ಬೆಂಗಳೂರಲ್ಲೇ ಫಿಲ್ಮ್‌ ಸಿಟಿ, ರೋರಿಚ್ ಎಸ್ಟೇಟ್‌ನಲ್ಲಿ ಆರ್ಟ್‌- ಕ್ರಾಫ್ಟ್‌ ವಿಲೇಜ್‌: ಡಾ. ಸಿಎನ್‌ ಅಶ್ವತ್ಥನಾರಾಯಣ

 ಬೆಂಗಳೂರಿನಲ್ಲೇ ಉತ್ಕೃಷ್ಟ ಮಟ್ಟದ ಫಿಲ್ಮ್‌ ಸಿಟಿ ಸ್ಥಾಪನೆಗೆ ಸ್ಥಳ ಗುರುತಿಸಲಾಗಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜತೆ ಚರ್ಚಿಸಿದ ಬಳಿಕ ಸ್ಥಳ ಅಂತಿಮಗೊಳಿಸಲಾಗುವುದುಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್‌ ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಸಿ.ಎನ್. ಅಶ್ವತ್ ನಾರಾಯಣ
ಸಿ.ಎನ್. ಅಶ್ವತ್ ನಾರಾಯಣ
Updated on

ಬೆಂಗಳೂರು:  ಬೆಂಗಳೂರಿನಲ್ಲೇ ಉತ್ಕೃಷ್ಟ ಮಟ್ಟದ ಫಿಲ್ಮ್‌ ಸಿಟಿ ಸ್ಥಾಪನೆಗೆ ಸ್ಥಳ ಗುರುತಿಸಲಾಗಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜತೆ ಚರ್ಚಿಸಿದ ಬಳಿಕ ಸ್ಥಳ ಅಂತಿಮಗೊಳಿಸಲಾಗುವುದುಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್‌ ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಸಭೆ, ಫಿಲ್ಮ್‌ ಸಿಟಿ, ರೋರಿಚ್‌ ಆರ್ಟ್‌ ಅಂಡ್‌ ಕ್ರಾಫ್ಟ್‌ ಮ್ಯೂಸಿಯಂ ಸ್ಥಾಪನೆ ಕುರಿತ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬೆಂಗಳೂರಿನಲ್ಲಿ ಫಿಲ್ಮ್ ಸಿಟಿ ಸ್ಥಾಪಿಸಲು ಜಾಗ ಗುರುತು ಮಾಡಲಾಗಿದೆ. ಮುಖ್ಯಮಂತ್ರಿಗಳ ಜತೆ ಈ ವಿಷಯ ಚರ್ಚಿಸಿ ಅವರ ಅನುಮೋದನೆ ಬಳಿಕ ಕಾಮಗಾರಿ ಆರಂಭಿಸಲಾಗುವುದು ಎಂದರು.  

ದೇಶ, ವಿದೇಶಗಳ ಹಲವು ಪ್ರಮುಖ  ಫಿಲ್ಮ್‌ ಸಿಟಿಗಳನ್ನು ನೋಡಿದ್ದು, ಅವೆಲ್ಲಕ್ಕಿಂತ ವಿಭಿನ್ನ ಹಾಗೂ ವಿಶಿಷ್ಟವಾದ ಫಿಲ್ಮ್‌ ಸಿಟಿ ಸ್ಥಾಪಿಸುವುದು ನಮ್ಮ ಸರ್ಕಾರದ ಕನಸಾಗಿದೆ.  ಅನಿಮೇಷನ್‌ ಕೇಂದ್ರ, ಚಿತ್ರ ನಿರ್ಮಾಣ ಹಾಗೂ ನಿರ್ಮಾಣ ನಂತರದ ಚಟುವಟಿಕೆಗಳಿಗೆ   ಅನುಕೂಲವಾಗುವಂತಹ ಫಿಲ್ಮ್‌ ಸಿಟಿ ಸ್ಥಾಪಿಸಬೇಕು. ಪ್ರವಾಸೋದ್ಯಮಕ್ಕೂ ಪೂರಕವಾಗಿರುವ ಈ ಫಿಲ್ಮ್‌ ಸಿಟಿ ಹೇಗಿರಬೇಕು, ಅದರ ವಿಸ್ತೀರ್ಣ ಎಷ್ಟಿರಬೇಕು ಎಂಬ ಬಗ್ಗೆ ಚರ್ಚೆ ನಡೆದಿದ್ದು, ಶೀಘ್ರದಲ್ಲೇ ಈ ಬಗ್ಗೆ ಪೂರ್ಣ ಮಾಹಿತಿ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದರು. 

