ಬೆಂಗಳೂರು ಗಲಭೆ: ಬಿಬಿಎಂಪಿ ಕಾರ್ಪೊರೇಟರ್ ಪತಿ ಸೇರಿ 60 ಮಂದಿ ಬಂಧನ
ಬೆಂಗಳೂರು: ನಗರದ ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಕಾರ್ಪೊರೇಟರ್ ಪತಿ ಸೇರಿದಂತೆ 60 ಮಂದಿಯನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ತಿಳಿದುಬಂದಿದೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ನಗರದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು, ನಾಗವಾರ ವಾರ್ಡ್ ಬಿಬಿಎಂಪಿ ಕಾರ್ಪೊರೇಟರ್ ಇರ್ಶಾದ್ ಬೇಗಂ ಅವರ ಪತಿ ಕಲೀಂ ಪಾಷಾ ಸೇರಿದಂತೆ 60 ಮಂದಿಯನ್ನು ಗುರುವಾರ ಬಂಧನಕ್ಕೊಳಪಡಿಸಲಾಗಿದ್ದು, ಇದರೊಂದಿಗೆ ಪ್ರಕರಣ ಸಂಬಂಧ ಈವರೆಗೂ ಒಟ್ಟಾರೆ 206 ಮಂದಿಯನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ವಶಕ್ಕೆ ಪಡೆದಿರುವ ಪ್ರತೀ ಆರೋಪಿಯನ್ನೂ ಪ್ರತ್ಯೇಕವಾಗಿ ವಿಚಾರಣೆಗೊಳಪಡಿಸಿ, ಗಲಭೆಯಲ್ಲಿ ಪಾತ್ರದ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.
ಇಸ್ಲಾಂ ಧರ್ಮಗುರು ಮಹಮದ್ ಪೈಗಂಬರ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳಕಾರಿ ಪೋಸ್ಟ್ ಮಾಡಲಾಗಿದೆ ಎಂದು ಮಂಗಳವಾರ ರಾತ್ರಿ ವ್ಯಾಪಕ ಹಿಂಸಾಚಾರ ನಡೆದಿತ್ತು. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದರು.
ಪುಲಕೇಶಿ ನಗರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ನಿವಾಸ, ಸುತ್ತಮುತ್ತಲಿನ ಮನೆಗಳು ಹಾಗೂ ಡಿ.ಜೆ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಒಂದು ಕೋಮಿಗೆ ಸೇರಿದ ಉದ್ರಿಕ್ತ ಗುಂಪು ದಾಂಧಲೆ ನಡೆಸಿ, ಸಿಕ್ಕಸಿಕ್ಕ ವಾಹನಗಳು, ಮನೆ-ಮಳಿಗೆಗಳಿಗೆ ಬೆಂಕಿ ಹಚ್ಚಿದ್ದರು. ಶಾಸಕರ ನಿವಾಹ ಹಾಗೂ ಪಕ್ಕದ ಮನೆ ಭಸ್ಮವಾಗಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಈ ವೇಳೆ ಗುಂಡು ಹಾರಿಸಿದ್ದು, ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಘಟನೆ ವೇಳೆ ನೂರಾರು ಸಂಖ್ಯೆಯಲ್ಲಿದ್ದ ಉದ್ರಿಕ್ತರ ಗುಂಪು ಮಾರಾಕಾಸ್ತ್ರಗಳನ್ನು ಹಿಡಿದು ಹಿಂಸಾಚಾರ ನಡೆಸಿದ್ದರು, ಅಲ್ಲದೆ, ಪಟಾಕಿಗಳನ್ನು ಸಿಡಿಸಿ ವಿಕೃತಿ ಮೆರೆದಿದ್ದರು.