ಮಂಗಳವಾರ ಮತ್ತೊಮ್ಮೆ ಅಧಿವೇಶನ: ಮುಖ್ಯಮಂತ್ರಿ ಯಡಿಯೂರಪ್ಪ

ಮಂಗಳವಾರ ಮತ್ತೊಮ್ಮೆ ಅಧಿವೇಶನ ಕರೆಯಲು ನಿರ್ಧರಿಸಲಾಗಿದ್ದು, ರಾಜ್ಯಪಾಲರಿಗೆ ಈ ಸಂಬಂಧ ಪತ್ರ ಬರೆಯಲಾಗಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ
Updated on

ಬೆಂಗಳೂರು: ಮಂಗಳವಾರ ಮತ್ತೊಮ್ಮೆ ಅಧಿವೇಶನ ಕರೆಯಲು ನಿರ್ಧರಿಸಲಾಗಿದ್ದು, ರಾಜ್ಯಪಾಲರಿಗೆ ಈ ಸಂಬಂಧ ಪತ್ರ ಬರೆಯಲಾಗಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಅಂಗೀಕಾರವಾದ ಹಿನ್ನೆಲೆಯಲ್ಲಿ ತಮ್ಮ ನಿವಾಸದಲ್ಲಿ ಇಂದು ಗೋ ಪೂಜೆ ನೆರವೇರಿಸಿ ಮಾತನಾಡಿದ ಮುಖ್ಯಮಂತ್ರಿ, ಯಾವುದೇ ಕಾರಣಕ್ಕೂ ಅಧಿವೇಶನ ಮುಂದೂಡುವ ಅಧಿಕಾರ ಸಭಾಪತಿಗಿಲ್ಲ. ಈ ಹಿಂದೆ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಮಂಗಳವಾರದವರೆಗೂ ಸದನ ನಡೆಸಬೇಕು ಎಂದು ತೀರ್ಮಾನ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಸಭಾಪತಿಗಳೇ ಇದ್ದರು. ಆದರೂ ಕೂಡಾ ದಿಢೀರನೆ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ್ದಾರೆ ಎಂದರು.

ಮಂಗಳವಾರ ಅಧಿವೇಶನ ನಡೆಸಲು ನಿರ್ಧಾರ ಮಾಡಿದ್ದೇವೆ. ರಾಜ್ಯಪಾಲರಿಗೂ ಈ ಬಗ್ಗೆ ಪತ್ರ ಕಳುಹಿಸಿದ್ದೇವೆ. ಒಂದು ವೇಳೆ ವಿಧಾನ ಪರಿಷತ್ ನಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಅಂಗೀಕಾರಗೊಳ್ಳದಿದ್ದರೆ ಸುಗ್ರೀವಾಜ್ಞೆಯನ್ನು ಹೊರಡಿಸುವುದಾಗಿ ಯಡಿಯೂರಪ್ಪ ತಿಳಿಸಿದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ಗೋಹತ್ಯೆ ನಿಷೇಧ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರವಾಗಿರುವುದು ನಿಜಕ್ಕೂ ನಮಗೆಲ್ಲಾ ಹೆಮ್ಮೆ, ಸಂತೋಷ ತಂದಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಪಕ್ಷ ದಿಟ್ಟ ನಿರ್ಧಾರ ತೆಗೆದು ಕೊಂಡಿದೆ ಎಂದು ವಿಧಾನಸಭೆಯಲ್ಲಿ ವಿಧೇಯಕ ಅಂಗೀಕಾರ ಆಗಿರುವುದು ನಮಗೆಲ್ಲಾ ಸಂತೋಷ ತಂದಿದೆ. ಗೋವನ್ನು ಪೂಜ್ಯ ಮಾತೆಯ ರೀತಿಯ ನೋಡುವ ಲಕ್ಷಾಂತರ ಜನರ ಆಸೆ ಕೂಡ ಇದೇ ಆಗಿದೆ. ಇದೀಗ ಆ ಆಸೆ ನಮ್ಮ ಸರ್ಕಾರದಲ್ಲಿ ನನಸಾಗಿದೆ ಎಂಬ ಸಂತೋಷ ನಮಗಿದೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ವಿಧಾನ ಪರಿಷತ್ ನಲ್ಲೂ ಈ ಮಸೂದೆ ಪಾಸ್ ಆಗುತ್ತದೆ ಎಂಬ ವಿಶ್ವಾಸ ನಮಗಿದೆ. ಚುನಾವಣೆ ದೃಷ್ಟಿಯಿಂದ ಇದನ್ನು ಮಾಡುವ ಅವಶ್ಯಕತೆ ಬಿಜೆಪಿಗಿಲ್ಲ. ಪ್ರಣಾಳಿಕೆಯಲ್ಲಿ ಹೇಳಿದಂತೆ ನಾವು ನಡೆದುಕೊಂಡಿದ್ದೇವೆ. ದೇಶದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕೊಟ್ಟಿರುವುದು ಬಿಜೆಪಿಯ ಹೆಗ್ಗಳಿಕೆ. ಕಾಂಗ್ರೆಸ್ ಗೆ ಮಾಡಲು ಈಗ ಯಾವುದೇ ಕೆಲಸವಿಲ್ಲ. ಅದಕ್ಕಾಗಿ ಅನವಶ್ಯಕವಾಗಿ ಆರೋಪ ಮಾಡುತ್ತಿದೆ. ಗೋಹತ್ಯೆ ನಿಷೇಧ ಕಾಯಿದೆ ಇದು ಇವತ್ತಿನದ್ದಲ್ಲ, ಹಲವು ವರ್ಷಗಳಿಂದ ಇರುವ ಕೂಗಾಗಿದೆ. ಇದೀಗ ಈ ಕೂಗಿಗೆ ಯಡಿಯೂರಪ್ಪ ನೇತೃತ್ವದ ಸರ್ಕಾರ ಸ್ಪಂದನೆ ನೀಡಿದೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com