ಸಚಿವ ಎಸ್ ಟಿ ಸೋಮಶೇಖರ್
ಸಚಿವ ಎಸ್ ಟಿ ಸೋಮಶೇಖರ್

ಎಪಿಎಂಸಿಯಲ್ಲಿ ಮಾರಾಟಕ್ಕೆ ತೊಂದರೆಯಾಗದಂತೆ ಕ್ರಮ, ಎಂದಿನಂತೆ ಬೆಳೆ ಸಾಲ ವಿತರಣೆ: ಎಸ್.ಟಿ. ಸೋಮಶೇಖರ್

ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಯಾವುದೇ ತೊಂದರೆಯಾಗದಂತೆ ರೈತರು ಬೆಳೆದಂತಹ ಹಣ್ಣು ಮತ್ತು ತರಕಾರಿಯನ್ನು ಮಾರಾಟ ಮಾಡಲು ಎಲ್ಲಾ ರೀತಿಯ ಮೂಲಭೂತ ಸೌಕರ್ಯ ಕಲ್ಪಿಸಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್  ತಿಳಿಸಿದ್ದಾರೆ.

ರಾಮನಗರ: ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಯಾವುದೇ ತೊಂದರೆಯಾಗದಂತೆ ರೈತರು ಬೆಳೆದಂತಹ ಹಣ್ಣು ಮತ್ತು ತರಕಾರಿಯನ್ನು ಮಾರಾಟ ಮಾಡಲು ಎಲ್ಲಾ ರೀತಿಯ ಮೂಲಭೂತ ಸೌಕರ್ಯ ಕಲ್ಪಿಸಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್  ತಿಳಿಸಿದ್ದಾರೆ.

ರಾಮನಗರ ಜಿಲ್ಲೆಯ ಎ.ಪಿ.ಎಂ.ಸಿ ಗೆ ಭಾನುವಾರ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿ ಪರಿಶೀಲನೆ ನಡೆಸಿ ನಂತರ ಮಾತನಾಡಿದ ಅವರು, ರೈತರು ತಾವು ಬೆಳೆದ ತರಕಾರಿ ಹಾಗೂ ಹಣ್ಣುಗಳನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಸಾಗಾಣಿಕೆ ಮಾಡಲು ಚೆಕ್ ಪೋಸ್ಟ್ ಗಳಲ್ಲಿ  ತೊಂದರೆಯ ಬಗ್ಗೆ ಚರ್ಚಿಸಲಾಗಿದೆ. ಜಿಲ್ಲೆಯಲ್ಲಿ ರೈತರಿಗೆ ಸಾಗಾಣಿಕೆಯಲ್ಲಿ ಯಾವುದೇ ರೀತಿಯ ತೊಂದರೆಯಾಗುತ್ತಿಲ್ಲ ಎಂಬುದು ಕಂಡುಬಂದಿದೆ ಎಂದರು.

ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಎ.ಪಿ.ಎಂ.ಸಿ. ಅಧ್ಯಕ್ಷರು ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಿರುತ್ತಾರೆ. ಬೆಳಿಗ್ಗೆ 3 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ರೈತರಿಗೆ ಮಾರಾಟ ಮಾಡಲು ಅವಕಾಶ ಕಲ್ಪಿಸಿರುತ್ತಾರೆ. ಮಾಸ್ಕ್ ಹಾಗೂ ಸ್ಯಾನಿಟೈಸರ್ ವ್ಯವಸ್ಥೆ  ಮಾಡಲಾಗಿದೆ. ಧ್ವನಿವರ್ಧಕದ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಪ್ರಚಾರ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಯೋಜಿತ ರೂಪದಲ್ಲಿ ವಹಿವಾಟು ನಡೆಯುತ್ತಿದೆ ಎಂದರು.

