ಬೆಂಗಳೂರು: ಲಾಕ್ ಡೌನ್ ಎಫೆಕ್ಟ್ ನಿಂದಾಗಿ ಆರ್ಥಿಕ ಅನಿಶ್ಚಿತತೆ ಎದುರಾಗಿ ದೇಶದ ಜನರು ಒತ್ತಡಕ್ಕೊಳಗಾಗಿರುವಂತೆಯೇ ರಾಜ್ಯದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ 1.8 ಲಕ್ಷ ಕೆಲಸಗಾರರಿಗೆ ಉದ್ಯೋಗ ಒದಗಿಸಲಾಗಿದೆ.
ಲಾಕ್ ಡೌನ್ ನಿಂದಾಗಿ ಮಾನವ ದಿನಗಳು ಹಾಗೂ ಕಾರ್ಮಿಕರ ಸಂಖ್ಯೆಯಲ್ಲಿ ಕ್ಷೀಣಿಸಿದ್ದರೂ ಏಪ್ರಿಲ್ ತಿಂಗಳಲ್ಲಿ ಶೇ. 32.1 ರಷ್ಟು ಗುರಿ ಮುಟ್ಟಲಾಗಿದೆ. ಮನ್ರೇಗಾ ಗ್ರಾಮೀಣ ಪ್ರದೇಶದ ಬಡ ಜನರಿಗೆ ಸ್ವಲ್ಪ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ
ಸಾಮಾಜಿಕ ಅಂತರದ ಮುನ್ನೆಚ್ಚರಿಕೆ ಹಾಗೂ ಕನಿಷ್ಠ ಕಾರ್ಮಿಕರ ನಿಯೋಜನೆಯೊಂದಿಗೆ ಏಪ್ರಿಲ್ 29ರವರೆಗೂ ರಾಜ್ಯದಲ್ಲಿ 75.40 ಲಕ್ಷ ಮಾನವ ದಿನಗಳ ಉದ್ದೇಶಿತ ಗುರಿಯಲ್ಲಿ 24.24 ಲಕ್ಷ ಮಾನವ ದಿನಗಳ ಉದ್ಯೋಗ ಸೃಷ್ಟಿಸಲಾಗಿದೆ.
ಮಾನವ ದಿನಗಳ ಸೃಷ್ಟಿಯಲ್ಲಿ ಕ್ಷೀಣಿಸಿದ್ದರೂ ಮನ್ರೇಗಾ ಯೋಜನೆಯಲ್ಲಿ ಉದ್ಯೋಗ ಸೃಷ್ಟಿಸಿದ ಮೂರನೇ ಅತಿ ದೊಡ್ಡ ರಾಜ್ಯ ಕರ್ನಾಟಕವಾಗಿದೆ. ಛತ್ತೀಸ್ ಗಢ ಶೇ. 45.8 ಮತ್ತು ಆಂಧ್ರ ಪ್ರದೇಶ ಶೇ. 32.8 ರಷ್ಟು ಗುರಿಯನ್ನು ಸಾಧಿಸುವ ಮೂಲಕ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿವೆ.
ಏಪ್ರಿಲ್ 15 ರ ಬಳಿಕ ಮನ್ರೇಗಾ ಯೋಜನೆಯಲ್ಲಿ ಕಾಮಗಾರಿಗೆ ಅವಕಾಶ ನೀಡಲಾಗಿದೆ. ಕೋವಿಡ್-19 ಹೆಚ್ಚಿನ ಪ್ರಕರಣಗಳು ವರದಿಯಾಗಿರುವ ಕಲಬುರಗಿಯಂತಹ ಜಿಲ್ಲೆಗಳಲ್ಲಿನ 250 ಜಿಲ್ಲೆಗಳನ್ನು ಹೊರತುಪಡಿಸಿದರೆ ಎಲ್ಲಾ 6 ಸಾವಿರ ಗ್ರಾಮ ಪಂಚಾಯತ್ ಮಟ್ಟದಲ್ಲಿ ಕಾಮಗಾರಿಗಳು ನಡೆಯುತ್ತಿರುವುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಲ್. ಕೆ. ಅತಿಕ್ ತಿಳಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ. ಎಸ್ ಈಶ್ವರಪ್ಪ, ಅತಿಕ್ ಅವರು ಜಿಲ್ಲಾಮಟ್ಟದಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದು, ಉದ್ಯೋಗ ಸೃಷ್ಟಿಸದ ಹಳ್ಳಿಗಳಲ್ಲೂ ಕೆಲಸ ಆರಂಭಿಸುವಂತೆ ಸೂಚನೆ ನೀಡಿದ್ದು, ಸಾಮಾಜಿಕ ಅಂತರ, ಕನಿಷ್ಠ ಕಾರ್ಮಿಕರ ಮೂಲಕ ಕೃಷಿ ಹೊಂಡ, ನೀರಾವರಿ ಕಾಲುವೆಗಳು, ನೀರು ಪುನರ್ ಬಳಕೆ ಘಟಕ ಮತ್ತಿತರ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.
ಪ್ರಸ್ತುತ ದಿನಕ್ಕೆ ಕಾರ್ಮಿಕರೊಬ್ಬರಿಗೆ 275 ರೂ. ನೀಡಲಾಗುತ್ತಿದೆ. 24 ಲಕ್ಷ ಮಾನವ ದಿನಗಳ ಉದ್ಯೋಗ ಸೃಷ್ಟಿಸಲಾಗಿದೆ. ಕಾರ್ಮಿಕರಿಗೆ 66 ಕೋಟಿ ಕೂಲಿ ಸಿಗಲಿದೆ. ಇನ್ನೂ 15 ದಿನಗಳಲ್ಲಿ ನೇರ ನಗದು ವರ್ಗಾವಣೆ ಮೂಲಕ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆಯಾಗಲಿದೆ ಎಂದು ಅತಿಕ್ ತಿಳಿಸಿದ್ದಾರೆ.
Advertisement