ಮೈಸೂರಿನಲ್ಲಿ ಫಿಲ್ಮ್‌ ಸಿಟಿ ಏಕಿಲ್ಲ ಎಂಬ ಪ್ರಶ್ನೆಗೆ ಸ್ಪಷ್ಟನೆ ನೀಡಿದ ಸಚಿವರು, ಬೆಂಗಳೂರು ನಗರ ವಿಶ್ವಕ್ಕೆ ಅನಿಮೇಷನ್ ಕೊಟ್ಟಿದೆ. 'ಲಯನ್‌ ಕಿಂಗ್‌', 'ಅವತಾರ್‌' ನಂತಹ ಚಿತ್ರಗಳ ಅನಿಮೇಷನ್‌ ಬೆಂಗಳೂರಿನಲ್ಲೇ ಆಗಿವೆ. ಯಾವುದೋ ಒಂದೆರೆಡು ವಿಷಯಕ್ಕೆ ಸೀಮಿತವಾಗಿರದೇ ಎಲ್ಲವನ್ನು ಒಳಗೊಂಡ  ಅತ್ಯುತ್ತಮ ಫಿಲ್ಮ್‌ ಸಿಟಿ ನಿರ್ಮಾಣ ಆಗಬೇಕು ಎಂಬುದಷ್ಟೇ ನಮ್ಮ ಗುರಿ ಎಂದರು.  

ದೇವಿಕಾರಾಣಿ ಮತ್ತು ರೋರಿಚ್‌ ಎಸ್ಟೇಟ್‌ ಸಿನಿಮಾ, ಕಲೆ, ಸಂಸ್ಕೃತಿ,  ಅಧ್ಯಾತ್ಮ,  ಪ್ರಕೃತಿ ಸೌಂದರ್ಯ ಒಳಗೊಂಡ ಅದ್ಭುತ ತಾಣವಾಗಿದೆ. ಹಾಗಾಗಿ ಅಲ್ಲಿಯೇ ಆರ್ಟ್‌ ಅಂಡ್‌ ಕ್ರಾಫ್ಟ್‌ ವಿಲೇಜ್‌ ಸ್ಥಾಪಿಸುವ ನಿರ್ಧಾರ ಮಾಡಲಾಗಿದೆ. ರೋರಿಚ್ ಎಸ್ಟೇಟ್‌ ಅನ್ನು ಇಡೀ ದೇಶವೇ ಹೆಮ್ಮೆಪಡುವಂಥ ಸಾಂಸ್ಕೃತಿಕ ತಾಣವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಅವರು ವಿವರಿಸಿದರು.

ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಸಭೆ ನಡೆದಿದ್ದು, ಈ ಸಂದರ್ಭದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಡಪ್ರಭುವಿನ 80 ಅಡಿ ಎತ್ತರದ ಪ್ರತಿಮೆ ಹಾಗೂ  ಕೆಂಪೇಗೌಡರು ಅಂದು ಅಭಿವೃದ್ಧಿಪಡಿಸಿದ್ದ 46 ತಾಣಗಳ ಉಳಿಸಿ ಅವುಗಳ ಪುನರುಜ್ಜೀವನ ಮಾಡುವ ಸಂಬಂಧ ವಿಸ್ತೃತ ಚರ್ಚೆ ನಡೆಸಲಾಗಿದೆ.  ಈ ಎಲ್ಲ 46 ತಾಣಗಳಿಗೆ ಜನ ಭೇಟಿ ಕೊಟ್ಟು, ಅದರ ಮಹತ್ವ ಅರಿಯುವ ಜತೆಗೆ ಈ ನಾಡಿಗೆ ಕೆಂಪೇಗೌಡರ ಕೊಡುಗೆಗಳ ಬಗ್ಗೆಯೂ ತಿಳಿಯಬೇಕು ಎಂಬುದು ನಮ್ಮ ಸರ್ಕಾರದ ಆಶಯ," ಎಂದು ಡಾ. ಅಶ್ವತ್ಥನಾರಾಯಣ ಹೇಳಿದರು. 

ಕೆಂಪೇಗೌಡರ ಹೆಸರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ 23 ಎಕರೆ ಥೀಮ್‌ ಪಾರ್ಕ್‌ ಅಭಿವೃದ್ಧಿಪಡಿಸಲಾಗುವುದು. ಅದೇ ಉದ್ಯಾನದಲ್ಲಿ ಕೆಂಪೇಗೌಡರ 80 ಅಡಿಯ  ಪ್ರತಿಮೆ ಸ್ಥಾಪನೆಗೆ ಜಾಗ ನಿಗದಿ ಮಾಡಲಾಗಿದೆ.  ಸಭೆಯಲ್ಲಿ ಪಾಲ್ಗೊಂಡ ಹೆಸರಾಂತ ಕಂಪನಿಗಳ ಜತೆ ಪ್ರತಿಮೆ, ವಿನ್ಯಾಸ, ಪರಿಕಲ್ಪನೆ ಕುರಿತು ಚರ್ಚಿಸಲಾಗಿದೆ. ಜತೆಗೆ, 46 ತಾಣಗಳಲ್ಲಿ ಏನೆಲ್ಲ ಕೆಲಸಗಳಾಗಬೇಕು ಎಂಬ ಬಗ್ಗೆಯೂ ಯೋಜನೆ ಸಿದ್ಧವಾಗಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com