ಮ್ಯಾಜಿಸ್ಟ್ರೇಟ್ ತನಿಖೆಯಿಂದ ಸತ್ಯಾಂಶ ಹೊರಬರಲು ಸಾಧ್ಯವಿಲ್ಲ: ಹೆಚ್.ಡಿ.ದೇವೇಗೌಡ

 ಡಿ.ಜೆ.ಹಳ್ಳಿ, ಕೆ.ಜೆ.ಹಳ್ಳಿ ಗಲಭೆಯನ್ನು ಸರ್ಕಾರ ಜಿಲ್ಲಾ ಮ್ಯಾಜಿಸ್ಟ್ರೇಟ್ ತನಿಖೆಗೆ ವಹಿಸಿರುವುದು ಸರಿಯಲ್ಲ. ಮ್ಯಾಜಿಸ್ಟ್ರೇಟ್ ತನಿಖೆಯಿಂದ ಸತ್ಯಾಂಶ ಹೊರಬರಲು ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಿ, ರಾಜ್ಯಸಭಾ ಸದಸ್ಯ ಹೆಚ್.ಡಿ.ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ.
ಹೆಚ್. ಡಿ. ದೇವೇಗೌಡ
ಹೆಚ್. ಡಿ. ದೇವೇಗೌಡ
Updated on

ಬೆಂಗಳೂರು: ಡಿ.ಜೆ.ಹಳ್ಳಿ, ಕೆ.ಜೆ.ಹಳ್ಳಿ ಗಲಭೆಯನ್ನು ಸರ್ಕಾರ ಜಿಲ್ಲಾ ಮ್ಯಾಜಿಸ್ಟ್ರೇಟ್ ತನಿಖೆಗೆ ವಹಿಸಿರುವುದು ಸರಿಯಲ್ಲ. ಮ್ಯಾಜಿಸ್ಟ್ರೇಟ್ ತನಿಖೆಯಿಂದ ಸತ್ಯಾಂಶ ಹೊರಬರಲು ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಿ, ರಾಜ್ಯಸಭಾ ಸದಸ್ಯ ಹೆಚ್.ಡಿ.ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮ್ಯಾಜಿಸ್ಟ್ರೇಟ್ ತನಿಖೆಯಿಂದ ಯಾವುದೇ ಸತ್ಯಾಂಶ ಹೊರಬರುವುದಿಲ್ಲ.ಈ ಹಿಂದೆ ನಡೆದ ಹಲವು ಘಟನೆಗಳ ತನಿಖೆ ಏನಾಗಿದೆ ಎಂಬುದು ತಮಗೆ ಗೊತ್ತಿದೆ ಎಂದರು. 

ಡಿ.ಜೆ ಹಳ್ಳಿ ಮತ್ತು ಕೆ ಜಿ ಹಳ್ಳಿ ಗಲಭೆ ಕುರಿತು ಹಾಲಿ ಹೈ ಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಯಬೇಕು.ಈ ಘಟನೆಗೆ ಕಾರಣ ಏನು, ಕಾಂಗ್ರೆಸ್ ಆಂತರಿಕ ವಿಚಾರದಿಂದ ಘಟನೆ ನಡೆದಿದೆಯಾ ಎಂಬುದು ತಮಗೆ ಗೊತ್ತಿಲ್ಲ. ಆ ಬಗ್ಗೆ ತಾವು ಹೆಚ್ಚಿಗೆ ಮಾತಾಡಲು ಬಯಸುವುದಿಲ್ಲ. ಈ ಪ್ರಕರಣದಲ್ಲಿ 300 ಕ್ಕಿಂತ ಹೆಚ್ಚು ಜನರನ್ನು ಬಂಧಿಸಿದ್ದಾರೆ. ಆದರೆ ಈಗಲೂ ಹೇಳುತ್ತೀನಿ ನಿರಪರಾಧಿಗಳಿಗೆ ತೊಂದರೆ ಆಗಬಾರದು.ಸರ್ಕಾರ ಈ ಬಗ್ಗೆ ಯೋಚನೆ ಮಾಡಿ ಹೆಜ್ಜೆ ಇಡಬೇಕು ಎಂದು ಸಲಹೆ ಮಾಡಿದರು. 

