ಟೊಯೋಟಾ ಕಿರ್ಲೋಸ್ಕರ್ ಸಮಸ್ಯೆ ಉಲ್ಬಣ: ಮತ್ತೆ ಬೀಗಮುದ್ರೆ ಘೋಷಿಸಿದ ಆಡಳಿತ ಮಂಡಳಿ

 ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಆಡಳಿತ ವರ್ಗದವರು ಮತ್ತೆ  ಬೀಗ ಮುದ್ರೆ ಘೋಷಿಸಿರುವುದು ಕಾನೂನುಬಾಹಿರ, ತಕ್ಷಣ ಬೀಗ ಮುದ್ರೆ ತೆರವುಗೊಳಿಸಿ ಅಮಾನತುಗೊಳಿಸಿರುವ ಕಾರ್ಮಿಕರನ್ನು ಮತ್ತೆ ಕೆಲಸಕ್ಕೆ ನೇಮಿಸಿಕೊಳ್ಳಬೇಕು ಎಂದು ಟೋಯೋಟಾ ಕಿರ್ಲೋಸ್ಕರ್ ಮೋಟಾರ್ ನೌಕರರ ಒಕ್ಕೂಟ ತಿಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಆಡಳಿತ ವರ್ಗದವರು ಮತ್ತೆ  ಬೀಗ ಮುದ್ರೆ ಘೋಷಿಸಿರುವುದು ಕಾನೂನುಬಾಹಿರ, ತಕ್ಷಣ ಬೀಗ ಮುದ್ರೆ ತೆರವುಗೊಳಿಸಿ ಅಮಾನತುಗೊಳಿಸಿರುವ ಕಾರ್ಮಿಕರನ್ನು ಮತ್ತೆ ಕೆಲಸಕ್ಕೆ ನೇಮಿಸಿಕೊಳ್ಳಬೇಕು ಎಂದು ಟೋಯೋಟಾ ಕಿರ್ಲೋಸ್ಕರ್ ಮೋಟಾರ್ ನೌಕರರ ಒಕ್ಕೂಟ ತಿಳಿಸಿದೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಒಕ್ಕೂಟ, ಬೀಗಮುದ್ರೆಗೆ ನವೆಂಬರ್ 9ರಂದು ಕಾರ್ಮಿಕರು ಕಾರ್ಖಾನೆಯ ಒಳಗೆ ಪ್ರತಿಭಟನೆ ನಡೆಸಿದ್ದಾರೆ ಎಂಬ ಕಾರಣವನ್ನು ಆಡಳಿತ ವರ್ಗ ನೀಡಿದೆ. ಆಡಳಿತ ವರ್ಗ ಮಾನ್ಯತೆ ಪಡೆದ ಸಂಘದ ಜೊತೆ ಯಾವುದೇ ಚರ್ಚೆ ನಡೆಸದೆ, ವೈಜ್ಞಾನಿಕ ಅಧ್ಯಯನ ನಡೆಸದೆ ಉತ್ಪಾದನಾ ಪ್ರಮಾಣವನ್ನು ಏಕಾಏಕಿ ಏಕ ಪಕ್ಷೀಯವಾಗಿ ಹೆಚ್ಚಿಸಿ ಕಾರ್ಮಿಕರ ಕೆಲಸದ ಹೊರೆಯನ್ನು ಹೆಚ್ಚಿಸಿದೆ ಎಂದು ಆರೋಪಿಸಿ ಕಾರ್ಮಿಕರು ಪ್ರತಿಭಟಿಸಿದ್ದಾರೆ. ಇದನ್ನೇ ಮುಂದಿಟ್ಟು ಕಂಪನಿ ಬೀಗಮುದ್ರೆ ಘೋಷಿಸಿದೆ ಎಂದು ಒಕ್ಕೂಟ ಆರೋಪಿಸಿದೆ.

