ಅಕ್ಕಪಕ್ಕದ ಮನೆಗಳಿಗೆ ಹೊಸಬರು ಬಂದರೆ ತಿಳಿಸಿ: ಬೆಂಗಳೂರು ಪೊಲೀಸರ ಮನವಿ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ಪ್ರಕರಣಗಳನ್ನು ತಡೆಗಟ್ಟಲು ಅಕ್ಕಪಕ್ಕದ ಮನೆಗಳಿಗೆ ಯಾರಾದರೂ ಹೊಸಬರು ಬಂದರೆ ತಕ್ಷಣವೇ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ನಗರ ಪೊಲೀಸರು ಮನವಿ ಮಾಡಿದ್ದಾರೆ
ಕೊರೊನಾ ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿರುವ ಕೆಲವು ವ್ಯಕ್ತಿಗಳು ಮನೆ ಖಾಲಿ ಮಾಡಿಕೊಂಡು ಬೇರೆ ವಾರ್ಡ್‍ಗಳಿಗೆ ತೆರಳುತ್ತಿರುವುದು ಕಂಡು ಬಂದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಮಾಹಿತಿ ನೀಡಲು ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದ್ದಾರೆ
ಹೊಸಬರು ಮನೆ ಕೇಳಿಕೊಂಡು ಬಂದರೆ ಬಾಡಿಗೆ ನೀಡಬೇಡಿ. ಒಂದು ವೇಳೆ ನಿಮ್ಮ ಅಕ್ಕಪಕ್ಕದ ಮನೆಗಳಿಗೆ ಯಾರಾದರೂ ಹೊಸಬರು ಬಂದರೆ ಕೂಡಲೇ ಸ್ಥಳೀಯ ಕಾರ್ಪೊರೇಟರ್ ಗಳಿಗೆ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ
ಟಿಪ್ಪುನಗರದಲ್ಲಿ ಕೊರೊನಾ ಸೋಂಕಿಗೆ ಬಲಿಯಾದ ವೃದ್ಧನ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಆತನ ಮಗಳು ಹಾಗೂ ಮೊಮ್ಮಗನಿಗೂ ಕೊರೊನಾ ಸೋಂಕು ತಗುಲಿದ್ದು, ಅವರು ವೈಟ್‍ಫೀಲ್ಡ್‌ನಲ್ಲಿರುವ ತಮ್ಮ ಮನೆಗೆ ಟಿಪ್ಪುನಗರದಿಂದ ಹೋಗಿ ಬರುತ್ತಿದ್ದರು. ಮಗಳ ಜೊತೆ ಅಳಿಯನು ಪ್ರಾಥಮಿಕ ಸಂಪರ್ಕದಲ್ಲಿದ್ದು, ಇಬ್ಬರು ವೈಟ್‍ಫೀಲ್ಡ್‌ನಲ್ಲಿ ನೆಲೆಸಿರುವುದರಿಂದ ಅಲ್ಲೂ ಕೊರೋನಾ ಸೊಂಕು ಹರಡಿರುವ ಸಾಧ್ಯತೆ ಇರುವುದರಿಂದ ಅವರಿಬ್ಬರ ಜೊತೆ ಸಂಪರ್ಕ ಹೊಂದಿದವರ ಪತ್ತೆ ಕಾರ್ಯಕ್ಕೆ ಬಿಬಿಎಂಪಿ ಮುಂದಾಗಿದೆ.
ಟಿಪ್ಪುನಗರದಲ್ಲಿ ಮೃತಪಟ್ಟ ಸೋಂಕಿತ ವೃದ್ದನ ಮನೆ ಸಮೀಪವೇ ಸ್ಥಳೀಯ ಕಾರ್ಪೊರೇಟರ್ ಮನೆಯಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಕಾರ್ಪೊರೇಟರ್ ಹಾಗೂ ಅವರ ಪತಿಯನ್ನು ಹೋಂ ಕ್ವಾರಂಟೈನ್‍ಗೆ ಒಳಪಡಿಸಲಾಗಿತ್ತು. ಇದೀಗ ಅವರನ್ನು ಹೋಟೆಲ್ ಕ್ವಾರಂಟೈನ್‍ಗೆ ಶಿಫ್ಟ್ ಮಾಡಲಾಗಿದೆ
ಟಿಪ್ಪು ನಗರದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದಂತೆ ವೃದ್ಧನ ಜೊತೆ ಸಂಪರ್ಕ ಹೊಂದಿದ್ದೆವು ಎಂಬ ಮಾಹಿತಿ ನೀಡಲು ನಿರಾಕರಿಸುತ್ತಿದ್ದ ಸ್ಥಳೀಯರು, ಇದೀಗ ಖುದ್ದು ಬಿಬಿಎಂಪಿ ಅಧಿಕಾರಿಗಳ ಬಳಿ ಬಂದು ಕೊರೊನಾ ಸೋಂಕು ತಪಾಸಣೆಗೆ ಮುಂದಾಗುತ್ತಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