ಇದಕ್ಕೂ ಮುನ್ನ ಪಕ್ಷದ ಪ್ರಧಾನ ಕಚೇರಿ ಜೆಪಿ ಭವನದಲ್ಲಿ ಹೆಚ್.ಡಿ.ದೇವೇಗೌಡರು  ಪಕ್ಷದ ಶಾಸಕರು ಮಾಜಿ ಶಾಸಕರು ಜಿಲ್ಲಾ ಅಧ್ಯಕ್ಷರು ಮತ್ತು ಜಿಲ್ಲಾ ಮುಖಂಡರ ಜೊತೆ ರಾಜ್ಯದಲ್ಲಿ ಹರಡುತ್ತಿರುವ ಕೊರೋನ ಸೋಂಕು ನಿಯಂತ್ರಣ, ರಾಜ್ಯ ಸರ್ಕಾರ ತಂದಿರುವ ಜನ ವಿರೋಧಿ ನೀತಿಗಳ ತಿದ್ದುಪಡಿ ವಿರುದ್ಧ ಜನ ಜಾಗೃತಿ ಮೂಡಿಸುವ ಬಗ್ಗೆ ವಿಡಿಯೋ ಸಂವಾದ ನಡೆಸಿದರು. 

ಭೂ ಸುಧಾರಣಾ ಕಾಯಿದೆ, ಎಪಿಎಂಸಿ ಕಾಯಿದೆ ಮತ್ತು ಕೈಗಾರಿಕಾ ಕಾಯಿದೆಗಳ ಸುಗ್ರೀವಾಜ್ಞೆಗಳು ರಾಜ್ಯದ ಜನತೆಗೆ ಮಾರಕವಾಗಲಿದೆ, ರಾಜ್ಯ ಸರ್ಕಾರದ ಈ ನಡೆಗೆ ನಮ್ಮ ವಿರೋಧವಿದೆ, ಹೋರಾಟದ ರೂಪುರೇಷೆಗಳ ಬಗ್ಗೆ ಗಂಭೀರವಾಗಿ ಚರ್ಚೆ ಮಾಡಿದ ದೇವೇಗೌಡರು, ರಾಜ್ಯ ಸರ್ಕಾರ ಮಾಡಲು ಹೊರಟಿರುವ ಕೆಲವು ಕಾಯ್ದೆಗಳ ತಿದ್ದುಪಡಿ ವಿಚಾರದಲ್ಲಿ ಪಕ್ಷದಿಂದ ನೀಡಿದ ನಿರ್ದೇಶನ ಪ್ರಕಾರ ಎಲ್ಲಾ ಜಿಲ್ಲೆಗಳಲ್ಲಿ ಪ್ರತಿಭಟನೆ ಮಾಡಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಹೋರಾಟ ಮಾಡುತ್ತೇವೆ. ಪ್ರತಿಯೊಂದು ಜಿಲ್ಲೆಗಳಲ್ಲೂ ಪಕ್ಷದ ಮುಖಂಡರ ಜೊತೆ ಕಾರ್ಯಕರ್ತರು ಹಾಗೂ ರೈತರು ಹೋರಾಟದಲ್ಲಿ ಪಾಲ್ಗೊಂಡು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಬೇಕು ಎಂದು ಕರೆ ನೀಡಿದರು.

ಪಕ್ಷದಿಂದ ಮುಖಂಡರು ಅವರವರ ಕ್ಷೇತ್ರದಲ್ಲಿ ಜನರಿಗೆ ಸಾಧ್ಯವಾದಷ್ಟು ಮಾಸ್ಕ್ , ಸ್ಯಾನಿಟೈಸರ್ ಮತ್ತು ವಿಟಮಿನ್ ಮಾತ್ರೆಗಳನ್ನು ಜನತೆಗೆ ತಲುಪಿಸುವಂತೆ ಇದೇ ಸಂದರ್ಭದಲ್ಲಿ ದೇವೇಗೌಡರು ಸೂಚಿಸಿದರು.ವಿಡಿಯೋ ಸಂವಾದದಲ್ಲಿ ಜೆಡಿಎಸ್ ಶಾಸಕಾಂಗ ನಾಯಕ ಹೆಚ್.ಡಿ. ಕುಮಾರಸ್ವಾಮಿ, ಸಂಸದ ಪ್ರಜ್ವಲ್ ರೇವಣ್ಣ  ಜಿಲ್ಲಾ ಮುಖಂಡರು ಪಾಲ್ಗೊಂಡಿದ್ದರು.  

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com