ಕಾರ್ಮಿಕರು ನೀರು ಕುಡಿಯಲು ಹಾಗೂ ಶೌಚಾಲಯಕ್ಕೆ ಹೋಗದಂತೆ ಆಡಳಿತ ವರ್ಗದವರು ನಿರ್ಬಂಧಿಸಿದ್ದಾರೆ. ಈ ನಿರ್ಬಂಧ ಯಾವ ಮಟ್ಟಕ್ಕೆ ಮುಟ್ಟಿದೆ ಎಂದರೆ ಕಾರ್ಮಿಕರು ಶೌಚಾಲಯಕ್ಕೆ ಹೋದರೆ ನೀರು ಕುಡಿಯಲು ಹೋದರೆ ಕೆಲಸದ ಸ್ಥಳದಿಂದ ಗೈರುಹಾಜರಾಗಿದ್ದಾರೆ ಎಂದು ಸಂಬಳ ಕಡಿತ, ಶಿಸ್ತು ಕ್ರಮ ಮುಂತಾದ ಕಾರ್ಮಿಕ ವಿರೋಧಿ ಮನುಷ್ಯ ವಿರೋಧಿ ಕ್ರಮಗಳನ್ನು ಅನುಸರಿಸುತ್ತಿದ್ದಾರೆ. ಕಾರ್ಮಿಕರ ಸಂಘವು ಬಿಡದಿ ಘಟಕದ ಇಡೀ 3500 ಕೆಲಸಗಾರರನ್ನು ಪ್ರತಿನಿಧಿಸುತ್ತಿದ್ದು, ಅವೈಜ್ಞಾನಿಕ ಕೆಲಸದ ಹೊರೆ ಹೆಚ್ಚಳ, ಕಾರ್ಮಿಕರ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮವನ್ನು ಆಡಳಿತ ವರ್ಗಕ್ಕೆ ಮನವರಿಕೆ ಮಾಡಿಕೊಳ್ಳಲು ಜುಲೈ 2019ರಿಂದಲೂ ಹಲವಾರು ಪತ್ರಗಳನ್ನು ಬರೆದಿದೆ. ಈ ಪತ್ರಗಳಿಗೆ ಆಗಸ್ಟ್ 2019ರಲ್ಲಿ ಉತ್ತರ ಬರೆದ ಆಡಳಿತ ವರ್ಗ ಸಂಘವು ಎತ್ತದ್ದ ಪ್ರಶ್ನೆಗಳಿಗೆ ಪರಿಹಾರ ಒದಗಿಸದೆ ಉಡಾಫೆ ಧೋರಣೆಯಿಂದ ತಿರಸ್ಕರಿಸಿದೆ ಎಂದು ನೌಕರರ ಸಂಘ ಆರೋಪಿಸಿದೆ.

ಆಡಳಿತ ವರ್ಗ ಕಾರ್ಮಿಕರ ಯಾವುದೇ ಸಮಸ್ಯೆಗಳನ್ನು ಬಗೆಹರಿಸಲು ಅಥವಾ ಕೆಲಸದ ಹೊರೆ ತೀರ್ಮಾನಿಸಲು ವೈಜ್ಞಾನಿಕ ವಿಧಾನಗಳನ್ನು ಸ್ಥಾಪಿಸಲು ಸಂಘದ ಜೊತೆ ಚರ್ಚಿಸಲು ತಯಾರಿಲ್ಲ. 2016, ಡಿಸೆಂಬರ್ 9ರಂದು ಕಾರ್ಮಿಕರ ಸಂಘ ಹಾಗೂ ಆಡಳಿತ ವರ್ಗ 2017, 2018, 2019ರ ಸಾಲಿಗೆ ಕೆಲಸದ ಅವಧಿ ಹಾಗೂ ಕೆಲಸದ ದಿನಗಳ ಬಗ್ಗೆ ದೀರ್ಘಾವಧಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಆದರೆ ಈ ಒಪ್ಪಂದದಲ್ಲಿ ಕೆಲಸದ ಹೊರೆ ಬಗ್ಗೆ ಯಾವುದೇ ಷರತ್ತುಗಳಿಲ್ಲ. ಕೆಲಸದ ಹೊರೆಯನ್ನು ಏಕಪಕ್ಷೀಯವಾಗಿ ಆಡಳಿತ ವರ್ಗ ಹೆಚ್ಚಿಸುತ್ತಿದೆ. ಆದರೆ ಈ ರೀತಿ ಹೆಚ್ಚಳಕ್ಕೆ ಯಾವುದೇ ವೈಜ್ಞಾನಿಕ ಅಧ್ಯಯನವಾಗಲಿ ಚರ್ಚೆಯಾಗಲಿ ಇಲ್ಲ. ಇದು ಕಾರ್ಮಿಕರ ಜೀವನ ಹಾಗೂ ಬದುಕಿನ ಸಮತೋಲನದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಎಂದು ಕಾರ್ಮಿಕರು ದೂರಿದ್ದಾರೆ.

