ಅತ್ತಿಬೆಲೆ ಟೋಲ್ ಸಿಬ್ಬಂದಿಯಿಂದ ಟೆಂಪೋ ಚಾಲಕನ ಮೇಲೆ ರಾಡ್, ದೊಣ್ಣೆಯಿಂದ ಮಾರಣಾಂತಿಕ ಹಲ್ಲೆ!
ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ ಟೋಲ್‌ನಲ್ಲಿ ಫಾಸ್ಟ್ ಟ್ಯಾಗ್ ಸ್ಕ್ಯಾನ್ ಮಾಡಿದರೂ ರೀಡ್ ಆಗದ ಕಾರಣ ಕ್ರಮಿಸುವಾಗ ಆದ ವಿಳಂಬದಿಂದಾಗಿ ಮಾತಿಗೆ ಮಾತು ಬೆರೆತು ಟೆಂಪೋ ಚಾಲಕನ ಮೇಲೆ ಹಲ್ಲೆ ನಡೆಸಿ ನಿಂದಿಸಿದ ಘಟನೆ ಅತ್ತಿಬೆಲೆ ಟೋಲ್‌ನಲ್ಲಿ ಸಂಭವಿಸಿದೆ.
ಟೆಂಪೋ ಚಾಲಕ ಜಗದೀಶ್ ಎಂಬುವವರು ಸಿಬ್ಬಂದಿಯ ಹಲ್ಲೆಗೆ ಒಳಗಾಗಿದ್ದು ಸ್ಥಳಕ್ಕೆ ಬಂದ ಪೊಲೀಸ್ ಪೇದೆ ಸಹ ವಿಚಾರ ವಿನಿಯಮಯ ಮಾಡದೇ ಚಾಲಕನನ್ನು ಥಳಿಸಿರುವುದಾಗಿ ಜಗದೀಶ್ ದೂರು ನೀಡಿದ್ದಾರೆ. ಎಂದಿನಂತೆ ಜಗದೀಶ್ ತನ್ನ ಏಸ್ ಗಾಡಿಯಲ್ಲಿ ಅತ್ತಿಬೆಲೆ ಕಡೆಯಿಂದ ಹೊಸೂರಿಗೆ ತೆರಳುವಾಗಿ ಫಾಸ್ಟ್ ಟ್ಯಾಗ್ ಕಾರ್ಡ್‌ಅನ್ನು ಸ್ವೈಫ್(ಉಜ್ಜಲು) ನೀಡಿದ್ದಾನೆ. ಒಂದಲ್ಲ ಎರಡು ಬಾರಿ ಸ್ಕ್ಯಾನ್ ಮಾಡಿದರೂ ರೀಡ್ ಆಗದ ಕಾರಣ ನಿಮ್ಮಲ್ಲಿ ಸಾಕಷ್ಟು ಹಣವಿಲ್ಲವಾದ್ದರಿಂದ ನಗದು ನೀಡಿ ತೆರಳಿ ಎಂದು ತಿಳಿಸಿದ್ದಾರೆ.
ಸಾಕಷ್ಟು ಹಣ ಟ್ಯಾಗ್‌ನಲ್ಲಿದೆ ನಗದು ನನ್ನಲ್ಲಿಲ್ಲ. ಸ್ಕ್ಯಾನ್‌ನಲ್ಲಿ ತಾಂತ್ರಿಕ ದೋಷವಿರಬಹುದು ಎಂದಾಗ ಮಾತಿಗೆ ಮಾತು ಬೆಳೆದಿದೆ. ಆಗ ಅಲ್ಲಿನ ಮಹಿಳಾ ಸಿಬ್ಬಂದಿ ಜೋರಾಗಿ ಮಾತನಾಡಿದ್ದರಿಂದ ಇದನ್ನು ವೀಡಿಯೋ ಮಾಡಲು ಮುಂದಾದಾಗ ಜಗದೀಶ್ ಕಪಾಳಕ್ಕೆ ಬಾರಿಸಿದ್ದಾರೆ.
ಆಗ ಅಲ್ಲಿನ ಸಿಬ್ಬಂದಿ ನಾಲ್ಕೈದು ಜನ ಸೇರಿ ಜಗದೀಶ್ ಮೇಲೆ ಮನಸೋ ಇಚ್ಛೆ ಥಳಿಸಿದ್ದಾರೆ. ಸಾಲದ್ದಕ್ಕೆ ಟೋಲ್ ಪ್ಲಾಸಾದಿಂದ ಕಛೇರಿಗೆ ಎಳೆತಂದು ಹಲ್ಲೆ ಮುಂದುವರಿಸಿದ್ದಾರೆ. ರಕ್ಷಣೆ ಕೋರಿ ಜಗದೀಶ್ ಅತ್ತಿಬೆಲೆ ಪೊಲೀಸರಿಗೆ ಕರೆ ಮಾಡಿದಾಗ ಸ್ಥಳಕ್ಕೆ ಬಂದ ಪಿಸಿ ಮಧು ವಿಚಾರ ಮಾಡದೇ ಚಾಲಕನ ಮೇಲೆ ಹಲ್ಲೆ ಮಾಡಿದ್ದು ವೀಡಿಯೋ ವೈರಲ್ ಆಗಿದೆ.
ಆಗ ಟೆಂಪೋ ಮಾಲೀಕರ ಸಂಘದ ಪದಾಧದಿಕಾರಿಗಳ ಬಂದು ನ್ಯಾಯ ಕೋರಿ ಠಾಣೆ ಮುಂದೆ ಜಮಾಯಿಸಿದರು. ಸ್ಥಳೀಯ ಅತ್ತಿಬೆಲೆ ಟೆಂಪೋ ಚಾಲಕರು ಸಾಥ್ ನೀಡಿದರು. ಅತ್ತಿಬೆಲೆಯಲ್ಲಿ ಪ್ರಕರಣ ದಾಖಲಾಗಿದೆ ಈ ಸಂಬಂಧ ಟೋಲ್ ನ 9 ಮಂದಿ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