
ಕೊಪ್ಪಳ: ಮುಂಬೈ ಮೂಲದ ಯುವತಿ ಭಾಗ್ಯನಗರಕ್ಕೆ ಬಂದ ಪ್ರಕರಣ ದಿನದಿಂದ ದಿನಕ್ಕೆ ತಿರುವು ಪಡೆದುಕೊಳ್ಳುತ್ತಿದೆ. ಬಿಜೆಪಿ ಮುಖಂಡ ಗುರುಬಸವರಾಜ ಹೊಳಗುಂದಿ ವಿರುದ್ಧ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕ್ರಿಮಿನಲ್ ಕೇಸ್ ದಾಖಲಾಗಿದ್ದು, ಹೊಳಗುಂದಿಯನ್ನು 12 ದಿನಗಳ ಕಾಲ ಹೋಂ ಕ್ವಾರೆಂಟೈನ್ ಮಾಡಲಾಗಿದೆ.
ಯುವತಿಯ ಗಂಟಲು ದ್ರವದ ಮಾದರಿಯನ್ನ ಪರೀಕ್ಷೆಗೊಳಪಡಿಸಲಾಗಿದ್ದು ನೆಗೆಟಿವ್ ರಿಸಲ್ಟ್ ಬಂದದ್ದು ಸಮಾಧಾನದ ಸಂಗತಿಯಾದರೂ ಜನರಲ್ಲಿ ಹುಟ್ಟಿಸಿದ್ದ ಆತಂಕ ಮಾತ್ರ ದೊಡ್ಡಮಟ್ಟದ್ದು. ಯುವತಿಯ ಕ್ವಾರಂಟೈನ್ ಅವಧಿ ಮುಗಿದಿದ್ದು ರಿಜಲ್ಟ್ ಸಹ ನೆಗೆಟಿವ್ ಬಂದಿದೆ. ಆ ಕಾರಣಕ್ಕೆ ಯುವತಿಯು ನನ್ನನ್ನು ಮುಂಬೈಗೆ ಕಳಿಸಿಕೊಡುವಂತೆ ಜಿಲ್ಲಾಡಳಿತದ
ಮುಂದೆ ಅಂಗಲಾಚಿದ್ದಾಳೆ. ಜಿಲ್ಲಾಡಳಿತ ತಾತ್ಕಾಲಿಕವಾಗಿ ಯುವತಿಯನ್ನು ಪೊಲೀಸರ ಸುಪರ್ದಿಯಲ್ಲಿಟ್ಟಿದ್ದು, ಯುವತಿಯನ್ನು ಕಳಿಸಿಕೊಡುವ ಕುರಿತು ಜಿಲ್ಲಾಡಳಿತ ಇನ್ನೂ ತೀರ್ಮಾನಿಸಿಲ್ಲ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ವಿಚಾರಣೆ ಆರಂಭವಾಗಿದ್ದು, ಕೋರ್ಟ್ ಕಟಕಟೆಗೆ ಬಂದ ಯುವತಿ ಯಾವುದೇ ಪ್ರಶ್ನೆಗೂ ಉತ್ತರಿಸಲಿಲ್ಲ ಎನ್ನಲಾಗಿದೆ. ಏನೇ ಕೇಳಿದರೂ ತಲೆ ತಗ್ಗಿಸಿಕೊಂಡು ನಿಂತು ತುಟಿ ಬಿಚ್ಚದೇ ಪರೋಕ್ಷವಾಗಿ ತಪ್ಪೊಪ್ಪಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಇನ್ನೂ ಮುಗಿದಿಲ್ಲ.
ಪ್ರಕರಣದ ಪ್ರಮುಖ ಆರೋಪಿ ಗುರುಬಸವರಾಜ ಹೊಳಗುಂದಿ ಕ್ವಾರೆಂಟೈನ್ ಅವಧಿ ಮುಗಿದ ನಂತರ ವಿಚಾರಣೆ ಮುನ್ನಲೆಗೆ ಬರುವ ಸಾಧ್ಯತೆ ಇದೆ.
ಮೌನ ಮುರಿದ ಕೈ ನಾಯಕರು:
ಜಿಲ್ಲೆಯಲ್ಲಿ ಬಿಜೆಪಿ ಪಾರುಪತ್ಯ ಇರೋದ್ರಿಂದ ಕಾಂಗ್ರೆಸ್ ನಾಯಕರು ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ ಎಂಬ ಮಾತು ಸಹಜವಾಗಿತ್ತು. ಪ್ರಕರಣ ಬೆಳಕಿಗೆ ಬಂದು ಇಷ್ಟು ದಿನಗಳಾದರೂ ಕೈ ನಾಯಕರು ತುಟಿ ಬಿಚ್ಚಿರಲಿಲ್ಲ. ಕೊನೆಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ, ಹೊಳಗುಂದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಕಾರಕ್ಕೆ ಪತ್ರ ಬರೆದಿದ್ದು, ಉನ್ನತ ತನಿಖೆಗೆ ಆಗ್ರಹಿಸಿದ್ದಾರೆ.
ಕೊಪ್ಪಳ ಜಿಲ್ಲಾಡಳಿತ ಕೊರೊನಾ ನಿಯಂತ್ರಣದ ನಿಟ್ಟಿನಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಬಿಜೆಪಿಯ ಮುಖಂಡರೊಬ್ಬರು ಕೊರೊನಾ ಭೀತಿ ಸೃಷ್ಟಿಸಿದ್ದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿರುವ ತಂಗಡಗಿ, ಬಿಜೆಪಿಯ ಮುಖಂಡ ಗುರುಬಸವರಾಜ ಹೊಳಗುಂದಿಯವರಿಗೆ ಹುಬ್ಬಳ್ಳಿಯ ಕಮರಿಪೇಟೆಗೂ, ಮುಂಬೈ ಮೂಲದ ಯುವತಿಗೂ ಏನು
ಸಂಬಂಧ? ಎಂದು ಕಿಡಿ ಕಾರಿದ್ದಾರೆ.
ಪೊಲೀಸರ ಮೇಲೆ ಅನುಮಾನ?:
ಗುರುಬಸವರಾಜ ಹೊಳಗುಂದಿ ಬಿಜೆಪಿ ಮುಖಂಡ. ರಾಜಕಾರಣಿಗಳು ಮಾತ್ರವಲ್ಲ, ಬೇರೆ ಬೇರೆ ಜಿಲ್ಲೆಗಳ ಪೊಲೀಸ್ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದು, ಮುಂಬೈ ಮೂಲದ ಯುವತಿಯನ್ನು ಪೊಲೀಸ್ ವಾಹನದ ಮೂಲಕವೇ ಕೊಪ್ಪಳಕ್ಕೆ ತರೆತಂದಿದ್ದಾನೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಎಲ್ಲ ವಿಚಾರಗಳು ಸತ್ಯವೋ? ಸುಳ್ಳೋ? ಎಂಬುದು ಉನ್ನತ ಹಂತದ ತನಿಖೆಯಿಂದ ಮಾತ್ರ ಹೊರಬರಲು ಸಾಧ್ಯ.
ವರದಿ: ಬಸವರಾಜ ಕರುಗಲ್
Advertisement