ಸಂಘವು ಈ ಬಗ್ಗೆ ಹಲವು ಪತ್ರಗಳನ್ನು ಬರೆದು ಮನವಿ ಮಾಡಿದೆ. ಸಂಘವು ಫ್ಯಾಕ್ಟರಿ ಇಲಾಖೆ, ಕಾರ್ಮಿಕ ಇಲಾಖೆಯ ಗಮನಕ್ಕೆ ತಂದಿದೆ. ಆಡಳಿತ ವರ್ಗ ಸಮಸ್ಯೆಗಳನ್ನು ಬಗೆಹರಿಸಲು ಯಾವುದೇ ಮುತುವರ್ಜಿ ತೋರಿಸುತ್ತಿಲ್ಲ. ನಂತರ ಕಾರ್ಮಿಕ ಮಂತ್ರಿಗಳನ್ನು ಭೇಟಿ ಮಾಡಿ ಮಧ್ಯಪ್ರವೇಶಿಸುವಂತೆ ಮನವಿ ಸಲ್ಲಿಸಿದೆವು. 2019ರ ಜುಲೈ ನಿಂದ ಸಂಧಾನ ಮಾತುಕತೆ ಮೂಲಕ ಕೆಲಸದ ಹೊರೆ ಸಮಸ್ಯೆ ಬಗೆಹರಿಸುವ ನಮ್ಮ ಪ್ರಯತ್ನ ಫಲನೀಡಲಿಲ್ಲ. ಕೆಲಸದ ಸ್ಥಳದಲ್ಲಿ ಭರಿಸಲಾಗದ ಹೊರೆ ಸಹಿಸಲಾಗದ ಕಿರುಕುಳಗಳ ಮಿತಿ ಮೀರಿದಾಗ ನವೆಂಬರ್ 9,2020ರಂದು ಊಟದ ವಿರಾಮದಲ್ಲಿ ಕೆಲಸಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆ ಉಂಟು ಮಾಡದೇ ಪ್ರತಿಭಟಿಸಿದರು. ಆಡಳಿತ ವರ್ಗ ಇದನ್ನೇ ನೆಪ ಮಾಡಿಕೊಂಡು ಯಾವುದೇ ಹಿಂಸೆ, ಆಸ್ತಿಪಾಸ್ತಿ ನಷ್ಟ ಇಲ್ಲದಿದ್ದರೂ ಕಾನೂನುಬಾಹಿರ ಬೀಗಮುದ್ರೆ ಘೋಷಿಸಿದೆ. ಇದರ ಜತೆ ಗಾಯಕ್ಕೆ ಉಪ್ಪು ಸವರಿದಂತೆ ಸಂಘದ ಪದಾಧಿಕಾರಿಗಳು ಸೇರಿದಂತೆ 40 ಮಂದಿ ಕಾರ್ಮಿಕರನ್ನು ಅಮಾನತು ಮಾಡಿದೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ.

ಆಡಳಿತ ವರ್ಗ ಆರೋಪಿಸಿದಂತೆ ಕಾರ್ಮಿಕರು ಯಾವುದೇ ಮುಷ್ಕರ ಮಾಡಿಲ್ಲ.  ಆಡಳಿತ ವರ್ಗ ನವೆಂಬರ್ 9ರಂದು ಲಾಕ್ ಔಟ್ ಘೋಷಿಸಿದೆ. ನಂತರ ಸರ್ಕಾರ ನವೆಂಬರ್ 18ರಿಂದ ಬೀಗಮುದ್ರೆಯನ್ನು ನಿಷೇಧಿಸಿದ್ದರೂ ಆಡಳಿತ ವರ್ಗ ಕಾನೂನು ಬಾಹಿರವಾಗಿ  ಅದನ್ನು ಮುಂದುವರಿಸಿ ಕಾರ್ಖಾನೆ ಪ್ರವೇಶಿಸಲಿಚ್ಛಿಸಿದ ಕೆಲಸಗಾರರಿಗೆ ತಡವಾಗಿ ಬಂದರೆಂದು ಕುಂಟುನೆಪವೊಡ್ಡಿ ಪ್ರವೇಶ ನಿರಾಕರಿಸಿದ್ದಾರೆ. ಅದಲ್ಲದೆ ಈಗ ಕಾನೂನುಬಾಹಿರವಾಗಿ ಮುಚ್ಚಳಿಕೆ ಸಹಿ ಮಾಡಿ ಕೊಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಸರ್ಕಾರ ಬೀಗ ಮುದ್ರೆ ನಿಷೇಧಿಸಿದ ನಂತರವೂ ಈ ರೀತಿ ವರ್ತಿಸಿ ಬೀಗ ಮುದ್ರೆ ಮುಂದುವರಿಸಿರುವುದು ಕಾನೂನು ಬಾಹಿರವಾಗಿದೆ.

ಪದಾಧಿಕಾರಿಗಳು ಮತ್ತು ಕಾರ್ಮಿಕರ ಅಮಾನತು ರದ್ದತಿ ಹಾಗೂ ಸಂಘದೊಂದಿಗೆ ಚರ್ಚೆಯ ಮೂಲಕ ಕೆಲಸದ ಹೊರೆ ಇತ್ಯರ್ಥ ಮುಂತಾದವು  ಕಾರ್ಮಿಕರ ಬೇಡಿಕೆಗಳಾಗಿವೆ.ಇವುಗಳನ್ನು ಚರ್ಚಿಸಲು ಸಂಘವು ಸದಾ ಸಿದ್ಧವಾಗಿದೆ. ಇಲ್ಲವೆಂದರೆ ದೀರ್ಘಕಾಲದ ಹೋರಾಟಕ್ಕೆ ಕಾರ್ಮಿಕರು ಸಿದ್ಧರಾಗುವುದು ಅನಿವಾರ್ಯ ಎಂದು ಟೋಯೋಟಾ ಕಿರ್ಲೋಸ್ಕರ್ ಮೋಟಾರ್ ನೌಕರರ ಒಕ್ಕೂಟ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com