ ಕೆಲಸ ಇನ್ನಷ್ಟು ಚುರುಕೊಳ್ಳಲಿದೆ. ಜತೆ ಜತೆಗೆ ಜನತೆಯಲ್ಲಿ ಸೋಂಕಿನ ಬಗ್ಗೆ ಆತಂಕ ಹೆಚ್ಚಾಗಲಿದೆ. ಮುಂದಿನ ದಿನಗಳಲ್ಲಿ ಸೋಂಕಿತರ ಸಂಖ್ಯೆ ಎಷ್ಟಾಗಲಿದೆ ಎನ್ನುವುದು ಯಕ್ಷಪ್ರಶ್ನೆಯಂತಾಗಿದೆ.

ಈಗಾಗಲೇ ಮೊದಲ ಹಂತದ ಲಾಕ್‌ಡೌನ್ ಪರಿಣಾಮ ಸಮಾಜದ ಎಲ್ಲ ರಂಗಗಳ ಮೇಲೂ ಪರಿಣಾಮ ಬೀರಿದ್ದು, ಉದ್ಯೋಗಗಳನ್ನೆಲ್ಲ ಬಂದ್ ಮಾಡಿಕೊಂಡು ಮನೆಯಲ್ಲಿಯೇ ಕಾಲ ಕಳೆದಿದ್ದಾರೆ. ಇಂದಿನಿಂದಲಾದರೂ ಸಣ್ಣಪುಟ್ಟ ಉದ್ಯೋಗಗಳು ಆರಂಭಗೊಳ್ಳಬಹುದು ಎನ್ನುವ ಜನತೆಯ ನಿರೀಕ್ಷೆ ಹುಸಿಯಾಗಿದೆ.

ಇದೀಗ ಮೇ.3ರ ವರೆಗೆ 2ನೇ ಹಂತದ ಲಾಕ್‌ಡೌನ್ ಘೋಷಣೆ ಆಗಿದ್ದು, ಅದರ ಜನತೆಗೆ ಜಿಲ್ಲೆಯಲ್ಲಿ ಕೊರೋನಾ ರಣಕೇಕೆ ಕೂಡ ಜೋರಾಗಿದೆ. ಪರಿಣಾಮವಾಗಿ 2ನೇ ಹಂತದ ಲಾಕ್‌ಡೌನ್‌ಗಿಂತ 2ನೇ ಹಂತದ ಲಾಕ್‌ಡೌನ್ ಪರಿಣಾಮ ತೀವ್ರವಾಗಲಿದೆ ಎನ್ನುವ ಅಂದಾಜು ಮೇಲ್ನೋಟಕ್ಕೆ ಕಾಣಿಸತೊಡಗಿದೆ.

ವಿಠ್ಠಲ ಆರ್. ಬಲಕುಂದಿ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com