ಕೊರೋನಾ ವೈರಸ್: ಬೆಂಗಳೂರಿನಲ್ಲಿ ಕಂಟೈನ್ ಮೆಂಟ್ ಝೋನ್ ಗಳ ಸಂಖ್ಯೆ 20ಕ್ಕೆ ಇಳಿಕೆ!

ಮಾರಕ ಕೊರೋನಾ ವೈರಸ್ ಸೋಂಕಿತರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ರಾಜಧಾನಿ ಬೆಂಗಳೂರಿನಲ್ಲಿ 20 ಪ್ರದೇಶಗಳನ್ನು ಕಂಟೈನ್ ಮೆಂಟ್ ಝೋನ್ ಎಂದು ಗುರುತಿಸಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮಾರಕ ಕೊರೋನಾ ವೈರಸ್ ಸೋಂಕಿತರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ರಾಜಧಾನಿ ಬೆಂಗಳೂರಿನಲ್ಲಿ 20 ಪ್ರದೇಶಗಳನ್ನು ಕಂಟೈನ್ ಮೆಂಟ್ ಝೋನ್ ಎಂದು ಗುರುತಿಸಲಾಗಿದೆ.

ಹೌದು.. ಈ ಹಿಂದೆ ಬಿಬಿಎಂಪಿ ಘೋಷಣೆ ಮಾಡಿದ್ದ ಕಂಟೈನ್ ಮೆಂಟ್ ಝೋನ್ ಗಳನ್ನು 30ರಿಂದ 20ಕ್ಕೆ ಇಳಿಕೆ ಮಾಡಲಾಗಿದ್ದು, ಪ್ರಸ್ತುತ ಘೋಷಣೆ ಮಾಡಿರುವ ಕಂಟೈನ್ ಮೆಂಟ್ ಝೋನ್ ಗಳಲ್ಲಿ ಲಾಕ್ ಡೌನ್ ನಿಯಮಗಳನ್ನು ಕಠಿಣವಾಗಿ ಜಾರಿ ಮಾಡಲು ಅಧಿಕಾರಿಗಳು  ಮುಂದಾಗಿದ್ದಾರೆ, 

ಕಳೆದ ಶನಿವಾರ ಅಧಿಕಾರಿಗಳು ಬೆಂಗಳೂರಿನ 30 ವಾರ್ಡ್ ಗಳನ್ನು ಕಂಟೈನ್ ಮೆಂಟ್ ಝೋನ್ ಗಳಾಗಿ ಘೋಷಣೆ ಮಾಡಿದ್ದರು. ಬಳಿಕ ಈ ಪೈಕಿ 2 ವಾರ್ಡ್ ಗಳನ್ನು ಕಂಟೈನ್ ಮೆಂಟ್ ಝೋನ್ ಪಟ್ಟಿಯಿಂದ ಕೈ ಬಿಟ್ಟು 28 ವಾರ್ಡ್ ಗಳ ಹೊಸ ಪಟ್ಟಿ ಬಿಡುಗಡೆ ಮಾಡಿದ್ದರು. ಇದೀಗ ಮತ್ತೆ  ಪಟ್ಟಿಯನ್ನು ಅಧಿಕಾರಿಗಳು ಪರಿಷ್ಕರಿಸಿದ್ದು, 8 ವಾರ್ಡ್ ಗಳನ್ನು ಕೈ ಬಿಟ್ಟು 20 ವಾರ್ಡ್ ಗಳ ನೂತನ ಕಂಟೈನ್ ಮೆಂಟ್ ಝೋನ್ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಬೊಮ್ಮನಹಳ್ಳಿ, ಯಲಹಂಕ ಮತ್ತು ರಾಜರಾಜೇಶ್ವರಿ ನಗರಗಳಲ್ಲಿ ತಲಾ ಒಂದೊಂದು ಹಾಟ್ಸ್ ಸ್ಪಾಟ್ ಗಳಿದ್ದರೂ ಈ ಮೂರು  ವಾರ್ಡ್ ಗಳನ್ನು ಕಂಟೈನ್ ಮೆಂಟ್ ಝೋನ್ ಪಟ್ಟಿಯಿಂದ ಕೈ ಬಿಡಲಾಗಿದೆ.

