ಅಮೂಲ್ಯ ಮಾತ್ರವಲ್ಲ, ವೇದಿಕೆಯಲ್ಲಿದ್ದ ಎಲ್ಲರ ಮೇಲೂ ದೇಶದ್ರೋಹ ಕೇಸ್ ಹಾಕಿ: ಅನಂತ್ ಕುಮಾರ್ ಹೆಗ್ಡೆ
ಕಾರವಾರ: ಸಿಎಎ ವಿರೋಧಿ ಕಾರ್ಯಕ್ರಮದಲ್ಲಿ ಪಾಕ್ ಪರ ಘೋಷಣೆ ಕೂಗಿದ ಯುವತಿ ಅಮೂಲ್ಯ ಮಾತ್ರವಲ್ಲದೇ ವೇದಿಕೆ ಮೇಲಿದ್ದ ಎಲ್ಲರ ಮೇಲೂ ದೇಶದ್ರೋಹ ಪ್ರಕರಣ ದಾಖಲಿಸುವಂತೆ ಉತ್ತರ ಕನ್ನಡ ಜಿಲ್ಲೆಯ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಈ ಕುರಿತಂತೆ ಟ್ವಿಟರ್ ನಲ್ಲಿ ವಿಡಿಯೋ ಪ್ರತಿಕ್ರಿಯೆ ನೀಡಿರುವ ಅನಂತ್ ಕುಮಾರ್ ಹೆಗ್ಡೆ ಅವರು, 'ಬೆಂಗಳೂರಿನ ಫ್ರೀಡಂ ಪಾರ್ಕ್ ಬಳಿ ಸಿಎಎ ಹೋರಾಟ ಸಭೆಯಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿದ ಚಿಕ್ಕಮಗಳೂರು ಮೂಲದ ಅಮೂಲ್ಯ ಲಿಯೋನ ಜೊತೆಗೆ ವೇದಿಕೆ ಮೇಲಿರುವ ಎಲ್ಲರ ವಿರುದ್ಧ ದೇಶ ದ್ರೋಹದ ವಿರುದ್ಧ ಕೇಸು ದಾಖಲಿಸುವಂತೆ ಆಗ್ರಹಿಸಿದ್ದಾರೆ.
'ಎಡಪಂತೀಯ ವಿಚಾರ, ದೇಶದ್ರೋಹಿ ವಿಚಾರವಾಗಿ ಮಾರ್ಪಟ್ಟಿದೆ. ಸಿಎಎ ಹೋರಾಟ ದೇಶದ್ರೋಹಿ ಹೋರಾಟವಾಗಿ, ದೇಶದ್ರೋಹಿ ಚಟುವಟಿಕೆಯಾಗಿ ದೇಶ ವಿರೋಧಿ ಮತ್ತು ಹಿಂದೂ ವಿರೋಧಿ ಹೋರಾಟವಾಗಿ ಮಾರ್ಪಟ್ಟಿದೆ. ಹೀಗಾಗಿ ವೇದಿಕೆ ಮೇಲಿದ್ದ ಎಲ್ಲರ ಮೇಲೆ ದೇಶದ್ರೋಹದ ಕೇಸು ದಾಖಲಿಸಬೇಕು. ದೇಶದ್ರೋಹಿಗಳನ್ನು ತಕ್ಷಣ ಬಂಧಿಸಬೇಕು. ಸಿಎಎ ಪ್ರತಿಭಟನೆ ದೇಶದ್ರೋಹಿಗಳ ಆಡಂಬರ ಆಗಬಾರದು. ಎಲ್ಲರನ್ನೂ ದೇಶದ್ರೋಹದ ಪ್ರಕರಣದಲ್ಲಿ ಬಂಧಿಸಬೇಕು ಎಂದು ಅನಂತ್ ಕುಮಾರ್ ಹೆಗ್ಡೆ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