ಬೆಂಗಳೂರು: ಸ್ನೇಹಿತೆಯ ಖಾಸಗಿ ವಿಡಿಯೋ ಚಿತ್ರೀಕರಿಸಿ ಹಣಕ್ಕೆ ಬೇಡಿಕೆಯಿಟ್ಟು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪಿಯನ್ನು ಕೃಷ್ಣರಾಜಪುರ ಪೊಲೀಸರು ಬಂಧಿಸಿದ್ದಾರೆ. ಮಧ್ಯಪ್ರದೇಶ ಮೂಲದ ದೀಪಕ್ ಕುಮಾರ್ ಬಂಧಿತ ಆರೋಪಿ.
ಸಂತ್ರಸ್ತ ಯುವತಿ ನಗರದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಇತ್ತೀಚಿಗೆ ಆರೋಪಿಯೊಂದಿಗೆ ಕಾರ್ಯಕ್ರಮವೊಂದಕ್ಕೆ ತೆರಳಿದ್ದಳು. ಕಾರ್ಯಕ್ರಮ ಮುಗಿದ ಬಳಿಕ ಇಬ್ಬರೂ ದೀಪಕ್ ರೂಂಗೆ ತೆರಳಿದ್ದಾರೆ. ಅಲ್ಲಿ ಸಂತ್ರಸ್ತೆ ಸ್ನಾನ ಮಾಡುವ ವಿಡಿಯೋವನ್ನು ಆರೋಪಿ ಚಿತ್ರೀಕರಿಸಿದ್ದಾನೆ ಎನ್ನಲಾಗಿದೆ.
ಈ ಘಟನೆ ಬಳಿಕ ಆರೋಪಿ ರೂಂ ಖಾಲಿ ಮಾಡಿಕೊಂಡು ತನ್ನ ಊರಿಗೆ ತೆರಳಿದ್ದ. ಅಲ್ಲಿಂದ ಹೊಸ ಇ-ಮೇಲ್ ಐಡಿ ಕ್ರಿಯೇಟ್ ಮಾಡಿ ಯುವತಿಗೆ ವಿಡಿಯೋ ಕಳುಹಿಸಿದ್ದ. ಅಲ್ಲದೇ ₹3 ಲಕ್ಷ ಹಣ ಕೊಡು ಇಲ್ಲವಾದರೆ ವಿಡಿಯೋವನ್ನು ಸೋಷಿಯಲ್ ಮಿಡೀಯಾದಲ್ಲಿ ಅಪ್ ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
ಈ ವಿಚಾರವಾಗಿ ಸಂತ್ರಸ್ತೆ ಜನವರಿ 13ರಂದು ಕೃಷ್ಣರಾಜಪುರ ಠಾಣೆಗೆ ತೆರಳಿ ದೂರು ನೀಡಿದ್ದಳು. ಕಲಂ 354(ಸಿ), 509, 506 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
Advertisement