ಉಳಿದಂತೆ ಸಿಂಗಸಂದ್ರ, ಹೂಡಿ, ಹೊರಮಾವು, ವಸಂತನಗರ,ರಾಧಾ ಕೃಷ್ಣ ದೇವಸ್ಥಾನ, ಸಿ.ವಿ.ರಾಮನ್ ನಗರ, ರಾಮಸ್ವಾಮಿ ಪಾಳ್ಯ, ಮಾರುತಿ ಸೇವಾ ನಗರ, ದೊಮ್ಮಲೂರು, ಸುಧಾಮನಗರ, ಗುರಪ್ಪನಪಾಳ್ಯ, ಕರಿಸಂದ್ರ, ಶಾಕಂಬರಿ ನಗರ, ಬಾಪೂಜಿನಗರ, ಹೊಸಹಳ್ಳಿ,  ಶಿವಾಜಿನಗರ, ಕೆ.ಆರ್ ಮಾರುಕಟ್ಟೆ, ಪಾದರಾಯನಪುರ, ಬ್ಯಾಟರಾಯನಪುರ ಮತ್ತು ಆರ್ ಆರ್ ನಗರಗಳು ಕಂಟೈನ್ ಮೆಂಟ್ ಜೋನ್ ಪಟ್ಟಿಯಲ್ಲಿವೆ.

ಕಂಟೈನ್ಮೆಂಟ್ ಏರಿಯಾಗಳಲ್ಲಿ ಏನಿರುತ್ತೆ-ಏನಿರಲ್ಲ..?
-ಅಗತ್ಯ ವಸ್ತುಗಳು ಮನೆ ಬಾಗಿಲಿಗೆ ತಲುಪುತ್ತದೆ
-ಮೆಡಿಕಲ್ ಶಾಪ್, ಆಸ್ಪತ್ರೆ, ತರಕಾರಿ ಮಳಿಗೆಗಳು ಮಾತ್ರ ಓಪನ್
-ಸುಖಾ ಸುಮ್ಮನೆ ಓಡಾಡುವಂತಿಲ್ಲ, ವಾಕಿಂಗ್, ಜಾಗಿಂಗ್ ಕಾರಣ ನೀಡಿ ಹೊರಬರುವಂತಿಲ್ಲ
-ಪೊಲೀಸರ ಸರ್ಪಗಾವಲು ದಾಟುವಂತಿಲ್ಲ 

ಕಂಟೈನ್ಮೆಂಟ್ ನಿಯಮಗಳೇನು?
ಕೊರೊನಾ ರೋಗಿ ವಾಸದ ಮನೆಯ 100 ಮೀಟರ್ ಸುತ್ತಮುತ್ತಲ ಪ್ರದೇಶವನ್ನು ಕಂಟೈನ್ಮೆಂಟ್‍ಝೋನ್ ಎಂದು ಕರೆಯಲಾಗುತ್ತದೆ. ಅಪಾರ್ಟ್‍ಮೆಂಟ್‍ನಲ್ಲಿ ಕೊರೊನಾ ಕೇಸ್ ಪತ್ತೆಯಾದರೆ ಆ ಅಪಾರ್ಟ್‍ಮೆಂಟ್ ಬ್ಲಾಕ್ ಮಾಡಲಾಗುತ್ತದೆ. ಈ ಏರಿಯಾಗಳಿಗೆ ಯಾರೂ ಹೋಗುವಂತಿಲ್ಲ,  ಯಾರೂ ಹೊರ ಬರುವಂತಿಲ್ಲ. ಅಗತ್ಯ ವಸ್ತುಗಳನ್ನು ಮನೆಬಾಗಿಲಿಗೆ ತಲುಪಿಸಲಾಗುತ್ತದೆ, ದಿನಸಿ ಅಂಗಡಿಗಳನ್ನು ತೆರೆಯುವಂತಿಲ್ಲ. ಹೈ ರಿಸ್ಕ್ ರೋಗಿಗಳನ್ನು ಬೇರೆ ಕಡೆಗಳಿಗೆ ಕರೆದೊಯ್ದು ಕ್ವಾರಂಟೈನ್ ಮಾಡಲಾಗುತ್ತದೆ. ಉಳಿದವರಿಗೆ ಹೋಂ ಕ್ವಾರಂಟೈನ್‍ನಲ್ಲಿರುವಂತೆ  ಸೂಚಿಸಲಾಗುತ್ತದೆ. ಕಂಟೈನ್‍ಮೆಂಟ್ ಝೋನ್‍ನಿಂದ 5 ಕಿಲೋ ಮೀಟರ್ ಸುತ್ತಮುತ್ತಲ ಪ್ರದೇಶವನ್ನು ಬಫರ್ ಝೋನ್ ಎಂದು ಕರೆಯಲಾಗುತ್ತಿದ್ದು, 1 ಕಿಲೋ ಮೀಟರ್ ವ್ಯಾಪ್ತಿಯೊಳಗೆ ಮನೆ ಮನೆಗೂ ತೆರಳಿ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com