ಪಾದರಾಯನಪುರ ಆರೋಪಿಗಳು (ಸಂಗ್ರಹ ಚಿತ್ರ)
ಪಾದರಾಯನಪುರ ಆರೋಪಿಗಳು (ಸಂಗ್ರಹ ಚಿತ್ರ)

ಪಾದರಾಯನಪುರ ಆರೋಪಿಗಳು ಹಜ್‌ ಭವನಕ್ಕೆ ಸ್ಥಳಾಂತರ: ಕೊನೆಗೂ ಜನರ ಆಕ್ರೋಶಕ್ಕೆ ಮಣಿದ ಸರ್ಕಾರ

ಕೊರೋನಾ ಹರಡುವ ಆತಂಕದ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲಾ ಕಾರಾಗೃಹ ದಲ್ಲಿರುವ ಪಾದರಾಯನಪುರ ದಾಂಧಲೆ ಪ್ರಕರಣದ ಆರೋಪಿಗಳನ್ನು ಶುಕ್ರವಾರ ನಗರದ ಹಜ್‌ ಭವನಕ್ಕೆ ಸ್ಥಳಾಂತರಿಸಲಾಗಿದೆ.
Published on

ಬೆಂಗಳೂರು: ಕೊರೋನಾ ಹರಡುವ ಆತಂಕದ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲಾ ಕಾರಾಗೃಹ ದಲ್ಲಿರುವ ಪಾದರಾಯನಪುರ ದಾಂಧಲೆ ಪ್ರಕರಣದ ಆರೋಪಿಗಳನ್ನು ಶುಕ್ರವಾರ ನಗರದ ಹಜ್‌ ಭವನಕ್ಕೆ ಸ್ಥಳಾಂತರಿಸಲಾಗಿದೆ.

ಆರೋಪಿಗಳನ್ನು ಸ್ಥಳಾಂತರಿಸಲು ಬೆಳಿಗ್ಗೆ ಮಳೆ ಅಡ್ಡಿಯಾಗಿತ್ತು. ಮಧ್ಯಾಹ್ನದ ವೇಳೆಗೆ ಮಳೆ ನಿಂತಿದ್ದರಿಂದ ಸಾಮಾಜಿಕ ಅಂತರ ಕಾಯ್ದುಕೊಂಡು 14 ಬಸ್ ಗಳಲ್ಲಿ ಅವರನ್ನು ಸ್ಥಳಾಂತರಿಸಲಾಯಿತು.

ರಾಮನಗರ ಡಿಪೋದಿಂದ ಬಂದಿದ್ದ‌ 14 ಬಸ್ ಗಳನ್ನು ಜಿಲ್ಲಾ ಕಾರಾಗೃಹಕ್ಕೆ ಕರೆಸಿಕೊಂಡು, ಅಲ್ಲಿದ್ದ 119 ಆರೋಪಿಗಳನ್ನು ಮತ್ತೆ ಬೆಂಗಳೂರಿಗೆ ಸ್ಥಳಾಂತರ ಮಾಡಲಾಗಿದೆ.

ಬೆಂಗಳೂರಿನ ಪಾದರಾಯನಪುರದಲ್ಲಿ ದಾಂಧಲೆ ನಡೆಸಿದ 121 ಆರೋಪಿಗಳನ್ನು ರಾಮನಗರ ಜೈಲಿಗೆ ಇದೇ 21ರಂದು ಸ್ಥಳಾಂತರ ಮಾಡಲಾಗಿತ್ತು. ಅವರಲ್ಲಿ ಮೂವರಿಗೆ ನಿನ್ನೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಇಂದು ಮತ್ತೆ ಮೂವರಿಗೆ ಸೋಂಕು ಇರುವುದು ಕಂಡುಬಂದಿದೆ.

ಸೋಂಕಿತ ಮೂವರನ್ನು ನಿನ್ನೆ ರಾತ್ರಿಯೇ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿದೆ. ಉಳಿದವರನ್ನೂ ಹಜ್ ಭವನಕ್ಕೆ ಸ್ಥಳಾಂತರ ಮಾಡಿ, ಕ್ವಾರಂಟೈನ್‌ನಲ್ಲಿ ಇಡಲಾಗಿದೆ.

ಸೋಂಕಿತರನ್ನು ಬೆಂಗಳೂರಿನ ಕಾರಾಗೃಹಕ್ಕೆ ಸ್ಥಳಾಂತರಿಸುವ ಬದಲು ರಾಮನಗರ ಕಾರಾಗೃಹಕ್ಕೆ ಸ್ಥಳಾಂತರಿಸಿದ್ದು, ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿತ್ತು. ಸ್ವಕ್ಷೇತ್ರ ರಾಮನಗರಕ್ಕೆ ಸ್ಥಳಾಂತರ ಮಾಡುವುದಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಶಾಸಕಿ ಅನಿತಾ ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ಸೇರಿದಂತೆ ಅನೇಕ ನಾಯಕರು ವಿರೋಧಿಸಿದ್ದರು. ಆದರೆ ಸ್ಥಳಾಂತರದಲ್ಲಿ ಯಾವುದೇ ತಪ್ಪಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಮರ್ಥನೆ ಮಾಡಿಕೊಂಡಿದ್ದರು. 

ಸ್ಥಳಾಂತರದ ಹಿಂದೆ ಎಡಿಜಿಪಿಯೊಬ್ಬರ ಕೈವಾಡವಿದೆ ಎಂದು ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದರು. ಒಟ್ಟಿನಲ್ಲಿ ಸರ್ಕಾರ ಕೊನೆಗೂ ಆರೋಪಿಗಳನ್ನು ಸ್ಥಳಾಂತರ ಮಾಡುವ ಮೂಲಕ ವಿವಾದಕ್ಕೆ ಇತಿಶ್ರೀ ಹಾಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com