ರೈತರಿಗೆ ಎಂದಿನಂತೆ ಬೆಳೆ ಸಾಲ ವಿತರಣೆ
ಇನ್ನು ಸಹಕಾರ ಬ್ಯಾಂಕ್ ಹಾಗೂ ಸಂಘಗಳ ಮೂಲಕ ಈ ವರ್ಷವೂ ರೈತರಿಗೆ ಎಂದಿನಂತೆ ಬೆಳೆ ಸಾಲ ಸಿಗಲಿದೆ. ಇನ್ನೆರಡು ದಿನದಲ್ಲಿ ಈ ಬಗ್ಗೆ ಮಾಹಿತಿ‌ ನೀಡಲಾಗುವುದು ಎಂದು ಎಸ್.ಟಿ. ಸೋಮಶೇಖರ್ ತಿಳಿಸಿದರು. ಕಳೆದ ವರ್ಷ ರೈತರಿಗೆ 13 ಸಾವಿರ ಕೋಟಿ ಬೆಳೆ ಸಾಲ  ನೀಡಲಾಗಿತ್ತು. ಈ ವರ್ಷವೂ ಅಷ್ಟೇ ಪ್ರಮಾಣದ ಸಾಲ ವಿತರಣೆ ಆಗಲಿದೆ. ಯಾವ ಬೆಳೆಗಳು ಮಾರಾಟವಾಗದೇ ಹೊಲದಲ್ಲೇ ಉಳಿಯುತ್ತದೆಯೋ ಅಂತಹದ್ದಕ್ಕೆ ಮಾತ್ರ ಸರ್ಕಾರ ಬೆಳೆನಷ್ಟ ಪರಿಹಾರ ನೀಡಲಿದೆ. ಬೆಂಗಳೂರಿನ‌ 1400 ಅಪಾರ್ಟ್ ಮೆಂಟ್‌ಗಳಿಗೆ ಈಗಾಗಲೇ ತರಕಾರಿ  ಪೂರೈಕೆ ಮಾಡಲಾಗುತ್ತಿದೆ. ರೈತರು ಎಷ್ಟೇ ಉತ್ಪನ್ನ ತಂದರೂ‌ ಖರೀದಿ ಮಾಡಿ‌ ಮಾರಾಟ ಮಾಡುವಂತೆ ಹಾಪ್‌ಕಾಮ್ಸ್‌ಗಳಿಗೆ ಸೂಚಿಸಲಾಗಿದೆ ಎಂದರು.

ಅಂತೆಯೇ ಲಾಕ್‌ಡೌನ್ ಸಡಿಲಿಕೆ ಸಂಬಂಧ ಸರ್ಕಾರ ಕೆಲವು‌ ನಿರ್ಧಾರಗಳನ್ನು‌ ತೆಗೆದುಕೊಂಡಿದೆ. ಈ ಸಂಬಂಧ ಚರ್ಚೆಗೆ ಸೋಮವಾರ ಮುಖ್ಯಮಂತ್ರಿಗಳು ಸಚಿವ ಸಂಪುಟ ಸಭೆ ಕರೆದಿದ್ದಾರೆ. ರಾಜ್ಯದಲ್ಲಿ ಕೃಷಿ‌ ಉತ್ಪನ್ನಗಳ ಸಾಗಾಟ ಮತ್ತು ಮಾರಾಟಕ್ಕೆ ಯಾವುದೇ ಪಾಸ್ ಬೇಕಿಲ್ಲ.  ರೈತರು ಬೆಂಗಳೂರಿನಲ್ಲಿ ಸಹ ತರಕಾರಿಯನ್ನು ಯಾವುದೇ ಅಡ್ಡಿ ಇಲ್ಲದೇ ಮಾರಬಹುದಾಗಿದೆ. ಕೊರೊನಾ ವಿರುದ್ಧ ಜಾಗೃತಿ ಮೂಡಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಬಮೂಲ್ ಈಗಾಗಲೇ ತಲಾ 3 ಸಾವಿರ ರೂಪಾಯಿ ಪ್ರೋತ್ಸಾಹ ಧನ ಘೋಷಿಸಿದೆ. ಕೆಲವು ಸಂಘಗಳು 5 ಸಾವಿರ  ನೀಡುತ್ತಿವೆ. ರಾಜ್ಯದಲ್ಲಿನ ಇತರ ಹಾಲು ಉತ್ಪಾದಕ ಸಂಘಗಳೂ ಈ ನಡೆ ಅನುಸರಿಸಬೇಕು ಎಂದು ಸಲಹೆ ನೀಡಿದರು.

Related Stories

No stories found.

Advertisement

X
Kannada Prabha
www.kannadaprabha.com